ಹೊರಾಂಗಣ. ಸಮುದ್ರ - ನಸುಬೆಳಗು
ಸಮುದ್ರದಲ್ಲಿ ನೀರು ಹೊಳೆಯುತ್ತಿದೆ. ಇನ್ನೂ ಮುಂಜಾವಿನ ಸಮಯ. ಅನೇಕ ದೋಣಿಗಳು ನಸುಬೆಳಕಿನಲ್ಲೇ ಕಡಲಿನತ್ತ ಹೊರಟಿವೆ. ಈಗ ಫ್ರೇಮಿಗೆ ಮಾಧವ ಹಾಗೂ ಅವನ ಸಹಚರರ ದೋಣಿ ಪ್ರವೇಶಿಸುತ್ತದೆ. ದೋಣಿಯಲ್ಲಿ ಎಲ್ಲರೂ ವಿಭಿನ್ನ ಜವಾಬ್ದಾರಿಗಳನ್ನು ಹೊತ್ತು ನಿಂತಿದ್ದಾರೆ. ಎಲ್ಲರೂ ಮಗ್ನರಾಗಿ ಸಮುದ್ರವನ್ನೇ ದಿಟ್ಟಿಸುತ್ತಿದ್ದಾರೆ. ಮಾಧವ ಸಮುದ್ರದ ನೀರನ್ನೇ ದಿಟ್ಟಿಸಿ ನೋಡುತ್ತಿದ್ದಾನೆ. ಕೆಲವು ಸಮುದ್ರ ಕಾಗೆಗಳು ದೋಣಿಯನ್ನೇ ಸುತ್ತುತ್ತಿವೆ. ಬನ್ನಂಜೆ ಬೋಟ್ ಸ್ಟೇರಿಂಗ್ ಹಿಡಿದು ನಿಂತಿದ್ದಾನೆ. ಅವನು ಮಾಧವನನ್ನೇ ನೋಡುತ್ತಿದ್ದಾನೆ. ಮಾಧವ ನಿಂತಲ್ಲಿಂದ ಹಿಂದೆ ತಿರುಗಿ ಬನ್ನಂಜೆಯನ್ನು ನೋಡುತ್ತಾನೆ. ಬನ್ನಂಜೆಯ ಮುಖದಲ್ಲಿ ಸಂತೋಷದ ನಗು ಅರಳುತ್ತದೆ. ಮಾಧವ ಸಮುದ್ರದಲ್ಲಿ ಒಂದು ದಿಕ್ಕಿನತ್ತ ಕೈತೋರಿಸುತ್ತಾನೆ. ಬನ್ನಂಜೆ ದೋಣಿಯನ್ನು ಆ ಕಡೆಗೆ ತಿರುಗಿಸುತ್ತಾನೆ. ಮೋಡದಲ್ಲಿ ಒಂದು ಭೀಕರ ಸಿಡಿಲು ಕಾಣಿಸುತ್ತದೆ. ದೋಣಿಗೆ ಬಡಿಯುತ್ತಿರುವ ನೀರಿನ ಅಲೆಗಳು, ಪಾಡ್ದನದ ಕ್ರಮ ಬದ್ಧ ಸದ್ದಿನೊಂದಿಗೆ ಸೇರಿಕೊಳ್ಳುತ್ತದೆ. ಬೋಟಿನ ಡಿಸಿಲ್ ಮೋಟಾರ್ ಶಬ್ದವೂ ಇದೇ ರಿದಮಿಗೆ ಸೇರಿಕೊಳ್ಳುತ್ತದೆ. ಮೀನುಗಾರರ ಶ್ರಮ, ಸಾಹಸಗಳನ್ನು ತೋರಿಸುವಂತಿರಬೇಕು ಈ ಚಿತ್ರಣ.
ಹೊರಾಂಗಣ. ಭೂತಕೋಲ ನಡೆಯುತ್ತಿರುವ ಸ್ಥಳ - ರಾತ್ರಿ
ಇತ್ತ ಭೂತ ಕೋಲ ನಡೆಯುತ್ತಿದೆ. ಭೂತ ಪಾತ್ರಧಾರಿ ಕುಣಿಯುತ್ತಿದ್ದಾನೆ. (ಹಿಂದಿನ ದೃಶ್ಯದೊಟ್ಟಿಗೆ ಇಂಟರ್ ಕಟ್ ಮಾಡಬಹುದು.) ಭೂತ ಕೋಲದ ಸ್ಥಳದಲ್ಲಿ ದಿನೇಶಣ್ಣ ಮತ್ತಿತರರನ್ನು ಕಾಣುತ್ತೇವೆ. ಮಿಂಚು-ಗುಡುಗುಗಳು, ಮೀನುಗಾರರ ಸ್ಲೋಮೋಷನ್ ಶಾಟ್ಸ್, ಭೂತದ ನೃತ್ಯ ಇವೆಲ್ಲವುಗಳ ಒಂದು ಮೊಂಟಾಜ್ ಮೂಲಕ ರುದ್ರ ಭಾವವನ್ನು ರೂಪಿಸುತ್ತಾ, ಈ ಸೀಕ್ವೆನ್ಸ್ ಮುಗಿಯುತ್ತದೆ. ಕೊನೆಯಲ್ಲಿ ಚಿತ್ರದ ಶೀರ್ಷಿಕೆ ಕಾಣಿಸಿಕೊಳ್ಳುತ್ತದೆ.
ಒಳಾಂಗಣ. ಮಂಗಳೂರಿನ ಯಾವುದೋ ಮಾಲ್ - ರಾತ್ರಿ
ಮಾಲ್ ಆವರಣದಲ್ಲಿ ಜನರು ಅತ್ತಿತ್ತ ಅಡ್ಡಾಡುತ್ತಿದ್ದಾರೆ. ಅದರ ಮಧ್ಯದಲ್ಲಿ ರಾಕೇಶ ಹಾಗೂ ಮಂಜೇಶ ಅಡ್ಡಾಡುತ್ತಿದ್ದಾರೆ. ಅವರು ಯಾರನ್ನೋ ಹುಡುಕುತ್ತಾ, ತುಸು ಆತಂಕದಿಂದಿದ್ದಾರೆ. ಆಗ ಸ್ವಲ್ಪ ದೂರದಿಂದ ಒಬ್ಬ ಜನರ ಗುಂಪಿನ ಮಧ್ಯದಿಂದಲೇ ನಡೆದುಕೊಂಡು ಬರುತ್ತಾನೆ. ಅವನು ದೂರದಿಂದಲೇ ರಾಕೇಶನನ್ನು ನೋಡಿ, ಕೈ ಎತ್ತಿ ಸಂಜ್ಞೆ ಮಾಡುತ್ತಾನೆ. ಅವರೆಲ್ಲರೂ ಜೊತೆ ಸೇರುತ್ತಾರೆ.
ಒಳಾಂಗಣ. ಯಾವುದೋ ಹೋಟೇಲ್ - ರಾತ್ರಿ
ಹೋಟೇಲಿನಲ್ಲಿ ರಾಕೇಶ, ಮಂಜೇಶ ಹಾಗೂ ಸಂದೀಪ ಕುಳಿತಿದ್ದಾರೆ. ಅವರೆದುರು ಪಿಝ್ಝಾ ಬಾಕ್ಸ್ ಇದೆ. ಸಂದೀಪ ಫೋನಲ್ಲಿ ಯಾರೊಡನೆಯೋ ಮಾತನಾಡುತ್ತಿದ್ದಾನೆ. ಜೊತೆಗೆ ರಾಕೇಶ್ ಹಾಗೂ ಮಂಜೇಶನೊಡನೆಯೂ ವ್ಯವಹರಿಸುತ್ತಾನೆ.
ಸಂದೀಪ
ಕೋರ್ಟಿಗೆ ಬಂದ ಎಷ್ಟೋ ಜನರನ್ನು ಕಳ್ಸಿದ್ದೇನೆ ನಾನು ದುಬೈಗೆ. (ರಾಕೇಶನತ್ತ ತಿರುಗಿ) ಹೇಳಿ ಹೇಳಿ..
ರಾಕೇಶ ಮಂಜೇಶನ ಮುಖ ನೋಡುತ್ತಾನೆ. ಅವನು ಭಾರೀ ಟೆನ್ಶನ್ನಿನಲ್ಲಿದ್ದಾನೆ.
ಮಂಜೇಶ
(ಸ್ವಲ್ಪ ಹಿಂಜರಿಯುತ್ತಲೇ)
ಆದ್ರೆ... ಹತ್ತು ಲಕ್ಷ ಸ್ವಲ್ಪ ಜಾಸ್ತಿ ಆಯ್ತು ಇವರೇ...
ಸಂದೀಪ
ಎಂತ..?!
ಮಂಜೇಶ
ಅದೇ... ಹತ್ತು ಲಕ್ಷ ಸ್ವಲ್ಪ ಕಷ್ಟ..
ಸಂದೀಪ
ನಿನ್ನ ಹೆಸರೆಂತ ಅಣ್ಣ...?
ಮಂಜೇಶ
ಮಂಜೇಶ
ಸಂದೀಪ
ಮಂಜೇಶರೇ... ನೀವು ಹೋಗ್ತಿರೋದು ದುಬೈಗೆ. ಪಣಂಬೂರಿಗಲ್ಲ. (ಮಂಗಳೂರಿನ ಬಳಿಯ ಒಂದು ಜಾಗ) ಹಣಕ್ಕೆ ಏನೂ ತೊಂದ್ರೆ ಇಲ್ಲ ಅಂತ ರಾಕೇಶ ಹೇಳಿದ್ದಕ್ಕೆ ನಾನು ನಿಮ್ಮ ಬಳಿ ಮಾತನಾಡಲು ಬಂದದ್ದು. ಈಗ ನೋಡಿದ್ರೆ... ನೀವು ಚೌಕಾಸಿ ಮಾಡುತ್ತಿದ್ದೀರಲ್ಲಾ?!
ಮಂಜೇಶ
ದುಡ್ಡಿನ ತೊಂದ್ರೆ ಇಲ್ಲದೇ ಇರೋದು ನನ್ನ ತಂದೆಗೆ. ಆದರೆ, ಈ ವಿಚಾರ ಅವರಿಗೆ ಗೊತ್ತಿಲ್ಲ!
ರಾಕೇಶ
ಓ ಸಂದೀಪಣ್ಣ.. ನೀಮ್ಮದೆಂತ! ಇವನು ನಮ್ಮ ಫ್ರೆಂಡ್. ಸ್ವಲ್ಪ ಕಮ್ಮಿ ಮಾಡಿ... ನಮಿಗೆ ಬೇಕಾದ ಪಾರ್ಟಿ. ಸ್ವಲ್ಪ ಕಮ್ಮಿ ಮಾಡಿ... ತೆಕ್ಕೊಳ್ಳಿ ನೋಡಿ... ಏ ತೆಕ್ಕೊಳ್ಳಿಯಪ್ಪಾ.. (ವೀಸಾಕ್ಕೆ ಬೇಕಾದ ಕಾಗದ ಪತ್ರಗಳನ್ನು ಕೊಡುತ್ತಾನೆ)
ಸಂದೀಪ ಇವರ ಮುಖ ನೋಡಿ ನಿಟ್ಟುಸಿರಿಡುತ್ತಾನೆ. ಏನು ಮಾಡಲಿ ಎಂದು ನಿರ್ಧರಿಸುವಂತಿರುತ್ತದೆ ಅವನ ಮುಖಭಾವ.
ಹೊರಾಂಗಣ. ಹಳ್ಳಿಯ ಕಟ್ಟೆ - ಬೆಳಗ್ಗೆ
ಐತ ಕಳಿ ತೆಗೆಯಲು ಮರ ಹತ್ತುವ ಮೂಲಕ ದೃಶ್ಯ ಆರಂಭವಾಗುತ್ತದೆ.
ಮೊಗವೀರರ ಹಳ್ಳಿಯೊಂದರಲ್ಲಿ ನಿಧಾನಕ್ಕೆ ಬೆಳಗಾಗುತ್ತಿರುವುದನ್ನು ಕಾಣುತ್ತೇವೆ. ಹಿಂದಿನ ರಾತ್ರಿ ಮಳೆ ಬಂದ ಸೂಚನೆಗಳು ಕಾಣಿಸುತ್ತಿವೆ. ಅಲ್ಲಿನ ಜನರು ಅವರ ಕೆಲಸಕಾರ್ಯಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಸಣ್ಣವಯಸ್ಸಿನ, ನಡುವಯಸ್ಸಿನ ಗಂಡಸರ್ಯಾರೂ ಅಲ್ಲಿ ಇಲ್ಲ. ವೃದ್ಧರು, ಹೆಂಗಸರು, ಮಕ್ಕಳು ಮಾತ್ರವೇ ಕಾಣಿಸಿಕೊಳ್ಳುತ್ತಿದ್ದಾರೆ.
ಮಂಜೇಶ, ರಾಕೇಶ ಹಾಗೂ ಸಂಜೀವ ಅಂಗಡಿಯಲ್ಲಿ ಕುಳಿತಿದ್ದಾರೆ. ಸಂಜೀವ ಬೀಡಿ ಸೇದುತ್ತಿದ್ದಾನೆ.
ಸಂಜೀವ
ನೀನು ಎಲ್.ಎಲ್.ಬಿ ಅರ್ಧಕ್ಕೆ ನಿಲ್ಸಿದ್ರೂ ಲಾ ಪಾಯಿಂಟ್ ಹಾಕೋದರಲ್ಲಿ ಏನೂ ಕಮ್ಮಿ ಇಲ್ಲ!
ರಾಕೇಶ
ನೀನು ಒಂದು ಸಲ ನನ್ನೊಟ್ಟಿಗೆ ಕೋರ್ಟಿಗೆ ಬಂದು ನೋಡು, ಬರೀ ಒಂದು ವಾರದಲ್ಲಿ ನಾನು ಏನು ಅಂತ ಗೊತ್ತಾಗ್ತದೆ. ಇದಕ್ಕೆಲ್ಲಾ ಸುಮ್ಮನೆ ಯಾಕೆ ಕಾಲೇಜಿಗೆ ಹೋಗ್ಬೇಕು, ಮಣ್ಣು ಹೊರ್ಲಿಕ್ಕೆ..!
ರಾಕೇಶ
ಈ ಸುಗಂಧಿಯನ್ನು ನೋಡಿದ್ರೆ ಒಂಥರಾ ಆಗ್ತದಪ್ಪ... ಮಾಧವನ ಲಕ್. ಅಲ್ಲ, ಈ ಹುಡುಗಿ, ಆ ಮಾಧವನಿಗೆ ಹೇಗೆ ಸಿಕ್ಕಿದ್ಲೂಂತ?!
ಮಂಜೇಶ
ಯಾಕೆ? ಮಾಧವನಿಗೆಂತ ಕಮ್ಮಿ?
ಸಂಜೀವ
(ನಗುತ್ತಾ)
ಹೌದೌದು.. ನಿನ್ನ ತಂದೆ ಮುಂದೆ ನಿಂತು ಮದುವೆ ಮಾಡ್ಸಿರದಿದ್ರೆ....
ಮಂಜೇಶ
ಒಂದ್ಸರ್ತಿ ನಿಲ್ಸಿಯಪ್ಪ.. ಏ ರಾಕೇಶ, ನಿನ್ನ ಫ್ರೆಂಡಿಗೆ ಒಮ್ಮೆ ಕಾಲ್ ಮಾಡಿ ನನ್ನ ವೀಸಾ ಯಾವಾಗ ಸಿಗ್ತದೆ ಅಂತ ಕೇಳು.
ರಾಕೇಶ
ಎಂತಾ ಅವಸರ ಮಾರಾಯ ನಿಂಗೆ! ನಿನ್ನೆ ದುಡ್ಡು ಕೊಟ್ಟು, ಇವತ್ತು ವೀಸಾ ಕೊಡಿ ಅಂದ್ರೆ ಹೇಗೆ?! ಅವನು ಎಷ್ಟು ಪೇಪರ್ ರೆಡಿ ಮಾಡ್ಬೇಕು ಗೊತ್ತುಂಟಾ? ಸುಮ್ಮನೆ ಕಿರಿಕಿರಿ ಮಾಡಬೇಡ. ಇದೆಲ್ಲ ಬಿಟ್ಟು, ಅಕಾ ಅವಳನ್ನು ನೋಡು. ಬೇರೆ ಏನಾದರೂ ಹೊಸ ಕನಸು ಕಾಣು..
ಹೊರಾಂಗಣ. ದೋಣಿ ರಿಪೇರಿ ಮಾಡುವ ಸ್ಥಳ - ಹಗಲು
ದಿನೇಶಣ್ಣ ಬೋಟುಗಳನ್ನು ಮಾಡಿಸುವ ಸ್ಥಳದಲ್ಲಿದ್ದಾನೆ. ದೇವಪ್ಪಾಚಾರಿ ದೋಣಿಯ ಯಾವುದೋ ಭಾಗದಲ್ಲಿ ಕೆಲಸ ಮಾಡುತ್ತಿದ್ದಾನೆ.
ದೇವಪ್ಪ
ಒಂದು ಕೋಟಿ, ನಿಮ್ಗೆ ಯಾವ ಲೆಕ್ಕ ದಿನೇಶಣ್ಣಾ? ಎಲ್ಲರ ಹಾಗೇ ನೀವೂ ಒಂದು ಸ್ಟೀಲ್ ಬೋಟ್ ಹಾಕ್ಬಾರ್ದಾ?
ದಿನೇಶಣ್ಣ
ನಿನ್ನ ಕೈಯ್ಯಲ್ಲಿ ಆಗೂದಿಲ್ಲ ಅಂದ್ರೆ, ಹೇಳು. ನಾನು ನೀಲಪ್ಪನಿಗೆ ಹೇಳ್ತೇನೆ. ಸುಮ್ಮನೆ ದೂಸ್ರಾ ಮಾತಾಡ್ಬೇಡ.
ದೇವಪ್ಪ
ಅಯ್ಯೋ! ನಾನು ಹಾಗೆ ಹೇಳಿದ್ದಲ್ಲ ದಿನೇಶಣ್ಣ. ಈ ಮರದ ಬೋಟು ಪದೇ ಪದೇ ರಿಪೇರಿಗೆ ಬರ್ತದಲ್ಲ.. ಅದಿಕ್ಕೆ ಹೇಳಿದ್ದಷ್ಟೇ.
ಅಷ್ಟರಲ್ಲಿ ಅಲ್ಲಿಗೆ ಶಂಕರ ಬರುತ್ತಾನೆ. ಅವನು ಓಡೋಡಿ ಬರುತ್ತಾನೆ.
ಶಂಕರ
ಅಣ್ಣ.. ನೀವು ಇಲ್ಲಿದ್ದೀರಾ? ನಿಮಿಗೆ ಎಷ್ಟು ಫೋನ್ ಮಾಡ್ಲಿಕ್ಕೆ ನೋಡಿದೆ. ಸಿಗ್ಲೇ ಇಲ್ಲ.
(ದಿನೇಶಣ್ಣ ತನ್ನ ಫೋನ್ ನೋಡಿಕೊಳ್ಳುತ್ತಾನೆ.)
ದಿನೇಶಣ್ಣ
ಹೌದು ಮಾರಾಯ. ರೇಂಜ್ ಇಲ್ಲ. ಏನಾಯ್ತು? ಯಾಕೆ ಹೀಗೆ ದಮ್ಮು ಕಟ್ತಾ ಇರೂದು? ಬೋಟ್ ಬಂತಾ?
ಶಂಕರ
(ಸ್ವಲ್ಪ ಸುಧಾರಿಸಿಕೊಳ್ಳುತ್ತಾ)
ಹೌದು ಬಂತು. ಕಡಲಲ್ಲಿ ದೊಡ್ಡ ಗಲಾಟೆ ಆಯ್ತಂತೆ. ಉತ್ತರದ ಬೋಟುಗಳು ಪುನಾ ಬಂದಿದ್ದವಂತೆ, ನಾವು ಬಲೆ ಹಾಕಿದಲ್ಲೇ ಬಲೆ ಹಾಕಿದ್ರಂತೆ. ಮಾಧವ ಅವರ ಕೈ-ಕಾಲು ಮುರಿದು ಕಳಿಸಿದ್ದಾನೆ. ಈ ಸಲ ಬಿಡ್ಬಾರ್ದು ದಿನೇಶಣ್ಣ ಅವರನ್ನು...
ದಿನೇಶಣ್ಣ
ಛೇ! ದರಿದ್ರಗಳು!
(ದೇವಪ್ಪನ ಕಡೆಗೆ ತಿರುಗಿ)
ಸ್ಟೀಲಿನ ಬೋಟಿದ್ರೆ ಆಯ್ತಾ? ಮೀನಿನ ಗುಂಪು ಇರೋದು ಎಲ್ಲಿ ಅಂತ ಗೊತ್ತಾಗೋದು, ನಮ್ಮ ಮಾಧವನಿಗೇ ಅಲ್ವಾ? ಅದಿಕ್ಕೇ ಆ ಮೂರು ಕಾಸಿನವರು ನಮ್ಮ ಹಿಂದೆ ಬರೋದು! ನಮ್ಮ ಮಾಧವ ಬರೇ ಕಣ್ಣೋಟದಲ್ಲಿಯೇ, ಎಲ್ಲಿ, ಎಷ್ಟು ಮೀನು ಉಂಟೂಂತ ಹೇಳ್ತಾನೆ. ಅದಿಕ್ಕೇ ಅಲ್ವಾ ಅವನನ್ನು ಕಡಲಿನ ಗುಳಿಗ ಅಂತ ಕರಿಯೋದು!
ಹೊರಾಂಗಣ. ಮೀನುಗಾರಿಕಾ ಬಂದರು - ಹಗಲು
ದೋಣಿಗಳು ಬಂದರಿಗೆ ಬಂದಿದೆ. ಅಲ್ಲಿ ಮೀನುಗಳನ್ನು ದೋಣಿಯಿಂದ ಇಳಿಸಿಕೊಳ್ಳಲು ಶುರು ಮಾಡುತ್ತಾರೆ. ಆ ವಿವರಗಳನ್ನೂ ನಾವು ವಿವರವಾಗಿ ಕಾಣುತ್ತಾ ಸಾಗುತ್ತೇವೆ. ಅಲ್ಲಿ ಮೀನು ಹರಾಜುಹಾಕುವ ಕೆಲಸ ನಡೆಯುತ್ತಿರುತ್ತದೆ. ಅಲ್ಲಿಗೆ ಸುಗಂಧಿ ಬರುತ್ತಾಳೆ. ಸುಗಂಧಿ ಅಲ್ಲಿಗೆ ನಡೆದು ಬರುವುದನ್ನು ಮಾಧವ ನೋಡುತ್ತಾನೆ. ಮಾಧವ ಮತ್ತು ಸುಗಂಧಿಯ ನಡುವಿನ ಸರಸ ಸಲ್ಲಾಪ ನಡೆಯುತ್ತವೆ. ಸುಗಂಧಿ ಅಲ್ಲಿರುವ ಮೀನುಗಳನ್ನು ತನ್ನ ಬುಟ್ಟಿಗೆ ತುಂಬಿಸಿಕೊಳ್ಳುತ್ತಿದ್ದಾಳೆ. ಬನ್ನಂಜೆ ಹಾಗೂ ಇತರರು ಮಾಧವ-ಸುಗಂಧಿಯರ ಸರಸವನ್ನು ನೋಡಿ ಮುಸಿಮುಸಿ ನಗುತ್ತಿದ್ದಾರೆ. ಮಾಧವ ಅದನ್ನು ನೋಡಿ ಕಣ್ಣಲ್ಲೇ ಬೆದರಿಕೆ ಹಾಕುತ್ತಾನೆ. ಅವರೆಲ್ಲರೂ ಅವನನ್ನು ಹಾಗೇ ಛೇಡಿಸುತ್ತಾರೆ. ಮುಂದಿನ ಮಾತುಗಳು ಮಾಧವ ಹಾಗೂ ಇತರರ ಕಣ್ಣು ಸನ್ನೆಗಳ ಮಧ್ಯದಲ್ಲೇ ನಡೆಯುತ್ತದೆ. ಬನ್ನಂಜೆ ಇವೆಲ್ಲವನ್ನು ನೋಡಿ ನಸುನಗುತ್ತಾ ಸಂದರ್ಭವನ್ನು ಅನುಭವಿಸುತ್ತಿದ್ದಾನೆ.
ಸುಗಂಧಿ
ನಿಮ್ಗೆ ಸುಮ್ನಿರ್ಲಿಕ್ಕೆ ಆಗೋದಿಲ್ವಾ? ಅವ್ರಿಗೂ ಬುದ್ಧಿಯಿಲ್ಲ. ಸುಮ್ಮನೆ ನಿಮ್ಮ ಕೈಯಲ್ಲಿ ಪೆಟ್ಟು ತಿನ್ಲಿಕ್ಕೇ ಹೀಗೆ ಮಾಡ್ತಾರಾ ಏನೋ!
ಮಾಧವ
(ಸುಗಂಧಿಯನ್ನು ಓಲೈಸುವ ರೀತಿಯಲ್ಲಿ)
ಹೊಡೆದಾಟ ಮಾಡಿ ಮೈ ಕೈ ಎಲ್ಲಾ ನೋವು ಮಾರಾಯ್ತಿ...
ಸುಗಂಧಿ
(ನಾಚುತ್ತಲೇ)
ಆಮ್?! ಮೈ ಕೈ ನೋವು ಅಂದ್ರೆ ಹೇಗೆ? ಇವತ್ತು ರಾತ್ರಿಯ ಕಥೆ ಏನು? ಸುಮ್ಮನೆ ಮಲಗೋದಾ?
ಮಾಧವ ನಗುತ್ತಾನೆ. ಇದನ್ನೆಲ್ಲಾ ಬನ್ನಂಜೆ ತುಸು ದೂರದಿಂದ ನೋಡಿ ನಸು ನಗುತ್ತಿದ್ದಾನೆ.
ಮಾಧವ
ಯಾಕೆ? ಯಾಕೆ ಸುಮ್ಮನೇ ಮಲಗೋದು?! ರಾತ್ರಿಯ ತಾಕತ್ತು ಬೇರೆಯೇ ಆಯ್ತಾ... ಕಡಲಲ್ಲಿ ಇಳಿತ ಇದ್ರೂ, ಉಪ್ಪಿಗೆ ಕೊರತೆಯಾ?
ಸುಗಂಧಿ
ಛೀ.. ಎಂತ ಮಾತಾಡೂದು ನೀವು.. ನಾನು ಹೋಗ್ತೇನೆ ಹಾಗಾದ್ರೆ.. ಬೆಗ ಬನ್ನಿ..
ಮಾಧವ
ಲೋಡ್ ಖಾಲಿ ಮಾಡಿ ಬರ್ತೇನೆ.
ಸುಗಂಧಿ
ಓ.. ಎಷ್ಟು ಉಂಟು..!
ಮಾಧವ
ಫಿಶಿಂಗ್ ಮಸ್ತಾಯ್ತು ಇವತ್ತು..
ಸುಗಂಧಿ
ಹೌದಾ... ಆಯ್ತು ನಾನು ಹೋಗಿರ್ತೆನೆ ಬನ್ನಿ.. ಬಾಯ್.
ಮಾಧವ
ಜಾಗ್ರತೆ...
ಸುಗಂಧಿ ನಸುನಾಚಿಕೆಯಲ್ಲೇ ನಕ್ಕು ಮೀನಿನ ಬುಟ್ಟಿ ಹಿಡಿದುಕೊಂಡು ಹೊರಡುತ್ತಾಳೆ. ಬನ್ನಂಜೆ ಈಗ ಮಾಧವನ ಬಳಿಗೆ ಬರುತ್ತಾನೆ.
ಬನ್ನಂಜೆ
(ಛೇಡಿಸುವಂತೆ)
ನಿನ್ನ ಮೈ ಕೈ ನೋವಿಗೆ, ಐತಣ್ಣನ ಮದ್ದು ಸಾಕು. ಮೀನು ಇಳಿಸಿಯಾದ ಮೇಲೆ ಆ ಕಡೆ ಹೋಗಿ ಬರುವ. ಇನ್ನೂ ಹೊಸ್ತಲ್ಲ... ಸುರು ಸುರುವಿಗೆ ಹಾಗಾಗ್ತದೆ..
ಮಾಧವ
ಇದೆಲ್ಲಾ ನಿಮಗೆ ಬೇಗ ಕೇಳ್ತದೆ ಅಲ್ವಾ?
(ಮಾಧವ, ತನ್ನ ಮಾತು ಬನ್ನಂಜೆಗೆ ಕೇಳಿಸಿದ್ದರಿಂದ ಮುಜುಗರಪಡುತ್ತಾನೆ.)
ಒಳಾಂಗಣ. ಯಕ್ಷಗಾನ ಚೌಕಿ - ಸಂಜೆ
ಯಕ್ಷಗಾನ ವೇಷ ಕಟ್ಟುತ್ತಾ ಕೆಲವುಕಲಾವಿದರು ಕುಳಿತಿದ್ದಾರೆ. ಅವರು ಆಟಕ್ಕೆ ತಯಾರಾಗುತ್ತಿದ್ದಾರೆ. ಅಲ್ಲಿ ದಿನೇಶಣ್ಣ ಹೋಗುವುದು ಕಾಣುತ್ತದೆ. ಹುಡುಗನೊಬ್ಬ ಎಲ್ಲರಿಗೂ ಚಾ ತಂದಿದ್ದಾನೆ. ಅವನು ಒಬ್ಬೊಬ್ಬರ ಬಳಿಗೆ ಹೋಗಿ ಚಾ ಇಡುತ್ತಿದ್ದಾನೆ. ಕಲಾವಿದರು ಚಹಾ ಸೇವಿಸುತ್ತಾ, ಬಣ್ಣ ಮಾಡಿಕೊಳ್ಳುತ್ತಾ ಮಾತು ಮುಂದುವರೆಸಿದ್ದಾರೆ.
ಕಲಾವಿದ ೧
ಇವತ್ತೂ ದಿನೇಶಣ್ಣನ ಕಡೆಯಿಂದ ಆಟವಾ?
ಕಲಾವಿದ ೨
(ದಿನೇಶಣ್ಣನ ಕಡೆಗೆ ನೋಡಿ)
ಈ ವರ್ಷ ಇದು ನಾಲ್ಕನೇ ಆಟ. ಊರಿನ ಧನಿಕ ಅಂದ್ರೆ, ಹೀಗಿರಬೇಕು. ಎಂಥಾ ಗತ್ತು.. ಎಂಥಾ ಮರ್ಯಾದೆ!
ಕಲಾವಿದ ೩
ಎಂಥಾ ಗತ್ತು ಮಾರಾಯಾ! ಇವ್ರು ಆಟ ಆಡಿಸಿದ್ರಿಂದ ನಮಗೆ ಊಟ ಸಿಗೋದೇನೋ ಹೌದು. ಆದ್ರೆ, ಪ್ರಾಣ ಒತ್ತೆ ಇಟ್ಟು ಮಾಧವ ಮೀನು ಹಿಡಿಯದಿದ್ರೆ, ಇವರಿಗೆ ಊಟಕ್ಕೆ ಗತಿಯಿರೋದಿಲ್ಲ ಅಷ್ಟೇ!
ಕಲಾವಿದ ೧
ಏನಾದ್ರೂ ಹೇಳದಿದ್ರೆ, ನಿಂಗೆ ತಿಂದಿದ್ದು ಅರಗೋದಿಲ್ವಾ? ದಿನೇಶಣ್ಣ, ಮಾಧವನನ್ನು ಸ್ವಂತ ಮಗನ ಹಾಗೆ ನೋಡಿಕೊಳ್ಳೋದಿಲ್ವಾ? ಅವನಿಂದಲೇ ಇವರ ಆದಾಯ ಎನ್ನೋದು ನಿಜವಾದರೂ, ಇವನ ಜೀವನವೇ ಅವರ ದಯೆಯಿಂದ ಅಲ್ವಾ? ಬಾಯಿ ಕೊಟ್ಟಿದಾರೇಂತ ಏನಾದ್ರೂ ಸುಮ್ಮಸುಮ್ಮನೆ ಮಾತಾಡ್ಬಾರ್ದು!
ಆಗ ಒಬ್ಬ ಕಲಾವಿದನ ವೇಷ ಬಹುತೇಕ ಪೂರ್ತಿಯಾಗಿರುತ್ತದೆ. ಅವನು ಕಿರುಬೆರಳೆತ್ತಿ, ಉಚ್ಚೆ ಹೊಯ್ಯಲು ಹೋಗಿ ಬರುತ್ತೇನೆ ಎಂದು ಹೊರಡುತ್ತಾನೆ.
ಕಲಾವಿದ ೩
(ಅಲ್ಲೇ ಪಕ್ಕದಲ್ಲಿರುವವನಿಗೆ)
ಇವನು ತೋರ್ಸಿದ್ದು ಬೆರಳು. ಆದ್ರೆ, ಹೋದದ್ದು ಸ್ವಲ್ಪ ಹೆಂಡ ಇಳಿಸ್ಲಿಕ್ಕೆ!
ಅಲ್ಲಿರುವ ಇತರ ಕಲಾವಿದರು ನಸುನಕ್ಕು, ತಮ್ಮ ಮುಖವರ್ಣಿಕೆ ಮುಂದುವರೆಸುತ್ತಾರೆ.
ಹೊರಾಂಗಣ. ದೇಸಿ ಹೆಂಡದ ಅಂಗಡಿ - ರಾತ್ರಿ
ಅತ್ತ ಮಾಧವ ಮತ್ತೆ ಬನ್ನಂಜೆ ಸಂಜೆಯ ಹೊತ್ತಿನಲ್ಲಿ ಯಾವುದೋ ಪೊದೆಗಳ ಮರೆಯಲ್ಲಿ ದೇಸೀ ಹೆಂಡ ಕುಡಿಯುತ್ತಾ ಕುಳಿತಿದ್ದಾರೆ.
ಮಾಧವ
ಒಳ್ಳೇದು ಅಂದ್ರೆ ಎಷ್ಟು ಒಳ್ಳೇದು?
ಬನ್ನಂಜೆ
(ಗಲಿಬಿಲಿಯಾಗುತ್ತಾನೆ)
ಒಳ್ಳೇದು ಅಂದ್ರೆ, ಒಳ್ಳೇದು. ಐತಣ್ಣನ ಕಳಿಯಷ್ಟು ಒಳ್ಳೆದು. ನಿನ್ನ ಸುಗಂಧಿಯ ಮುಗುಳ್ನಗೆಯಷ್ಟು ಒಳ್ಳೆದು. ಹದವಾಗಿ ಹುರಿದ ಮೀನಿನಷ್ಟು ಒಳ್ಳೆದು...
ಮಾಧವ
(ನಸುನಗುತ್ತಾನೆ)
ನನ್ನ ಅಪ್ಪನಷ್ಟು?
ಬನ್ನಂಜೆ
(ಮಾಧವನ ಮನಸ್ಸು ಅರಿತವನಂತೆ)
ಓಹ್! ನಿನ್ನ ಅಪ್ಪನ ಗತ್ತೇ ಬೇರೆ! ನೀನು ಕಡಲಿನ ಹುಲಿಯಾದರೆ, ನಿನ್ನ ಅಪ್ಪ ಕಡಲಿನ ದೈವವೇ ಆಗಿದ್ದ.
ಮಾಧವ ಒಮ್ಮೆ ಸುಮ್ಮನಾಗುತ್ತಾನೆ. ಬನ್ನಂಜೆಯ ಮಾತು ಅವನಿಗೆ ಸಂಪೂರ್ಣವಾಗಿ ಅರ್ಥವಾದಂತಿಲ್ಲ. ಮಾಧವ ಇನ್ನೇನೋ ಕೇಳಬೇಕೆಂದಿರುತ್ತಾನೆ. ಅಷ್ಟರಲ್ಲಿ ಬನ್ನಂಜೆ ಐತನೊಡನೆ ಮಾತನಾಡುತ್ತಾನೆ.
ಬನ್ನಂಜೆ
ಐತಣ್ಣ.. ನಿನಗೆ ಇವನ ಅಪ್ಪನ ನೆನಪುಂಟಲ್ಲಾ? ಅವನು ಬೋಟ್ ಏರಿದ್ರೂ ಅಂದ್ರೆ.. ಅದರ ಕತೆಯೇ ಬೇರೆ ಇರ್ತಿತ್ತು!
(ಮಾಧವನ ಕಡೆಗೆ ತಿರುಗುತ್ತಾನೆ)
ಅವನು ಇವತ್ತು ಇದ್ದಿದ್ರೆ, ನಿನ್ನನ್ನು ನೋಡಿ ಭಾರೀ ಹೆಮ್ಮೆ ಪಡ್ತಿದ್ದ.. ನಿನ್ನನ್ನು ಕಡಲಲ್ಲಿ ನೋಡಿದಾಗ, ಇವತ್ತು ನನಗೆ...
ಬನ್ನಂಜೆ ತನ್ನ ಯೋಚನೆಯಲ್ಲಿ ಕಳೆದು ಹೋಗುತ್ತಾನೆ. ಮಾಧವ ಬನ್ನಂಜೆಯ ಮಾತು ಮುಂದುವರೆಯಲು ಕಾಯುತ್ತಿದ್ದಾನೆ. ಆದರೆ ಬನ್ನಂಜೆ ಏನೂ ಹೇಳದೇ ಸುಮ್ಮನಾಗುತ್ತಾನೆ. ಅವನು ಇನ್ನೇನೂ ಹೇಳುವುದಿಲ್ಲ ಎಂದು ಅರಿವಾಗಿ ಮಾಧವ ಸುಮ್ಮನಾಗುತ್ತಾನೆ. ಅವನು ಎದ್ದು ಹೊರಡಲಾರಂಭಿಸುತ್ತಾನೆ.
ಮಾಧವ
ಗುಳಿಗ? ಹುಲಿ?! ಯಾವ ಗುಳಿಗ.. ಯಾವ ಹುಲಿ...? ಅಪ್ಪ ತೀರಿಕೊಂಡಾಗ ಎರಡು ಲಕ್ಷ ಸಾಲ. ನಾನು ಸಾಯುವಾಗಲೂ ಅದು ಹಾಗೇ ಇರ್ತದೆ ಅಷ್ಟೇ.. ಏನೂ ಬದಲಾಗೋದೇ ಇಲ್ಲ ಎಂದು ಅನಿಸುತ್ತೆ ನನಗೆ.
ಮಾಧವ ನಡೆಯಲಾರಂಭಿಸುತ್ತಾನೆ. ಬನ್ನಂಜೆ ಎದ್ದು ಅವನೊಟ್ಟಿಗೆ ಹೊರಡುತ್ತಾನೆ. ದೂರದಿಂದ ಆಟ ಶುರುವಾಗುವ ಶಬ್ದ ಕೇಳಿಸುತ್ತದೆ.
ಮಾಧವ
(ಸ್ವಲ್ಪ ಗಂಭೀರವಾಗುತ್ತಾ)
ದಿನಾ ಹೀಗೇ ಕಡಲಿಗೆ ಹೋಗೋದು, ಮೈಮುರಿದು ದುಡಿಯೋದು, ಮೈ-ಕೈ ನೋವಿಗೆ ಕಳಿ ಕುಡಿಯೋದು. ನಮ್ಮ ಜೀವನ ಇಷ್ಟೇ ಆಯ್ತು. ನಾವೂ ಜೀವನದಲ್ಲಿ ಏನಾದರೂ ಮಾಡ್ಬೇಕು. ಏನಾದ್ರೂ ಮಾಡ್ಲೇ ಬೇಕು!
ಬನ್ನಂಜೆ
(ನಸುನಕ್ಕು. ಕುಡಿದ ಅಮಲಿನಲ್ಲೇ)
ಹೌದೌದು. ನಿನಗೆ ಕಡಲಲ್ಲಿ ಸಮಯ ಹೋಗೋದಿಲ್ಲ. ಮನೆಯಲ್ಲಿ ಪುರುಸೋತ್ತಿಲ್ಲ!
ಮಾಧವ
(ನಾಚುತ್ತಾ)
ಅಲ್ಲಾ.. ನಮ್ಮದೂ ಅಂತ ಬೇರೆಂತ ಉಂಟು.. ಬಲೆ ಉಂಟಾ? ಇಂಜಿನ್ನಾ? ಅಥವಾ ಬೋಟಾ?
ಅಷ್ಟರಲ್ಲಿ ಅವರ ಸುತ್ತ ಏನೋ ಸುಳಿದಂತಾಗುತ್ತದೆ. ಇಬ್ಬರಿಗೂ ಅದು ಅನುಭವಕ್ಕೆ ಬರುತ್ತದೆ. ಮಾತು ನಿಲ್ಲಿಸಿ ಸುತ್ತ ನೋಡುತ್ತಾರೆ. ಏನೂ ಇಲ್ಲ. ಅವರಿಗೆ ಇನ್ನಷ್ಟು ಕುತೂಹಲ, ಸ್ವಲ್ಪ ಗಾಬರಿ ಮೂಡುತ್ತದೆ. ಅತ್ತಿತ್ತ ನೋಡುತ್ತಾರೆ.
ಬನ್ನಂಜೆ
ಯಾರು! ಯಾರದು?!
ಮಾಧವ
ಸುಮ್ಮನೆ ಆಟ ಆಡಿಸ್ಬೇಡಿ..!!
ಆಗ ತುಸು ದೂರದಲ್ಲಿ ಪೊದೆಯೊಂದರ ಎಡೆಯಿಂದ ಬಣ್ಣದ ವೇಷವೊಂದು ಎದ್ದು ನಿಂತಂತಾಗುತ್ತದೆ. ಅಸ್ಪಷ್ಟ ಮುಖ. ಅಲ್ಲಿ ಅಷ್ಟಾಗಿ ಬೆಳಕು ಇರುವುದಿಲ್ಲ.
ಮಾಧವ
(ಅಸ್ಪಷ್ಟ ಆಕೃತಿಯ ಕಡೆಗೆ ನೋಡುತ್ತಾ ಸ್ವಲ್ಪ ಗಾಬರಿಯಾಗುತ್ತಾನೆ)
ದೈವ! ದೈವ!
ಬನ್ನಂಜೆ ಹಾಗೂ ಮಾಧವ ಇಬ್ಬರಿಗೂ ಎದುರಿಗಿರುವುದು ಅಸ್ಪಷ್ಟವಾಗಿ ಕಾಣಿಸುತ್ತಿದೆ.
ಬನ್ನಂಜೆಗೆ ಅಷ್ಟಾಗಿ ನಂಬಿಕೆ ಬಂದಂತಿಲ್ಲ. ಮಾಧವ ಮಾತ್ರ ಭಕ್ತಿಯಿಂದ ತಲೆಬಗ್ಗಿಸುತ್ತಾನೆ.
ಮಾಧವ
ನಾನು ನಂಬಿರುವ ಸತ್ಯವೇ.. ಅಡ್ಡ ಬೀಳುತ್ತೇನೆ! ಅಮ್ಮನ ಹಾಗೆ ಮಡಿಲಲ್ಲಿ ಹಾಕಿ ನನ್ನನ್ನು ಇಂದಿನವರೆಗೂ ಸಾಕಿದ್ದೀಯಾ. ಈಗ ನನ್ನಿಂದೇನು ತಪ್ಪಾಯ್ತು? ಯಾಕೆ ಈ ಭಯಾನಕ ರೂಪ?!
ಬನ್ನಂಜೆ
ಏ! ಮಾಧವ.. ನಿಂದೆಂತದಾ ಭಜನೆ? ಅದು ದೈವ ಅಲ್ಲ.. ಯಾರೋ ನಮ್ಮನ್ನು ಆಟ ಆಡಿಸ್ತಿದ್ದಾರೆ ಅಷ್ಟೇ!
ಮಾಧವ ತನ್ಮಯನಾಗಿ ಕೈ ಮುಗಿದು ನಿಂತಿದ್ದಾನೆ. ಬನ್ನಂಜೆಗೆ ಇದು ಸರಿಯೆನ್ನಿಸುವುದಿಲ್ಲ. ಅವನು ಮಾಧವನನ್ನು ಅಲುಗಾಡಿಸುತ್ತಾನೆ. ಮಾಧವ ತನ್ಮಯನಾಗಿಯೇ ಇದ್ದಾನೆ.
ಆಕೃತಿ
ಓ ನನ್ನ ಮಗುವೇ... ಮುಂದಿದೆ ನಿನಗೆ ಸುಖದ ದಾರಿ! ಹಾಲು ತುಪ್ಪದ ಕಡಲೇ ನಿನ್ನತ್ತ ಉಕ್ಕಿ ಬರುವುದು. ಭೂಮಿಗೆ ಭೂಮಿಯೂ ಇರುತ್ತದೆ. ಬೊಗಸೆ ತುಂಬ ಬಂಗಾರ, ಸಿಂಗಾರದ ಸಿಂಹಾಸನ ಸದ್ಯದಲ್ಲೇ ನಿನ್ನದಾಗುವುದು!
ಬನ್ನಂಜೆ ಈಗ ಸ್ವಲ್ಪ ಗಂಭೀರವಾಗುತ್ತಾನೆ. ಮಾಧವನ ಭಯ, ಭಕ್ತಿ ಇನ್ನಷ್ಟು ಹೆಚ್ಚಾಗುತ್ತದೆ.
ಮಾಧವ
ನಾನು ನಂಬಿದ ದೈವವೇ! ನಾನೂ ನನ್ನ ಅಪ್ಪನ ಹಾಗೆ ಕಡಲಿನ ಹುಲಿಯಾಗಬೇಕು! ಕೈ ಹಿಡಿದವಳಿಗೆ ಎಲ್ಲಾ ಸುಖ ಕೊಡುವ ಹಾಗೆ ಆಗಬೇಕು.
ಆಕೃತಿ
ಓ ನನ್ನ ಕಂದಾ.. ನಿನ್ನ ಬಡತನ ಇಲ್ಲಿಗೆ ತೀರಿತು ಎಂದುಕೋ. ತೀರದುದ್ದಕ್ಕೂ ದೋಣಿ... ದೋಣಿ ಪೂರಾ ಕಡಲ ಸಂಪತ್ತು... ಲೆಕ್ಕವಿರದಷ್ಟು ಬಲೆ ನಿನ್ನದಾಗುವ ದಿನಗಳು ಬರುತ್ತವೆ ಮಗುವೇ! ಕೈ ಹಿಡಿದ ಮಡದಿ ಸಕಲ ಸುಖದಿಂದ ಮೆರೆಯುತ್ತಾಳೆ. ಆದರೆ ಅಟ್ಟದ ಮೇಲಿಟ್ಟ ತೊಟ್ಟಿಲು ಅಟ್ಟದಲ್ಲೇ ಉಳಿಯುತ್ತದಲ್ಲಾ ಮಗುವೇ..!
ಮಾಧವನಿಗೆ ಗಾಬರಿಯಾಗುತ್ತದೆ. ಅವನು ಅಪನಂಬಿಕೆಯಿಂದ ಆಕೃತಿಯ ಕಡೆಗೆ ನೋಡುತ್ತಿದ್ದಾನೆ. ಬನ್ನಂಜೆಗೆ ಸಿಟ್ಟು ಬರುತ್ತದೆ. ಅವನು ಆಕೃತಿಯ ಕಡೆಗೆ ಎರಡು ಹೆಜ್ಜೆ ಹಾಕುತ್ತಾನೆ.
ಬನ್ನಂಜೆ
ಏಯ್! ಸಾಕು ತಮಾಷೆ! ಹೊಸತ್ತಾಗಿ ಮದುವೆ ಆದವನಿಗೆ ದೈವ ಹೇಳುವ ನುಡಿಯಾ ಇದು? ನಮ್ಮದೇ ಚಿಂತೆಯಲ್ಲಿ ನಾವಿದ್ದೇವೆ. ಹೀಗಿರುವಾಗ... ತೀರ ತುಂಬಾ ದೋಣಿ.. ದೋಣಿ ತುಂಬಾ ಕಡಲ ಸಂಪತ್ತು ಅಂತೆ! ಏನು? ಮಕ್ಕಳಾಟವಾ?!
ಬನ್ನಂಜೆ ಮಾಧವನ ಕಡೆಗೆ ತಿರುಗುತ್ತಾನೆ. ಅವನು ಅಪನಂಬಿಕೆಯಲ್ಲಿ ಕುಸಿದು ಕುಳಿತಿದ್ದಾನೆ.
ಬನ್ನಂಜೆ
(ಮತ್ತೆ ಆಕೃತಿಯ ಕಡೆಗೆ ತಿರುಗಿ)
ಅಲ್ಲ... ಎಲ್ಲಾ ಶಕುನ ಅಪಶಕುನ ಅವನೊಬ್ಬನಿಗೆಯೇ? ನಾನೇನೂ ಲೆಕ್ಕಕ್ಕಿಲ್ವಾ?
ಆಕೃತಿ
ಇವನ ನಂತರ ಬಲೆ ಸಂಪತ್ತು ಎಲ್ಲವೂ ನಿನ್ನ ಮಗನದೇ ಆಗುವುದು! ನಿನಗಿಂತಲೂ ಹೆಚ್ಚಾಗಿ ಅವನಿಗೆ ನಂಬಿಕೆಯಿದೆ. ಹಾಗಾಗಿ ಅವನಿಗೆ ಸುಖವೂ ಹೆಚ್ಚಿನದ್ದೇ!
ಬನ್ನಂಜೆ
(ತಲೆ ಕೊಡಹಿಕೊಳ್ಳುತ್ತಾ)
ಏಯ್! ಯಾರು ಮಾರಾಯ ನೀನು? ನೋಡು.. ಹೀಗೆಲ್ಲಾ ಬಾಯಿಗೆ ಬಂದ ಹಾಗೆ ಬಡ್ಕೋಬೇಡ. ಮೊದಲೇ ಕುಡಿದದ್ದು ಸ್ವಲ್ಪ ಜಾಸ್ತಿಯಾಗಿದೆ. ಹೀಗೆಲ್ಲಾ ಬಲೆ - ಸುಖ - ಸಂಪತ್ತೂಂತ ಆಸೆ ಹುಟ್ಟಿಸ್ಬೇಡ. ಕೊಡೋದೇ ಆದ್ರೆ ನಂಗೊಂದು ಕಾರು, ಇವನಿಗೊಂದು ಮನೆ ಕೊಡಿಸು ನೋಡೋಣ!
ಆಕೃತಿ
(ಜೋರಾಗಿ ನಗುತ್ತಾ)
ಬರುವುದು ಏನೇ ಇದ್ದರೂ ನಿನ್ನ ಮಗನ ಮೂಲಕವೇ ನಿನಗೆ ಬರುವುದು.
ಬನ್ನಂಜೆ ತಲೆಕೊಡಹಿಕೊಳ್ಳುತ್ತಾ ಮಾಧವನ ಕಡೆಗೆ ನೋಡುತ್ತಾನೆ.
ಬನ್ನಂಜೆ
ಅಲ್ಲ ಮಾಧವಾ.. ನೀನು ಕಾರು ಕೊಡುವ ದೈವ ಎಲ್ಲಾದ್ರೂ ಕಂಡಿದ್ದೀಯಾ?
ಆಕೃತಿ
ಬರುವುದು! ಅದು ಬಂದೇ ಬರುವುದು!
ಮಾಧವನ ಮುಖ ಗಂಭೀರವಾಗುತ್ತದೆ. ಬನ್ನಂಜೆ ಮಾಧವ ಏನು ನೋಡುತ್ತಿದ್ದಾನೆಂದು ತಿರುಗಿ ನೋಡಿದರೆ, ಅಲ್ಲಿ ಆಕೃತಿಯೇ ಇರುವುದಿಲ್ಲ. ಬನ್ನಂಜೆಗೂ ಗಾಬರಿಯಾಗುತ್ತದೆ. ಅವನೂ ಅತ್ತಿತ್ತ ನೋಡುತ್ತಾನೆ. ಗಾಬರಿಯಿಂದ ಆಗಲೇ ಬೆರಗಾಗಿ ಕುಳಿತಿರುವ ಮಾಧವನ ಪಕ್ಕದಲ್ಲಿ ಬನ್ನಂಜೆ ಕೂರುತ್ತಾನೆ. ಇಬ್ಬರೂ ಪರಸ್ಪರ ಮಾತನಾಡದೇ ಕುಳಿತಿದ್ದಾರೆ. ಅಲ್ಲಿ ವಿಚಿತ್ರ ಮೌನ...
ಒಳಾಂಗಣ. ಮಾಧವ ಸುಗಂಧಿಯರ ಗುಡಿಸಲು - ರಾತ್ರಿ
ಮಾಧವ ಮತ್ತು ಸುಗಂಧಿ ಪರಸ್ಪರ ಅಪ್ಪುಗೆಯಲ್ಲಿದ್ದಾರೆ. ಅವರ ಬತ್ತಲೆ ದೇಹಗಳು ಕತ್ತಲಲ್ಲಿ, ಅಲ್ಲಿಲ್ಲಿ ಸೋರುವ ಬೆಳಕಿನಲ್ಲಿ ಅಸ್ಪಷ್ಟವಾಗಿ ಕಾಣಿಸುತ್ತಿವೆ. ಮೈ ಮೇಲಿನ ಬೆವರ ಹನಿ, ತನ್ಮಯ ಮುಖಗಳು, ಪರಸ್ಪರ ಮೈಯಲ್ಲಿ ಹರಿದಾಡುವ ಕೈಗಳು ಹೀಗೆ ಹಲವು ಕಟ್-ಶಾಟ್ಸ್ ಮೂಲಕ ಉತ್ಕಟ ಅನುಭವವನ್ನು ಸೂಚಿಸುವ ದೃಶ್ಯ ಕಾಣುತ್ತಿದ್ದೇವೆ. ಮನೆಯ ಹೊರಗೆ ಜೋರಾಗಿ ಮಳೆ ಬರುತ್ತಿದೆ. ಸಮುದ್ರದ ಶಬ್ದವೂ ಮಳೆಯ ಶಬ್ದದೊಂದಿಗೆ ಸೇರಿಕೊಳ್ಳುತ್ತಿದೆ.
ಆದರೆ ಈ ಉತ್ಕಟತೆಯ ಮಧ್ಯದಲ್ಲೇ... ಮಾಧವನಿಗೆ ದೈವದ ನುಡಿ ನೆನಪಾಗುತ್ತದೆ. ಅವನು ಗಾಬರಿ, ಗೊಂದಲದಿಂದ ಸುಗಂಧಿಯನ್ನು ಬಿಟ್ಟು ಎದ್ದು ಕೂರುತ್ತಾನೆ. ಸುಗಂಧಿಗೆ ಗೊಂದಲ. ತನ್ನ ಮೈಮುಚ್ಚಿಕೊಳ್ಳುತ್ತಾ ಸುಗಂಧಿ ಎದ್ದು ಕೂರುತ್ತಾಳೆ.
ಸುಗಂಧಿ
ಏನಾಯಿತು?
ಮಾಧವ ಏನೂ ಇಲ್ಲ ಎನ್ನುವಂತೆ ತಲೆಯಾಡಿಸುತ್ತಾನೆ. ಆದರೆ ಅವನು ಯೋಚನೆಯಲ್ಲಿ ಕಳೆದು ಹೋಗಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಸುಗಂಧಿ ಮಾಧವನ ಗಲ್ಲ ಹಿಡಿದು, ಅವನ ಮುಖವನ್ನು ತನ್ನೆಡೆಗೆ ತಿರುಗಿಸುತ್ತಾಳೆ.
ಸುಗಂಧಿ
ನನಗೂ ಹೇಳಬಾರದೇ?
ಮಾಧವ
(ಸ್ವಲ್ಪ ಯೋಚನೆಯಲ್ಲೇ)
ಇವತ್ತೊಂದು ಪವಾಡ ಆಯ್ತು... ದೈವವೇ ಎದುರು ನಿಂತು ಮಾತನಾಡಿತು!
ಮಾಧವ ಸುಗಂಧಿಯ ಮುಖವನ್ನು ನೋಡುತ್ತಾನೆ. ಸುಗಂಧಿ ಗಮನವಿಟ್ಟು ಕೇಳಿಸಿಕೊಳ್ಳುತ್ತಿದ್ದಾಳೆ. ಮಾಧವನಿಗೆ ಸ್ವಲ್ಪ ಧೈರ್ಯ ಬಂದಂತಾಗುತ್ತದೆ.
ಮಾಧವ
ನಾವು ನಂಬಿದ ದೈವ ದೊಡ್ಡ ವರ ನೀಡಿತು! ದಡದ ತುಂಬಾ ದೋಣಿ.. ಲೆಕ್ಕವಿರದಷ್ಟು ಬಲೆ.. ದೋಣಿ ತುಂಬ ಕಡಲ ಸಂಪತ್ತು… ನಮ್ಮದಾಗುತ್ತದೆಯಂತೆ… ಆದ್ರೆ…
(ಈ ಡೈಲಾಗ್ ಹೇಳುತ್ತಾ ಹೇಳುತ್ತಾ ಮಾಧವ ಉದ್ವೇಗಕ್ಕೆ ಒಳಗಾಗುತ್ತಾನೆ)
ಸುಗಂಧಿ
ಮತ್ತೆಂತ ಹೇಳಿತು ದೈವ...?
ಮಾಧವ
(ಸುಗಂಧಿ, ತನ್ನ ಮಾತನ್ನು ನಂಬುತ್ತಿದ್ದಾಳೋ ಇಲ್ಲವೋ ಮಾಧವನಿಗೆ ಸಂಶಯ)
ನೀನು ನನ್ನನ್ನು ನಂಬೋದಿಲ್ಲವೇ?
ಸುಗಂಧಿ
(ಸ್ವಲ್ಪ ಯೋಚಿಸುತ್ತಲೇ)
ನಾವು ನಂಬಿದ ಸತ್ಯ, ನಾವು ಹಂಬಲಿಸಿದಂತೆಯೇ ಇರುತ್ತದೆ. ನಮ್ಮ ಮನಸ್ಸೇ ನಮ್ಮ ದೈವ. ನಮಗೆ ಬೇಕಾದ ವರ ಕೊಡುವುದು ಅದುವೇ ಅಂತೆ!
ಸುಗಂಧಿ ಈಗ ನಿಧಾನವಾಗಿ ಮಾಧವನ ತೋಳನ್ನು ಸವರುತ್ತಾ... ಮಾಧವನಿಗೆ ಮುತ್ತು ನೀಡುತ್ತಾ, ರಮಿಸುತ್ತಾ ಮಾತನಾಡುತ್ತಾಳೆ. (ಇಲ್ಲಿ ಸುಗಂಧಿಗೆ ಮಾಧವನ ದೇಹದ ಮೇಲಿನ ತೀವ್ರ ಆಸೆ-ನಂಬಿಕೆ ಕಾಣಿಸಬೇಕು)
ಸುಗಂಧಿ
ಈ ದುಡಿವ ತೋಳಿನ ತಾಕತ್ತು, ಎಲ್ಲಾ ಭಾರ ಹೊರುವ ನಿಮ್ಮ ಈ ಪುಷ್ಟ ಹೆಗಲು, ಯಾವ ಕೆಲಸವನ್ನೂ ಮುಗಿಸದೆ ಬಿಡದ ನಿಮ್ಮ ಛಲ. ದೈವದ ಆಶೀರ್ವಾದ, ದಿನೇಶಣ್ಣನ ಸಹಾಯ ಇವೆಲ್ಲವೂ ಇರೋವಾಗ, ನಾವು ನಂಬಿದ ಸತ್ಯ ನಿಮ್ಮ ಮಾತನ್ನು ಖಂಡಿತಾ ಈಡೇರಿಸುತ್ತದೆ.
ಮಾಧವ ಆಸೆಗಣ್ಣುಗಳಿಂದ ಸುಗಂಧಿಯನ್ನೇ ನೋಡುತ್ತಾನೆ.
ಸುಗಂಧಿ ಮಾಧವನ ಬೆರಳುಗಳನ್ನು ತನ್ನ ಕೈಯ್ಯಲ್ಲಿ ಹಿಡಿದು, ಕಣ್ಣಿಗೆ ಮೆತ್ತಗೆ ಒತ್ತಿಕೊಳ್ಳುತ್ತಾಳೆ. ಮತ್ತೆ ನಿಧಾನಕ್ಕೆ ಬೆರಳುಗಳನ್ನು ತುಟಿಗೆ ಸೋಕಿಸುತ್ತಾಳೆ. ಮಾಧವ ಕಾಮದ ಉತ್ಕಟತೆಯಲ್ಲಿ ಕಳೆದುಹೋಗುತ್ತಾನೆ.
ಮಾಧವ ಸುಗಂಧಿಯನ್ನು ಮುದ್ದಿಸುತ್ತಾನೆ. ಆತ ಆಕೆಯನ್ನು ತಬ್ಬಿಕೊಂಡೇ ಕನಸು ಕಾಣಲಾರಂಭಿಸುತ್ತಾನೆ.
ಮಾಧವ
ನಮ್ಮದೇ ಆದ ಬಲೆ.. ಕೈತುಂಬ ಸಂಪಾದನೆ.. ನಮ್ಮದೇ ಆದ ಒಂದು ಗಟ್ಟಿಯಾದ ಮನೆ..
ಸುಗಂಧಿ
ನಮ್ಮದೇ ಆದ ಪುಟ್ಟ ಕಂದ.. ಆ ಕಂದನಾಟದ ಅಂದ.. ದೈವದ ಬಲ ಇದ್ರೆ ಎಲ್ಲವೂ ಒಳಿತಾಗುತ್ತದೆ.
ಮಾಧವನಿಗೆ ಮಗುವಿನ ವಿಚಾರ ಬಂದಾದ ಸ್ವಲ್ಪ ಗಲಿಬಿಲಿಯಾಗುತ್ತದೆ. ಅವನು ತನ್ನ ಭಾವನೆಯನ್ನು ಸುಗಂಧಿಯಿಂದ ಅಡಗಿಸುತ್ತಾನೆ. ಮನೆಯಿಂದಾಚೆಗೆ ಜೋರು ಮಳೆ ಬರುತ್ತಿದೆ. ಸಮುದ್ರ ಉಕ್ಕುತ್ತಿದೆ.
ಹೊರಾಂಗಣ. ಮೀನು ಮಾರುಕಟ್ಟೆ - ಹಗಲು
ಸುಗಂಧಿ ಇತರರೊಂದಿಗೆ ಮೀನು ಮಾರುಕಟ್ಟೆಯಲ್ಲಿದ್ದಾಳೆ. ನಾವು ಮೀನು ಮಾರುಕಟ್ಟೆಯ ಜನಜಂಗುಳಿ ಅಲ್ಲಿ ಮೀನು ಮಾರುವಾಗ ಮಧ್ಯದಲ್ಲೇ ಪಕ್ಕದ ಹೆಂಗಸಿನೊಂದಿಗೆ ಮಾತುಕತೆಯಾಗುತ್ತದೆ. ಸುಗಂಧಿಗೆ ಸ್ವಲ್ಪ ನಿದ್ದೆಯ ಮಂಪರು ಇದ್ದಂತಿದೆ.
ಪ್ರಮೀಳ
ಇಂದು (ಯಕ್ಷಗಾನ) ಆಟಕ್ಕೆ ಹೋಗೋದಿದೆಯೇ? ನೀನು ಯಾಕೆ ಹೋಗ್ತಿ? ನಿಂಗೆ ಈಗ್ಲೇ ಕಣ್ಣು ಕೂರ್ತಾ ಉಂಟಲ್ಲ? ನಿನ್ನೆ ರಾತ್ರಿ ಮನೆಯಲ್ಲೇ ಆಟ ಜೋರಾಗಿದ್ದಂತೆ ಕಾಣುತ್ತೆ!
ಸುಗಂಧಿ
(ತುಸು ನಾಚುತ್ತಲೇ)
ನಿನ್ನೆ ಫಿಶಿಂಗ್ ಚೆನ್ನಾಗಿತ್ತಲ್ಲಾ? ಸ್ವಲ್ಪ ಕುಶಿಯಲ್ಲಿದ್ರು. ಐತಣ್ಣನ ಹೆಂಡ ಸ್ವಲ್ಪ ಹೆಚ್ಚೇ ಆಗಿತ್ತು. ಹಾಗಾಗಿ ಒಳ್ಳೆ ರಭಸದಲ್ಲಿದ್ರು.
ಪ್ರಮೀಳ ನಗುತ್ತಾಳೆ.
ಪ್ರಮೀಳ
ನಮ್ಮ ಮನೆಯದ್ದೂ ಉಂಟು ಮಾರಾಯ್ತಿ... ಮರಿ ಮೀನು.. ಎಂತ ಮಾಡೂದಿಲ್ಲ ಹೇಳ್ತೇನೆ! ಉಪ್ಪು ನೀರಿನ ಮೀನನ್ನು ಚಪ್ಪೆ ನೀರಿನಲ್ಲಿ ಹಾಕಿದ ಹಾಗೆ. ಏನೂ ಪ್ರಯೋಜನವಿಲ್ಲ... ನಿನ್ನನ್ನು ನೋಡುವಾಗ, ನನಗೆ ಹೊಟ್ಟೆ ಕಿಚ್ಚಾಗ್ತದೆ.
ಸುಗಂಧಿ
ನನ್ನ ಮನೆ ಮೀನು ಜೋರುಂಟು! ಹಿಡಿಯಲು ಹೋದ್ರೆ ಜಾರಿ ಹೋಗ್ತದೆ ಗೊತ್ತುಂಟಾ...? ಪೆರ್ಚು ಕಟ್ಟಿ ಆಡ್ತದೆ!
ಪ್ರಮೀಳ
ಚಾನ್ಸು ನಿಂದು.. ನೋಡು ಯಾರೋ ಕಸ್ಟಮರ್ ಬಂದ್ರು.. ಬನ್ನಿ ಬನ್ನಿ ಇಲ್ಲಿ ಬನ್ನಿ ಮೇಡಮ್. ಬಂಗುಡೆ ಉಂಟು.. ದೊಡ್ಡ ಉಂಟು ಫ್ರೆಶ್ಶು.... ಬನ್ನಿ ಬನ್ನಿ..
ಪ್ರಮೀಳಾ ಹಾಗೂ ಸುಗಂಧಿ ನಗುತ್ತಾರೆ.
ಅಲ್ಲಿಗೆ ಮೀನು ತೆಗೆದುಕೊಳ್ಳಲು, ಹೆಂಡತಿಯೊಂದಿಗೆ ಬಂದಿರುವ ಇನ್ಸ್ಪೆಕ್ಟರ್ ರೂಪೇಶ ಬರುತ್ತಾರೆ.
ರೂಪಾ
ಇಪ್ಪತ್ತು ರೂಪಾಯಿ ಬಂಗುಡೆ ಕೊಡಿ.
ಪ್ರಮೀಳಾ ಮೀನು ತೂಗಲು ಆರಂಭಿಸುತ್ತಾಳೆ.
ರೂಪೇಶ
(ಪ್ರಮೀಳನಿಗೆ)
ಅಕ್ಕಾ.. ನೀವು ದಿನೇಶಣ್ಣನ ಮನೆಗೆ ಈಗ್ಲೂ ಕೆಲಸಕ್ಕೆ ಹೋಗ್ತೀರಾ?
ಪ್ರಮೀಳ
ಹೌದು ಸರ್. ಹೋಗ್ತೇನೆ. ಯಾಕೆ ಸರ್..?
ರೂಪೇಶ
ದಿನೇಶಣ್ಣನಿಗೆ ಒಮ್ಮೆ ಪೋಲೀಸ್ ಸ್ಟೇಷನ್ನಿಗೆ ಬರ್ಲಿಕ್ಕೆ ಹೇಳಿ. ಸ್ವಲ್ಪ ಅರ್ಜೆಂಟ್ ಅಂತ ಹೇಳಿ ಅವರಿಗೆ.
ಪ್ರಮೀಳ
ಹಾ.. ಹಾ! ಆಯ್ತು ಸರ್...
ಪ್ರಮೀಳಾ ಮೀನುಗಳನ್ನು ಪ್ಲಾಸ್ಟಿಕ್ ಕವರಿಗೆ ಹಾಕಲು ಹೋಗುತ್ತಾಳೆ. ಆಗ ರೂಪೇಶನ ಹೆಂಡತಿ ಚೀಲವೊಂದನ್ನು ಕೊಡುತ್ತಾಳೆ.
ರೂಪ
ಪ್ಲಾಸ್ಟಿಕ್ ಬೇಡ..
ಇನ್ಸ್ಪೆಕ್ಟರ್ ಹೆಂಡತಿ ಚೀಲ ಕೊಡಲು ಮುಂದೆ ಬಗ್ಗುತ್ತಾರೆ. ಆಕೆ ಒಳ್ಳೆಯ ಸೆಂಟು ಹಾಕಿರುತ್ತಾರೆ. ಸುಗಂಧಿ ಮೂಗು ಅರಳಿಸಿ ಆಘ್ರಾಣಿಸುತ್ತಾಳೆ.
ಸುಗಂಧಿ
ಆಹ್... ಎಂಥಾ ಪರಿಮಳ ಅಕ್ಕಾ ಇದು! ಸೆಂಟಿನದ್ದಾ?
ರೂಪ
ಹಾ.. ದುಬೈಯದ್ದು ಇದು. ಇಂಪೋರ್ಟೆಡ್!
ಪ್ರಮೀಳ ನಗುತ್ತಾಳೆ. ಆಕೆ ಈಗ ರೂಪೇಶನಿಗೆ ಮೀನು ಕಟ್ಟುತ್ತಿದ್ದಾಳೆ.
ಪ್ರಮೀಳ
ಹೌದಾ ಅಕ್ಕಾ..! ಅದೆಲ್ಲ ನಿಮಗೇ ಸರಿ. ನಮಗೆ ಇದೆಲ್ಲಾ ಯಾಕೆ? ನಾವು ಸೆಂಟ್ ಹಾಕ್ಕೊಂಡು ಮೀನು ಮಾರ್ಲಿಕ್ಕೆ ಆಗ್ತದಾ? ಸೆಂಟಿಗೇ ಮೀನಿನ ವಾಸನೆ ತಾಗೀತು!
ಎಲ್ಲರೂ ನಗುತ್ತಾರೆ. ಸುಗಂಧಿಗೆ ಮಾತ್ರ ಆ ಸೆಂಟು ಬಹಳ ಇಷ್ಟವಾಗುತ್ತದೆ. ಆಕೆ ಮುಖದಲ್ಲಿ ನಕ್ಕರೂ, ಮನಸ್ಸಿನಲ್ಲೇ ಆ ಸುವಾಸನೆಗೆ ಸೋತುಹೋಗಿರುವುದನ್ನು ನಾವು ಕಾಣುತ್ತೇವೆ. ಉಳಿದ ಧ್ವನಿಗಳೆಲ್ಲವೂ ಮಂದವಾಗುತ್ತಾ ಹೋಗುತ್ತದೆ. ಸುಗಂಧಿ ಮಾತ್ರ ಪರಿಮಳದಲ್ಲೇ ಕಳೆದು ಹೋಗಿದ್ದಾಳೆ. ಪ್ರಮೀಳ ಮಾತನಾಡುತ್ತಲೇ ಇದ್ದಾಳೆ.
ಒಳಾಂಗಣ / ಹೊರಾಂಗಣ. ದಿನೇಶಣ್ಣನ ಮನೆ - ರಾತ್ರಿ
ದಿನೇಶಣ್ಣನ ಮನೆಯಲ್ಲಿ ಜೋರು ಜಗಳ ನಡೆಯುತ್ತಿದೆ. ಮನೆಯಾಚೆ ಜಗಲಿಯಲ್ಲಿ ಅಸಹಾಯಕರಾಗಿ ವೀಲ್-ಚೇರಿನಲ್ಲಿ ದಿನೇಶಣ್ಣನ ಹೆಂಡತಿ ಶಂಕರಿ ಕುಳಿತಿದ್ದಾರೆ. ಆಚೀಚಿನ ಮನೆಯವರು ಜಗಳದ ಶಬ್ದಕ್ಕೆ ತಮ್ಮ ಮನೆಗಳಿಂದಲೇ ಇಣುಕಿ ನೋಡುತ್ತಿದ್ದಾರೆ. ದಿನೇಶಣ್ಣನ ಪತ್ನಿಯನ್ನು ನೋಡಿ ಅವರು ಸ್ವಲ್ಪ ಮರೆಗೆ ಸರಿಯುತ್ತಾರೆ. ಆದರೂ ಕುತೂಹಲ ತಡೆಯದೇ ಆಗೀಗ ಇಣುಕಿ ನೋಡುತ್ತಿದ್ದಾರೆ. ಈ ದೃಶ್ಯದಲ್ಲಿ ಬಹುತೇಕ ಮನೆಯಾಚಿನಿಂದ ಮನೆಯೊಳಗಿನ ಧ್ವನಿಗಳಷ್ಟೇ ಕೇಳುತ್ತಿದೆ.
ಮಂಜೇಶ
ನಂಗೆ ದುಬೈಗೆ ಹೋಗ್ಬೇಕೂಂದ್ರೆ ನಿಮಿಗೆ ಅರ್ಥ ಆಗೋದಿಲ್ಲ. ಇಲ್ಲಿಯೇ ಇದ್ದು, ನಿಮ್ಮ ಬಿಸಿನೆಸ್ ನೋಡಿಕೊಳ್ಳಿಕ್ಕೆ ನಂಗೆ ಇಂಟ್ರೆಸ್ಟ್ ಇಲ್ಲ.
ದಿನೇಶಣ್ಣ
ನಿನ್ನ ಖರ್ಮ ದುಬೈ. ದುಬೈಗೆ ಹೋಗಿ ಏನು ಕಡ್ದು ಗುಡ್ಡೆ ಹಾಕ್ಲಿಕ್ಕುಂಟು ನೀನು? ಒಂದು ಹುಟ್ಟು ಹಾಕ್ಲಿಕ್ಕೆ ಗೊತ್ತಿಲ್ಲ.. ಹುಟ್ಟು ಬಿಡು, ದೋಣಿ ನೂಕಿ ಹತ್ತಿ ಕೂತ್ಕೊಳ್ಳಿಕ್ಕೂ ಗೊತ್ತಿಲ್ಲ. ಆ ನಿನ್ನ ಪೋಲಿ ಗ್ಯಾಂಗ್ ಕಟ್ಟಿಕೊಂಡು ಊರು ಸುತ್ತೂದೇ ಆಯ್ತು. ಪುಣ್ಯಕ್ಕೆ ಆ ಇನ್ಸ್ಪೆಕ್ಟರ್ ಗುರ್ತ ಇರೂದಕ್ಕಾಯ್ತು. ಇಲ್ಲದಿದ್ರೆ ಮರ್ಯಾದೆ ಮೂರು ಕಾಸಿಗೆ ಹರಾಜಾಗ್ತಿತ್ತು!
ಮಂಜೇಶ
ಹೌದೌದು. ನನ್ನ ಫ್ರೆಂಡ್ಸೆಲ್ಲಾ ಪೋಲಿಗಳು ಅಂತ ಗೊತ್ತಾಗ್ತದೆ ನಿಮಗೆ. ಆದ್ರೆ ನಾನು ದುಬೈಗೆ ಹೋಗ್ಬೇಕು ಅಂತ ಬಾಯಿ ಬಿಟ್ಟು ಹೇಳಿದರೂ ಗೊತ್ತಾಗೋದಿಲ್ವಲ್ಲಾ? ಅದಿಕ್ಕೆ ನಾನೇ ಒಂದು ದಾರಿ ಹುಡುಕ್ಕೊಂಡಿದ್ದು.
ದಿನೇಶಣ್ಣ
ದಾರಿ? ಮಣ್ಣು ತಿನ್ನೋ ದಾರಿ ನಿಂದು! ವೀಸಾ ಮಾಡಿಸ್ಲಿಕ್ಕೆ ಯಾವ್ದೋ ಅಡ್ಡಕಸುಬೀ ಏಂಜಟನ್ನು ಹಿಡಿದ್ದೀಯಲ್ಲಾ?! ಗವರ್ನಮೆಂಟ್ ಲೆಟರೆಲ್ಲಾ ಪೋರ್ಜರಿ ಮಾಡಿಸಿದ್ದಾನೆ ಅವನು. ಬುದ್ಧಿ ಉಂಟಾ ನಿಂಗೆ? ಈ ಕೇಸಲ್ಲಿ ನೀನು ಸಿಕ್ಕಿಬಿದ್ರೆ, ದುಬೈ ಬಿಡು, ಉಳ್ಳಾಲ ಸಂಕವೂ (ಮಂಗಳೂರಿನ ಆಚೆ ಇರುವ ಸೇತುವೆ. ಒಂದರ್ಥದಲ್ಲಿ ಮಂಗಳೂರಿನ ಗಡಿ ಅದು) ದಾಟೋದಿಕ್ಕೆ ಆಗದು ನಿನಗೆ. ಮೂರು ಕಾಸಿನವ..!
ಮಂಜೇಶ
ಹೌದು. ಕೈ ಕಟ್ಟಿ ಕೂತ್ರೆ ನಾನಿಲ್ಲೇ ಸಾಯ್ಬೇಕು ಅಷ್ಟೇ! ನಿಮ್ಮ ಮೀನಿನ ಹಾಗೆ ನಾನು ಇಲ್ಲೇ ಕೊಳೆತು ಹೋಗುತ್ತೇನೆ ಅಷ್ಟೇ!
ದಿನೇಶಣ್ಣ
ಅಲ್ಲಿ ಹೋಗಿ ಎಂತ ಮಾಡ್ತಿ ನೀನು? ಅಲ್ಲಿ ಕೆಲ್ಸ ಉಂಟಾ? ಅಥವಾ ಕೆಲ್ಸ ಮಾಡಿ ನಿಂಗೆ ಗೊತ್ತುಂಟಾ? ನೀನು ಕಾಸು ಹುಡಿ ಮಾಡಿದ್ದು ಸಾಕು. ಇನ್ನೂ ಹಣ ವೇಸ್ಟ್ ಮಾಡ್ಲಿಕ್ಕೆ ನಾನು, ನಿನಗೆ ನಯಾ ಪೈಸೆ ಕೊಡೋದಿಲ್ಲ. ನಿನಗೆ ಕೊಡೋದಿಕ್ಕಿಂತ ಯಾವುದಾದರೂ ಅನಾಥಾಶ್ರಮಕ್ಕೆ ದಾನ ಮಾಡಿದ್ರೆ ಪುಣ್ಯ ಬರ್ಬೋದು.
ಮಂಜೇಶ
ಗೊತ್ತಿದೆ! ನೀವು ನಿಮ್ಮೆಲ್ಲ ಆಸ್ತಿಯನ್ನು ಆ ಮಾಧವ.. ಬನ್ನಂಜೆ ಅವ್ರಿಗೇ ಕೊಡಿ.
ದಿನೇಶಣ್ಣ
ಹೌದು! ನಾನು ನನ್ನ ಎಲ್ಲಾ ಆಸ್ತಿಯನ್ನು ಆ ಮಾಧವನಿಗೇ ಕೊಡ್ತೇನೆ!
ಮಂಜೇಶ
ಹಾ. ನಾನು ಲೆಕ್ಕಕ್ಕೆ ಇಲ್ಲ ನಿಮ್ಗೆ.
ದಿನೇಶಣ್ಣ
ಹೌದು! ಈ ಆಸ್ತಿ ಅವರ ಬೆವರಿನದ್ದು!
ಅಷ್ಟರಲ್ಲಿ ಮಂಜೇಶ ಸಿಟ್ಟಿನಲ್ಲಿ ಮನೆಯಿಂದ ಆಚೆಗೆ ಬರುತ್ತಾನೆ.
ದಿನೇಶಣ್ಣ
ಈಗ ಎಲ್ಲಿಗೆ ಸವಾರಿ? ಮಾಡೋದು ಹೇಲು ತಿನ್ನೋ ಕೆಲಸ. ಕೇಳಿದ್ರೆ, ಮಾತನಾಡದೇ ಓಡ್ತಾನೆ. ಇನ್ನೂ ಮಕ್ಕಳಾಟಿಕೆ. ನನ್ನ ಕಣ್ಣೆದುರು ನಿಲ್ಬೇಡ...
ದಿನೇಶಣ್ಣನೂ ಮನೆಯಾಚೆಗೆ ಬರ್ತಾರೆ. ಅಲ್ಲಿ ಮಂಜೇಶ ಇಲ್ಲ. ಅವನು ಆಗಲೇ ಹೋಗಿಯಾಗಿದೆ. ದಿನೇಶಣ್ಣ ಮನೆಯಾಚೆಗೆ ಬಂದಾಗ ಇಣುಕಿ ನೋಡುತ್ತಿದ್ದವರೆಲ್ಲಾ ಮನೆಯೊಳಗೆ ಹೋಗುತ್ತಾರೆ. ಶಂಕರಿ ಹತಾಶೆಯಿಂದ ದಿನೇಶಣ್ಣನನ್ನು ನೋಡುತ್ತಾರೆ. ದಿನೇಶಣ್ಣನಿಗೆ ಕಣ್ಣಂಚಿನಲ್ಲಿ ನೀರು. ಅವರು ಶಂಕರಿಯನ್ನು ನೋಡಿ ತಲೆ ನೇವರಿಸುತ್ತಾರೆ. ಮತ್ತೆ ಮನೆಯೊಳಗೆ ಹೋಗುತ್ತಾರೆ. ಶಂಕರಿ ಆಚೆ ಹೋದ ಮಗನ ಕಡೆಗೇ ನೋಡುತ್ತಾ ಸುಮ್ಮನಿರುತ್ತಾರೆ. ಅವರ ಕಣ್ಣಲ್ಲೂ ಒಂದು ಹನಿ ನೀರು.
ಹೊರಾಂಗಣ. ಸಮುದ್ರ ತೀರ - ನಸು ಬೆಳಗ್ಗೆ
ಸಮುದ್ರ ದಡದಲ್ಲಿ, ಐತ ತನ್ನ ಸೈಕಲ್ ನಿಲ್ಲಿಸಿ, ಸಮುದ್ರವನ್ನೇ ದಿಟ್ಟಿಸುತ್ತಿದ್ದಾನೆ. ದೂರದಲ್ಲಿ ಆಡುತ್ತಿರುವ ನಾಯಿಗಳನ್ನು ನೋಡುತ್ತಿದ್ದಾನೆ. ಇನ್ಯಾರೋ ಮಕ್ಕಳು ದೂರದಲ್ಲಿ ಆಡುತ್ತಿದ್ದಾರೆ. ಐತನ ಮುಖ ನಿರ್ಭಾವುಕ. ಎಲ್ಲವನ್ನೂ ಕಂಡರೂ, ಏನೂ ಕಾಣದಂತೆ ಇದ್ದಾನೆ.
ಒಳಾಂಗಣ. ಯಾವುದೋ ಮಾಲ್ - ಹಗಲು
ಸುಗಂಧಿ ಹಾಗೂ ಪ್ರಮೀಳ ಈಗ ಒಂದು ಮಾಲ್ನಲ್ಲಿದ್ದಾರೆ. ಜೊತೆಗೆ ರಾಕೇಶನೂ ಇದ್ದಾನೆ. ಅವರು ಅಲ್ಲಿನ ಎಲ್ಲಾ ವಿಷಯಗಳನ್ನು ನೋಡಿ ಬೆರಗಾಗಿದ್ದಾರೆ.
ಸುಗಂಧಿ
ಏ ಇವನೇ.. ಆ ಸೆಂಟಿನ ಹೆಸರೇ ಗೊತ್ತಿಲ್ಲ. ಅದಿಲ್ಲಿ ಗ್ಯಾರೆಂಟಿ ಸಿಗ್ತದಾ?
ರಾಕೇಶ ಹೌದು ಎನ್ನುವಂತೆ ಜಂಬದ ನಗು ನಗುತ್ತಾನೆ.
ರಾಕೇಶ್
ಹ! ಸಿಗದೆ ಏನು?
ಪ್ರಮೀಳ
ಅಲ್ಲ.. ಅದು ದುಬೈಯದ್ದುಂತ ಹೇಳಿದ್ರು ಅಕ್ಕ. ಮತ್ತೆ ಇಲ್ಲಿ ಹೇಗೆ ಸಿಗೋದು?
ರಾಕೇಶ
ನನ್ನನ್ನು ಎಂತ ಅನ್ಕೊಂಡಿದ್ದೀರಿ? ನಾನು ಕೋರ್ಟಲ್ಲಿ ಕೆಲ್ಸ ಮಾಡೋದು. ಅಲ್ಲಿ ಎಂತೆಂಥಾ ಜನ ಬರ್ತಾರೆ ಗೊತ್ತುಂಟಾ? ಆ ವಿಷಯ ಗೊತ್ತಾದ್ರೆ ನೀವು ಇಲ್ಲಿಯೇ ತಲೆ ಚಕ್ಕರ್ ಹೊಡ್ದು ಬೀಳ್ತೀರಿ ಅಷ್ಟೇ! ಎಲ್ಲಾ ಇಲ್ಲಿ ಸಿಗ್ತದೆ. ಸುಮ್ಮನೆ ಬನ್ನಿ..
ಅವರು ಮತ್ತಷ್ಟು ಮುಂದೆ ಹೋಗಿ ಸೆಂಟುಗಳಿಟ್ಟಿರುವ ವಿಭಾಗಕ್ಕೆ ಬರುತ್ತಾರೆ. ಅಲ್ಲಿ ಇರುವ ಕಲೆಕ್ಷನ್ ನೋಡಿ ಆಕೆಗೆ ಅಚ್ಚರಿಯಾಗುತ್ತದೆ. ಆಕೆ ಒಂದೊಂದನ್ನೇ ಹಾಕಿ ನೋಡಿ ಸಂಭ್ರಮಿಸುತ್ತಾಳೆ.
ರಾಕೇಶ್
ಇದುವಾ ನೋಡಿ..
ಸುಗಂಧಿ
ಇದಲ್ಲ..
ರಾಕೇಶ್
ಇದಲ್ಲ ಇದಲ್ಲ.. ಬೇರೆ ಬಾಟಲ್ ಕೊಡಿ.. ಹಾ ಇದು.. ಇದು ನೋಡ್ಲಿಕ್ಕೇ ಚಂದ ಉಂಟು.. ಹೀಗೆ ಇಡುವಾಗಲೂ... ಒಂದು ಲುಕ್.. ಇಂಪೋರ್ಟೆಡ್ ಅಲ್ಲಾ?
ಸುಗಂಧಿ ಮೂಸಿ ಮೂಸಿ ನೋಡುತ್ತಾಳೆ. ಆಕೆಗೆ ಬಹಳ ಹಿಡಿಸುತ್ತದೆ. ಅದುವೇ ತಾನು ಹುಡುಕುತ್ತಿರುವ ಸೆಂಟ್ ಎಂಬಂತೆ ರಿಯಾಕ್ಟ್ ಮಾಡುತ್ತಾಳೆ. ಅಲ್ಲೇ ಇರುವ ಅಂಗಡಿಯವನನ್ನು ಸುಗಂಧಿ ಕೇಳುತ್ತಾಳೆ.
ಸುಗಂಧಿ
(ಮೂಸಿ ನೋಡುತ್ತಾ)
ಹಾ! ಇದುವೇ ಇದುವೇ...! ಎಷ್ಟಿದಕ್ಕೆ?
ಅಂಗಡಿಯವನು
(ಸೆಂಟು ಬಾಟಲ್ ವಾಪಾಸ್ ತೆಗೆದುಕೊಂಡು ಅದರಲ್ಲಿನ ಲೇಬಲ್ ನೋಡಿ)
ಆರು ಸಾವಿರದ ಐನೂರು.
ಸುಗಂಧಿಗೆ ಸ್ವಲ್ಪ ಗಾಬರಿಯಾಗುತ್ತದೆ. ಆಕೆ ತನ್ನ ಇರುಸು ಮುರುಸನ್ನು ಅಡಗಿಸಿಕೊಳ್ಳುತ್ತಾ ರಾಕೇಶನನ್ನು ನೋಡುತ್ತಾಳೆ. ಅವರಲ್ಲಿ ಅಷ್ಟು ದುಡ್ಡು ಇಲ್ಲ ಅನ್ನುವುದು ಸ್ಪಷ್ಟವಾಗುತ್ತದೆ. ರಾಕೇಶ ಪರಿಸ್ಥಿತಿಯನ್ನು ಮ್ಯಾನೇಜ್ ಮಾಡಲು ಪ್ರಯತ್ನಿಸುತ್ತಾನೆ.
ರಾಕೇಶ
ಇದು ಈಗ ಬೇಡ. (ಅಂಗಡಿಯವನಿಗೆ) ಇದನ್ನು ತೆಗೆದಿಡಿ, ಹಣ ತೆಗೆದುಕೊಂಡು ಬರ್ತೇವೆ.
ಅಂಗಡಿಯಾತ
ಈಗ ಬೇಡ್ವಾ?!
ರಾಕೇಶ್
ಬರ್ತೇವೆ.. ನಾಳೆ ನಾಡಿದ್ದಲ್ಲೇ ಬರ್ತೇವೆ..
ರಾಕೇಶ ಮುಜುಗರದಲ್ಲಿ ಸಣ್ಣಗೆ ನಗುತ್ತಾನೆ. ಪ್ರಮೀಳಾನೂ ಜೊತೆಗೆ ಇರಿಸುಮುರಿಸು ನಗೆ ಬೀರುತ್ತಾಳೆ.
ಹೊರಾಂಗಣ. ಸಮುದ್ರದಲ್ಲಿ - ಹಗಲು
ಸಮುದ್ರದಲ್ಲಿ ಫಿಶಿಂಗ್ನ ಮಾಂಟಾಜ್ ಶಾಟ್ಸ್ ಕಾಣುತ್ತೇವೆ.
ಹೊರಾಂಗಣ. ದಿನೇಶಣ್ಣನ ಮನೆ - ಹಗಲು
ದಿನೇಶಣ್ಣನ ಮನೆಯ ಎದುರು ತೆಂಗಿನ ಕಾಯಿಗಳನ್ನು ಹಾಕಿ ಎಣಿಸಲಾಗುತ್ತಿದೆ. ಅಲ್ಲಿ ಕೆಲವರು ಬಂದು ದಿನೇಶಣ್ಣನೊಂದಿಗೆ ಹಣದ ವ್ಯವಹಾರ ಮಾಡುತ್ತಿದ್ದಾರೆ. ದಿನೇಶಣ್ಣ ಅವರ ದುಡ್ಡು ಎಣಿಸಿ ಕೊಡುತ್ತಿದ್ದಾನೆ. ಅಷ್ಟರಲ್ಲಿ ಅಲ್ಲಿಗೆ ಬನ್ನಂಜೆ ಹಾಗೂ ಮಾಧವ ಬರುತ್ತಾರೆ. ಮಾಧವ ಒಂದು ದೊಡ್ಡ ಬಲೆ ಎತ್ತಿಕೊಂಡು ಬಂದಿರುತ್ತಾನೆ. ಅವರನ್ನು ನೋಡಿ ದಿನೇಶಣ್ಣನಿಗೆ ಸಂತೋಷ.
ದಿನೇಶಣ್ಣ
ಆ... ಬನ್ನಿ ಬನ್ನಿ ಬನ್ನಿ... ಏನು.. ಐತಣ್ಣನ ಮಾಲು ಭಾರೀ ಜೋರಿತ್ತಾ ಹೇಗೆ? ಕಡಲಿಗೆ ಹೋದವರಿಗೆ ಬರ್ಲಿಕ್ಕೆ ಇಷ್ಟೊತ್ತು ಬೇಕಾ?
ಬನ್ನಂಜೆ
ಅದು ನಿನ್ನೆ... ಕಡಲಲ್ಲಿ .. ನಿಮಿಗ್ಗೊತ್ತಿರ್ಬೋದು..
ದಿನೇಶಣ್ಣ
ಹಂ ಗೊತ್ತಾಯ್ತು.. ಮಾಧವ ಅವರ ಬೆಂಡೆತ್ತಿದ್ನಂತಲ್ಲ.. ಇವನು ಇರೋವಾಗ ನಂಗೆ ಯಾಕೆ ಚಿಂತೆ?
ಮಾಧವ ಸ್ವಲ್ಪ ನಗುತ್ತಾನೆ. ದಿನೇಶಣ್ಣ ಮಾಧವನ ಬಳಿಗೆ ಬರುತ್ತಾನೆ.
ದಿನೇಶಣ್ಣ
ಆದ್ರೆ ಮಾಧವ.. ಒಂದು ಮಾತು. ಈಗ ಮೊದಲಿನ ಹಾಗಲ್ಲ. ನೀನೀಗ ಸಂಸಾರಸ್ಥ. ನಿನ್ನನ್ನೇ ನಂಬಿಕೊಂಡು ಒಂದು ಜೀವ ಉಂಟು ಅನ್ನೋದು ನಿನಗೆ ನೆನಪಿರಬೇಕು.
ಮಾಧವ ಮತ್ತಷ್ಟು ನಾಚಿಕೊಳ್ಳುತ್ತಾನೆ.
ಮಾಧವ
ಸುರುವಿಗೆ ಬಲೆ ಹಾಕಿದ್ದು ನಾವು. ಮತ್ತೆ ಅವ್ರು ಬಂದು ಬಲೆ ಹಾಕಿದ್ರೆ ಸುಮ್ಮನೆ ಕೂರ್ಲಿಕ್ಕಾಗ್ತದಾ?
ದಿನೇಶಣ್ಣ
ಅದೆಲ್ಲಾ ಇರಲಿ... ನಿನ್ನಂಥಾ ತಂಡೇಲ ಸಿಗೋದು ಬಹಳ ಅಪರೂಪ. ಎ ತನಿಯಪ್ಪಣ್ಣ.. ಇವನ ಲೆಕ್ಕದ್ದು ಎಷ್ಟುಂಟು ಸಾಲ?
ತನಿಯಪ್ಪಣ್ಣ
(ಲೆಕ್ಕ ಪತ್ರ ನೋಡಿ)
ಇವನ ಅಪ್ಪಂದು ಎರಡು. ಇವನದ್ದು ಒಂದೂ ಕಾಲು ಲಕ್ಷ.
ದಿನೇಶಣ್ಣ
ಹ್ಮ್.. ಒಟ್ಟು ಮೂರೂ ಕಾಲು ಲಕ್ಷ. ಮಾಧವ.. ನಿನ್ನ ಸಾಲ ತೀರಿತು ಅಂದುಕೋ. ಹಾಗೆ.. ಅಲ್ಲೊಂದು ಕೈಯ್ಯಲ್ಲಿ ಬೀಸುವ ಬಲೆ ಉಂಟು. ಅದನ್ನೂ ತೆಗೆದುಕೊಂಡು ಹೋಗು. ಕೆಲಸ ಮಾಡು. ಒಟ್ಟಿನಲ್ಲಿ ಮಾಧವ, ನೀನು ಚೆನ್ನಾಗಿರಬೇಕು.
ಮಾಧವ ಮತ್ತು ಬನ್ನಂಜೆ ಶಾಕ್ ಆಗುತ್ತಾರೆ. ಅಂಗಳದಲ್ಲಿ ಇದ್ದ ಇತರರೂ ಸ್ವಲ್ಪ ಅಚ್ಚರಿಗೊಳ್ಳುತ್ತಾರೆ. ಅವರಿಗೆ ಸಂತೋಷವೂ ಆಗುತ್ತದೆ.
ಮಾಧವ
ಅಲ್ಲ.. ದಿನೇಶಣ್ಣ... ನಂಗೆ..
ದಿನೇಶಣ್ಣ
(ಮುಗುಳ್ನಗುತ್ತಾ ಹತ್ತಿರ ಬಂದು)
ಮಾಧವ, ನನಗೆ ಒಬ್ಬನೇ ಮಗ. ಹೇಗಿದ್ರೂ ಅವನಿಗಿದೆಲ್ಲಾ ಬೇಡ. ಈ ವ್ಯಾಪಾರ ವಹಿವಾಟು ಯಾವುದರಲ್ಲೂ ಅವನಿಗೆ ಉತ್ಸಾಹವಿಲ್ಲ. ಅವನಿಗೆ ಈ ಕೆಲಸವೂ ಗೊತ್ತಿಲ್ಲ. ನಿನಗೆ ಕೆಲಸ ಗೊತ್ತಿದೆ. ಕೈಯ್ಯಲ್ಲಿ ಕಸುಬು ಇದೆ. ಬಲೆಯ ಅಗತ್ಯವೂ ಇದೆ. ತೆಗೆದುಕೊಂಡು ಹೋಗು. ಸುಗಂಧಿಯನ್ನು ಚೆನ್ನಾಗಿ ನೋಡಿಕೋ.
ಮಾಧವ ಹಾಗೂ ಬನ್ನಂಜೆಗೆ ಇರಿಸು-ಮುರಿಸಾಗುತ್ತದೆ.
ಬನ್ನಂಜೆ
ಅದ್ ಹೌದು ದಿನೇಶಣ್ಣ. ಇವನನ್ನು ಹೀಗೇ ಬಿಟ್ರೆ ಪೆಟ್ಟು ಗಿಟ್ಟು ಮಾಡಿಕೊಂಡು...
ದಿನೇಶಣ್ಣ ಮಾಧವನ ಎರಡೂ ಭುಜದ ಮೇಲೆ ಕೈ ಇಡುತ್ತಾರೆ...
ದಿನೇಶಣ್ಣ
ಹಾ.. ಮಾಧವ.. ನಿನ್ನ ಮನೆ ಇರುವಲ್ಲಿ ಕಡಲು ಕೊರೆತ ಜೋರುಂಟು. ಗವರ್ನ್ಮೆಂಟ್ನವರು ಈ ಸರ್ತಿ ಅಲ್ಲಿ ಕಲ್ಲು ಹಾಕ್ತಾರಂತೆ.. ನೀನೂ ಸುಗಂಧಿಯೂ ನನ್ನ ಬಿಡಾರಕ್ಕೆ ಹೋಗಿ. ಅದನ್ನು ನಿಮಗೆ ಬಿಟ್ಟು ಕೊಡ್ತೇನೆ. ಒಟ್ಟಾರೆ ನೀನು ಸುಖವಾಗಿರ್ಬೇಕು ಮಾಧವ.
ಮಾಧವನಿಗೆ ದಿನೇಶಣ್ಣನ ಕಣ್ಣು ನೋಡಲೂ ಆಗದಷ್ಟು ಕಸಿವಿಸಿ. ಬನ್ನಂಜೆಗೂ ಇದನ್ನು ಹೇಗೆ ಜೀರ್ಣಿಸಿಕೊಳ್ಳುವುದು ಎನ್ನುವ ಕಸಿವಿಸಿ.
ಮಾಧವ
(ಕಷ್ಟದಿಂದ ಬಾಯಿ ತೆರೆಯುತ್ತಾನೆ)
ಆದರೆ ದಿನೇಶಣ್ಣಾ..
ದಿನೇಶಣ್ಣ ನಸುನಗುತ್ತಾ ಮಾಧವನ ಮುಖವನ್ನೇ ನೋಡುತ್ತಿದ್ದಾನೆ. ಬನ್ನಂಜೆಯೂ ಮೌನವಾಗಿದ್ದಾನೆ. ಮಾಧವ ಹಾಗೂ ಬನ್ನಂಜೆಯ ಮುಖದಲ್ಲಿ ಸ್ಪಷ್ಟವಾಗಿ ಗೊಂದಲ ಕಾಣುತ್ತಿದೆ.
ನಾವು ಸಮುದ್ರ ಕೊರೆತ ಆಗುತ್ತಿರುವ ಸ್ಥಳದಲ್ಲಿ ಇರುವ ಮಾಧವನ ಮನೆಯನ್ನು ಕಾಣುತ್ತೇವೆ. ಸಮುದ್ರ ಉಕ್ಕಿ ದಡಕ್ಕೆ ಹೊಡೆಯುತ್ತಿದೆ.
ಹೊರಾಂಗಣ. ಭೂತ ಸ್ಥಾನ - ಬೆಳಗ್ಗೆ
ಮಾಧವ ಹಾಗೂ ಬನ್ನಂಜೆ ಇಬ್ಬರೂ ದಿನೇಶಣ್ಣನ ಮನೆಯಿಂದ ಹೊರಟಿದ್ದಾರೆ. ಜೊತೆಯಾಗಿ ನಡೆಯುತ್ತಿದ್ದಾರೆ. ದಾರಿಯಲ್ಲಿ, ಭೂತಸ್ಥಾನ ಕಾಣಿಸುತ್ತದೆ. ಇಬ್ಬರೂ ಭಕ್ತಿಯಿಂದ ಅದಕ್ಕೆ ನಮಸ್ಕರಿಸುತ್ತಾರೆ. ಅವರಿಬ್ಬರ ನಡುವೆ ವಿಚಿತ್ರ ಮೌನವಿದೆ. ಅವರಿಬ್ಬರೂ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿರಲು, ಅದೇ ದಾರಿಯಲ್ಲಿ ಸೈಕಲ್ ಬಿಡುತ್ತ ಬರುವ ಐತ, ಮಾಧವ ಹಾಗೂ ಬನ್ನಂಜೆಯ ಮಧ್ಯದಿಂದ ಹಾದುಹೋಗುತ್ತಾನೆ. ಅವನ ಸೈಕಲ್ ಬೆಲ್ ಶಬ್ದ ಕೇಳಿಸುತ್ತದೆ.
ಒಳಾಂಗಣ. ಯಕ್ಷಗಾನ ಚೌಕಿ - ಸಂಜೆ
ಯಕ್ಷಗಾನ ಚೌಕಿಯಲ್ಲಿ ವೇಷ ಹಾಕುವುದು ಸಾಗುತ್ತಿದೆ. ಅಷ್ಟರಲ್ಲಿ ಅಲ್ಲಿಗೆ ಮೇಳದ ಯಜಮಾನ ಬರುತ್ತಾನೆ.
ಯಜಮಾನ
ಪ್ರದೀಪರೆ... ಇವತ್ತು ಪೇತ್ರಿಯವರು ಬರೂದಿಲ್ಲಂತೆ. ಏನೋ ಆಕ್ಸಿಡೆಂಟ್ ಆಗಿ ಕಾಲಿಗೆ ಪೆಟ್ಟಾಗಿದೆಯಂತೆ. ಇವತ್ತು ಬಣ್ಣದ ವೇಷ ನಿಮ್ಮದೇ...
ಪ್ರದೀಪ
ಹಾಗಾದ್ರೆ ರಾಜನ ವೇಷ ಹಾಕೋದು ಯಾರು? ಇಲ್ಲ ಇಲ್ಲ.. ನಾನು ಬಣ್ಣದ ವೇಷ ಹಾಕೋದಿಲ್ಲ. ನಂದೇನಿದ್ದರೂ ರಾಜ ವೇಷವೇ.
ಯಜಮಾನ
ನೀವೊಂದು ಎಂತ ಕಲಾವಿದ? ವೇಷ ಯಾವುದಾದರೇನು? ಪಾತ್ರದ ಸತ್ವ ತಿಳಿದು ರಂಗಸ್ಥಳದಲ್ಲಿ ಮೆರೆಯುವವನೇ ನಿಜವಾದ ಕಲಾವಿದ. ರಾಜ ವೇಷ ರಮೇಶ ಹಾಕ್ಲಿ. ನಿಮ್ಮದು ಬಣ್ಣದ ವೇಷ.
ಪ್ರದೀಪನಿಗೆ ಸ್ವಲ್ಪ ಅಸಮಾಧಾನ. ಆದರೂ ಆಗಲಿ ಎನ್ನುವಂತೆ ತಲೆಯಾಡಿಸುತ್ತಾನೆ. ತನ್ನ ಕೈಯ್ಯಲ್ಲಿದ್ದದ್ದನ್ನು ಕೆಳಗಿಟ್ಟು ಎಲ್ಲಿಂದ ಆರಂಭಿಸಲಿ ಎನ್ನುವಂತೆ ಅತ್ತಿತ್ತ ನೋಡುತ್ತಾನೆ. ಆಗ ಹಿಂದಿನಿಂದ ಒಂದು ಧ್ವನಿ ಬರುತ್ತದೆ.
ಕಲಾವಿದ ೧
ವಿದೂಷಕ... ರಾಜವೇಷ ಹಾಕಿದರೆ. ರಾಜವೇಷದವನು ರಾಕ್ಷಸ ವೇಷ ಹಾಕಬೇಕಷ್ಟೇ!
ಯಾರೋ ಗುಸುಗುಸು ನಗುತ್ತಾರೆ. ಪ್ರದೀಪನಿಗೆ ಅದು ಇಷ್ಟವಾಗುವುದಿಲ್ಲ. ಆದರೂ ಕೇಳಿಯೂ ಕೇಳದಂತೆ ಇರುತ್ತಾನೆ. ಈ ದೃಶ್ಯದುದ್ದಕ್ಕೂ ಹಿನ್ನೆಲೆಯಲ್ಲಿ ಯಕ್ಷಗಾನ ಭಾಗವತಿಕೆ ಕೇಳಿಬರುತ್ತಿದೆ.
ಹೊರಾಂಗಣ. ಬನ್ನಂಜೆಯ ಮನೆ - ಹಗಲು
ಬನ್ನಂಜೆ ಈಗ ಅವನ ಮನೆಯಲ್ಲಿ ಶೇವ್ ಮಾಡಿಕೊಳ್ಳುತ್ತಿದ್ದಾನೆ. ರೇಡಿಯೋದಲ್ಲಿ ಯಾವುದೋ ಹಾಡು ಮೂಡಿ ಬರುತ್ತಾ ಇದೆ. ಯಕ್ಷಗಾನದ ಭಾಗವತಿಕೆ ಕೇಳಿಬರುತ್ತಿದೆ. (ಹಿಂದಿನ ದೃಶ್ಯದಿಂದ ಮುಂದುವರೆದಂತೆ) ಆಗ ಹೊರಗಿನಿಂದ ಕಾರಿನ ಶಬ್ದ ಕೇಳಿಸುತ್ತದೆ. ಕಾರಿನಿಂದ ಧಡ-ಭಡ ಎನ್ನುವ ಯಾವುದೋ ಪಾಶ್ಚಾತ್ಯ ಸಂಗೀತ ಕೇಳಿಸಿಬರುತ್ತಿದೆ. ಆ ಧ್ವನಿ ಹೆಚ್ಚುತ್ತಾ, ಯಕ್ಷಗಾನದ ಧ್ವನಿಯನ್ನು ಮೀರಿಸಲಾರಂಭಿಸುತ್ತದೆ. ಬನ್ನಂಜೆಗೆ ಕುತೂಹಲವಾಗುತ್ತದೆ. ಅವನು ರೇಡಿಯೋ ಆಫ್ ಮಾಡಿ ಮನೆಯಿಂದ ಆಚೆಗೆ ಬರುತ್ತಾನೆ.
ಮನೆಯಾಚೆ ಒಂದು ಕಾರು ನಿಲ್ಲಿಸಿ ಅದರಿಂದ ರಾಕೇಶ ಹಾಗೂ ಸಂಜೀವ ಇಬ್ಬರೂ ಇಳಿಯುತ್ತಿದ್ದಾರೆ. ಸಂಜೀವನ ಮುಖದಲ್ಲಿ ಹೆಮ್ಮೆ. ಹೇಗಿದೆ ಕಾರು ಎನ್ನುವಂತೆ ಅಪ್ಪನನ್ನು ನೋಡುತ್ತಾನೆ. ಬನ್ನಂಜೆಗೆ ಗೊಂದಲ. ಅಷ್ಟರಲ್ಲಿ ಅಲ್ಲಿಗೆ ಸಂಜೀವನ ತಂಗಿ ಗೌರಿಯೂ ಬರುತ್ತಾಳೆ. ಅವಳೂ ಕಾರು ನೋಡಿ ಅಚ್ಚರಿಯಲ್ಲಿ ನಿಲ್ಲುತ್ತಾಳೆ.
ಗೌರಿ
ಅಣ್ಣಾ... ಇದು ಯಾರ ಕಾರ್?
ರಾಕೇಶ
(ನಗುತ್ತಾ)
ಗಾಡಿ ಸಂಜೀವನ ಹೆಸರಿಗೆ ಮಾಡ್ಸಿದ್ದೇನೆ. ಇವತ್ತಿಂದ ಇದು ನಿನ್ನದೆ!
ಸಂಜೀವ
(ಅಪ್ಪನನ್ನು ನೋಡುತ್ತಾ)
ದಿನೇಶಣ್ಣ ಕೊಡಿಸಿದ್ದು ಇದು. ಇನ್ನು ನಾನು ಟ್ಯಾಕ್ಸಿ ಓಡಿಸ್ತೇನೆ!
ಬನ್ನಂಜೆಗೆ ಇವೆಲ್ಲವೂ ಗೊಂದಲ ಮೂಡಿಸುತ್ತಿದೆ. ಉಳಿದವರೆಲ್ಲರೂ ಸಂತೋಷದಿಂದ ಇರಬೇಕಾದರೆ, ಬನ್ನಂಜೆಗೆ ತುಸು ದೂರದಲ್ಲಿ ದೈವ, ತನ್ನ ಖಡ್ಗ ಝಳಪಿಸುತ್ತಾ ಕುಣಿಯುತ್ತಿರುವಂತೆ ಕಾಣಿಸುತ್ತದೆ. ಉಳಿದದ್ದೆಲ್ಲವೂ ಸ್ಲೋ-ಮೋಷನ್ನಿನಲ್ಲಿ ಕಾಣಿಸಲಾರಂಭಿಸುತ್ತದೆ.
ಹೊರಾಂಗಣ. ಸಮುದ್ರದ ಮೇಲೆ - ಹಗಲು
ದೋಣಿಯ ಮೇಲೆ ಒಂದು ಮೀನು ಬಿದ್ದು ಒದ್ದಾಡುತ್ತಿದೆ.
ಸಮುದ್ರದಲ್ಲಿ ಬನ್ನಂಜೆ ಮತ್ತು ಮಾಧವ ಮೀನು ಹಿಡಿಯುತ್ತಿದ್ದಾರೆ. ಇತರರೂ ಜೊತೆಗಿದ್ದಾರೆ. ಮೀನು ಹಿಡಿಯುವ ಮಾಮೂಲಿನ ಪ್ರಕ್ರಿಯೆಗಳು ನಡೆಯುತ್ತಿವೆ. ಆದರೆ ಮಾಧವ ಹಾಗೂ ಬನ್ನಂಜೆ ಇಬ್ಬರೂ ಸ್ವಲ್ಪ ಅನ್ಯಮನಸ್ಕರಾಗಿಯೇ ಇದ್ದಾರೆ. ಅವರಿಬ್ಬರ ನಡುವೆ ಏನೋ ಅಸಹಜತೆ ಸ್ಪಷ್ಟವಾಗಿ ಕಾಣಿಸುತ್ತಿದೆ. ಏನಾಯಿತು ಎಂದು ಇಬ್ಬರೂ ಪರಸ್ಪರ ಕೇಳಿಕೊಳ್ಳುತ್ತಾರೆ. ಆದರೆ ಇಬ್ಬರೂ ಏನೂ ಹೇಳದೇ ಮೌನವಾಗುತ್ತಾರೆ.
ಹೊರಾಂಗಣ. ದಿನೇಶಣ್ಣನ ಮನೆ - ಹಗಲು
ಪ್ರಮೀಳ ದಿನೇಶಣ್ಣನ ಮನೆಯಲ್ಲಿ ಬಟ್ಟೆ ಒಗೆದು ಅದನ್ನು ಹರಗುತ್ತಿದ್ದಾಳೆ. ಅಷ್ಟರಲ್ಲಿ ಅಲ್ಲಿಗೆ ಸುಗಂಧಿ ಬರುತ್ತಾಳೆ. ಅವಳ ಕೈಯ್ಯಲ್ಲಿ ಮೀನಿನ ಬುಟ್ಟಿ ಇದೆ.
ಸುಗಂಧಿ
ಏನು.. ಇವತ್ತು ಬರೋದಿಲ್ವಾ?
ಪ್ರಮೀಳ
ಲೇಟ್ ಆಯ್ತು ಮಾರಾಯ್ತಿ. ಅಮ್ಮ ಇವತ್ತು ಬಟ್ಟೆಯಲ್ಲೇ ಎಲ್ಲಾ ಮಾಡಿಕೊಂಡಿದ್ದಾರೆ. ಬಟ್ಟೆ ಒಗೆಯೋದು ಇಷ್ಟು ಹೊತ್ತಾಯ್ತು. ಲೇಟ್ ಆಗೋಯ್ತು ಮಾರಾಯ್ತಿ.
ಸುಗಂಧಿ
ಸರಿ. ಹಾಗಾದ್ರೆ ನಾನು ಮುಂದೆ ಹೋಗಿರ್ತೇನೆ.
ಪ್ರಮೀಳ
(ಆಯ್ತೆಂದು ತಲೆ ಆಡಿಸಿದವಳು, ಅತ್ತಿತ್ತ ನೋಡಿ ಸ್ವಲ್ಪ ಸಣ್ಣ ಧ್ವನಿಯಲ್ಲಿ)
ಹೇ... ಸುಗಂಧಿ... ಇಲ್ಲಿ ಬಾ.
ಸುಗಂಧಿಗೆ ತುಸು ಗೊಂದಲ... ಆದರೂ ಪ್ರಮೀಳನ ಧ್ವನಿ ಕೇಳಿ ಆಕೆ ನಿಧಾನಕ್ಕೆ ಅತ್ತಿತ್ತ ನೋಡುತ್ತಲೇ ಒಳಗೆ ಹೋಗುತ್ತಾಳೆ.
ಒಳಾಂಗಣ. ದಿನೇಶಣ್ಣನ ಮನೆ - ಹಗಲು
ಪ್ರಮೀಳ ಹಾಗೂ ಸುಗಂಧಿ ಈಗ ಮನೆಯೊಳಗೆ ಬರುತ್ತಾರೆ. ಸುಗಂಧಿ ಮನೆಯ ಒಳಗಿನ ಒಪ್ಪ ಓರಣಗಳನ್ನು ನೋಡಿ ಬೆರಗುಗೊಳ್ಳುತ್ತಾಳೆ. ಪ್ರಮೀಳ ಹಾಗೇ ಹೋಗಿ ದಿನೇಶಣ್ಣನ ಕೋಣೆಯೊಳಗೆ ಸುಗಂಧಿಯನ್ನು ಕರೆದುಕೊಂಡು ಹೋಗುತ್ತಾಳೆ. ಅಲ್ಲಿ ಕವಾಟು ತೆಗೆದು ತೋರಿಸುತ್ತಾಳೆ. ಅಲ್ಲಿ ವಿಧವಿಧದ ಸೆಂಟ್ ಬಾಟಲಿಗಳು ಇಟ್ಟುಕೊಂಡಿರುತ್ತವೆ. ಸುಗಂಧಿಗೆ ಅವುಗಳನ್ನು ನೋಡಿ ಅಚ್ಚರಿ. ಆಕೆ ಒಂದೊಂದನ್ನೇ ತೆಗೆದು ಮೂಸಿ ಸಂತೋಷ ಪಡುತ್ತಾಳೆ.
ಪ್ರಮೀಳ
ಇವತ್ತು ದಿನೇಶಣ್ಣ ಇಲ್ಲ. ಪೇಟೆಗೆ ಹೋಗಿದಾರೆ.
ಸುಗಂಧಿ ಒಮ್ಮೆ ಪ್ರಮೀಳನನ್ನು ನೋಡುತ್ತಾಳೆ. ಮತ್ತೆ ಸೆಂಟು ಬಾಟಲುಗಳನ್ನು ನೋಡಿ, ಒಂದೊಂದನ್ನೇ ಮೂಸಿ ಕೊನೆಗೆ ಒಂದನ್ನು ತನ್ನ ಮೈಗೆ ಹಾಕಿಕೊಳ್ಳುತ್ತಾಳೆ. ಬಾಟಲನ್ನು ವಾಪಾಸ್ ಇಡುತ್ತಾಳೆ. ಪ್ರಮೀಳ ಹಾಗೂ ಸುಗಂಧಿ ಅಲ್ಲಿಂದ ಹೊರಡುತ್ತಾರೆ. ಸುಗಂಧಿ ಒಮ್ಮೆ ನಿಂತು ಮತ್ತೆ ಹಿಂದಿರುಗಿ ಅಲ್ಲಿರುವ ಸೆಂಟು ಬಾಟಲಿಗಳನ್ನು ಒಮ್ಮೆ ಆಸೆಯ ಕಣ್ಣುಗಳಿಂದ ದಿಟ್ಟಿಸಿ ನೋಡಿ, ಅಲ್ಲಿಂದ ಹೊರಡುತ್ತಾಳೆ.
ಅವರಿಬ್ಬರೂ ಕೋಣೆಯಿಂದ ಹೊರಗೆ ಬರುವಾಗ ಅಲ್ಲಿ ವೀಲ್ ಚೇರಿನಲ್ಲಿ ಕುಳಿತಿರುವ ಶಂಕರಿ ಕಾಣಿಸುತ್ತಾರೆ. ಆಕೆ ವಿಚಿತ್ರವಾಗಿ ಇವರಿಬ್ಬರನ್ನೇ ನೋಡುತ್ತಿರುತ್ತಾರೆ. ಸುಗಂಧಿಗೆ ಗಾಬರಿಯಾಗುತ್ತದೆ.
ಪ್ರಮೀಳ
ಅವರನ್ನು ನೋಡಿ ಟೆನ್ಷನ್ ಆಗ್ಬೇಡ. ಅವ್ರಿಗೆ ನಕ್ಕರೂ ಗೊತ್ತಾಗೋದಿಲ್ಲ. ಅತ್ತರೂ ತಿಳಿಯೋದಿಲ್ಲ. ಬಾ.. ಹೋಗುವ.
ಸುಗಂಧಿಯೂ ಪ್ರಮೀಳಾನೂ ಅಲ್ಲಿಂದ ಹೊರಡುತ್ತಾರೆ. ಸುಗಂಧಿ ಶಂಕರಿಯನ್ನೇ ದಿಟ್ಟಿಸುತ್ತಾ ಅಲ್ಲಿಂದ ಹೊರಡುತ್ತಾಳೆ. ಆಕೆಗೆ ಶಂಕರಿಯನ್ನು ನೋಡಿ ವಿಚಿತ್ರ ಅನ್ನಿಸುತ್ತದೆ. (ನಟಿಗೆ ಸೂಚನೆ: ಎಲ್ಲವೂ ಇದ್ದೂ ಏನೂ ಇಲ್ಲವಲ್ಲಾ ಈಕೆಗೆ ಎನ್ನುವುದು ಸುಗಂಧಿಯ ಕೌತುಕ)
ಒಳಾಂಗಣ/ಹೊರಾಂಗಣ. ಮಾಧವ ಸುಗಂಧಿಯರ ಹೊಸ ಮನೆ - ಹಗಲು
ಮಾಧವ ಹಾಗೂ ಸುಗಂಧಿ ತಮ್ಮ ಹೊಸ ಮನೆಗೆ ಬರುತ್ತಾರೆ. ಅದು ಸಣ್ಣದಾದರೂ, ಸುಂದರವಾದ ಮನೆ. ಗಟ್ಟಿಯಾದ ಮನೆ. ಸುತ್ತಲೂ ಸುಂದರವಾದ ಪರಿಸರವಿದೆ. ಅಲ್ಲಿ ಅವರ ರೊಮ್ಯಾನ್ಸಿನ ಹೊಸ ಆಯಾಮದೊಂದಿಗೆ ನಾವು ಅವರಿಬ್ಬರೂ ಅಲ್ಲಿ ಸಂಭ್ರಮಿಸುತ್ತಿರುವುದನ್ನು ಒಂದು ಮೊಂಟಾಜ್ ಮೂಲಕ ಕಾಣುತ್ತೇವೆ.
ಹೊರಾಂಗಣ. ಯಾವುದೋ ಮಾಲ್ - ಹಗಲು
ಮಾಧವ ಹಾಗೂ ಸುಗಂಧಿ ಈಗ ಮನೆಗೆ ಬೇಕಾದ ವಸ್ತುಗಳನ್ನು ಖರೀದಿಸಲು ಪೇಟೆಯಲ್ಲಿ ಸುತ್ತಾಡುತ್ತಿರುವುದು, ಹೊಸ ಬದುಕಿಗೆ ಒಂದು ನಾಂದಿ ಹಾಡುತ್ತಿರುವುದನ್ನು ನಾವು ಕಾಣುತ್ತೇವೆ. ಅವರು ದಾರಿಯಲ್ಲಿ ಮಾಲ್ ಬಳಿಗೆ ಬರುತ್ತಾರೆ. ಸುಗಂಧಿ ಆಸೆ ಕಣ್ಣುಗಳಿಂದ ಆ ಮಾಲ್ ನೋಡುತ್ತಾಳೆ. ಗಂಡನನ್ನು ಕರೆದುಕೊಂಡು ಸೆಂಟ್ ಸೆಕ್ಷನ್ನಿಗೆ ಹೋಗುತ್ತಾಳೆ. ಸುಗಂಧಿ ಆಸೆಗಣ್ಣುಗಳಿಂದ ಆ ಸೆಂಟ್ ಬಾಟಲನ್ನೇ ನೋಡುತ್ತಾಳೆ.
ಅವರ ಆಸೆಗಳು ಬೆಳೆಯುತ್ತಿರುವುದನ್ನು ನಾವು ಒಂದು ಹಾಡಿನ ರೂಪದಲ್ಲಿ ಇಲ್ಲಿ ತೋರಿಸುತ್ತಾ ಸಾಗುತ್ತೇವೆ. ಈ ಹಾಡಿನ ಉದ್ದಕ್ಕೂ, ಮಾಧವ ಹಾಗೂ ಸುಗಂಧಿ ಉತ್ಕಟವಾಗಿ ಒಬ್ಬರನ್ನೊಬ್ಬರು ಪ್ರೀತಿಸುವುದು, ದೈಹಿಕ ಮಿಲನದ ದೃಶ್ಯಗಳನ್ನೂ ಕಾಣುತ್ತೇವೆ. (ಇಲ್ಲಿ ಕಾಮೋತ್ಕಟತೆಯ ಚಿತ್ರಣ ಬೇಕು. ಮಾಧವ ಹಾಗೂ ಸುಗಂಧಿಯ ಸಂಬಂಧ ಬಹಳ ದೈಹಿಕವಾದದ್ದು ಎನ್ನುವುದನ್ನು ತೋರಿಸುವಂತಿರಬೇಕು)
ಒಳಾಂಗಣ/ಹೊರಾಂಗಣ. ಮಾಧವ ಸುಗಂಧಿಯರ ಹೊಸ ಮನೆ - ಹಗಲು
ಅವರು ಮನೆಯನ್ನು ಓರಣವಾಗಿ ಜೋಡಿಸುವುದು, ಪೂಜೆ ಸಲ್ಲಿಸುವುದು ಇತ್ಯಾದಿಗಳನ್ನು ನಾವು ಕಾಣುತ್ತೇವೆ. ಅವರು ಪರಸ್ಪರ ಸ್ಪರ್ಷದಿಂದ ರೋಮಾಂಚನ ಅನುಭವಿಸುವುದು ಇತ್ಯಾದಿಗಳನ್ನು ಕಾಣುತ್ತೇವೆ. ಈ ಹಾಡಿನ ಉದ್ದಕ್ಕೂ, ಒಮ್ಮೊಮ್ಮೆ, ಅದೇನೋ ಯೋಚನೆಯಲ್ಲಿ ಕಳೆದು ಹೋಗಿರುವ ಮಾಧವನನ್ನು ಕಾಣುತ್ತೇವೆ. ಆಗ ಸುಗಂಧಿ ಬಂದು ಅವನನ್ನು ಎಚ್ಚರಿಸಿ ಮುದ್ದಿಸುತ್ತಾಳೆ. ಇನ್ನು ಕೆಲವೊಮ್ಮೆ ಸುಗಂಧಿ ಕಳೆದುಹೋಗಿರಲು, ಮಾಧವ ಬಂದು ಆಕೆಯನ್ನು ಮುದ್ದಿಸಿ ಎಚ್ಚರಿಸುತ್ತಾನೆ.
ಮನೆ ಒಕ್ಕಲಿನ ಸಂಭ್ರಮವೂ ನಡೆಯುತ್ತದೆ. ಅದಕ್ಕೆ ದಿನೇಶಣ್ಣ, ಬನ್ನಂಜೆ ಹಾಗೂ ಇತರರೆಲ್ಲರೂ ಬಂದಿರುತ್ತಾರೆ. ಸಂಜೀವ ತನ್ನ ಕಾರನ್ನು ತರುವುದನ್ನು ಕಾಣುತ್ತೇವೆ. ಮಾಧವ ಸುಗಂಧಿ ಇಬ್ಬರೂ ದಿನೇಶಣ್ಣನ ಕಾಲಿಗೆ ಬೀಳುತ್ತಾರೆ. ಬನ್ನಂಜೆಯ ಕಾಲಿಗೆ ಬೀಳಲು ಹೋದರೆ ಅವನು ಬರಸೆಳೆದು ಅಪ್ಪಿಕೊಳ್ಳುತ್ತಾನೆ. ಸಂಭ್ರಮ, ಭಾವುಕ ವಿಷಯಗಳು ನಡೆಯುತ್ತವೆ. ಅದರ ಹಿನ್ನೆಲೆಯಲ್ಲಿ ಹಾಡು ಇಲ್ಲಿಗೆ ಮುಗಿಯುತ್ತದೆ.
ಹೊರಾಂಗಣ. ಸಮುದ್ರದ ಮೇಲೆ - ಹಗಲು
ಮಾಧವ ಮತ್ತು ಬನ್ನಂಜೆ ದೋಣಿಯಲ್ಲಿದ್ದಾರೆ. ಅವರು ಸಮುದ್ರದಲ್ಲಿ ಮೀನು ಹಿಡಿಯಲು ಸಿದ್ಧತೆಗಳು ನಡೆಯುತ್ತಿವೆ. ಮಾಧವ ಹಾಗೂ ಬನ್ನಂಜೆ ಬಹಳ ಗಂಭೀರವಾಗಿದ್ದಾರೆ. ಅವರಿಬ್ಬರೂ ಒಂದೆಡೆ ಕುಳಿತು ಬಲೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇಬ್ಬರಲ್ಲೂ ನಿರುತ್ಸಾಹ ಎದ್ದು ಕಾಣಿಸುತ್ತಿದೆ.
ಬನ್ನಂಜೆ
ಹೇಗೆ... ಹೊಸ ಮನೆಯಲ್ಲಿ ಎಲ್ಲಾ ಸೆಟ್ ಆಯ್ತಾ?
ಮಾಧವ ಆಯ್ತು ಎನ್ನುವಂತೆ ತಲೆಯಾಡಿಸುತ್ತಾನೆ.
ಮಾಧವ
ಅಲ್ಲ... ಎಲ್ಲ ದೈವ ಹೇಳಿದ ಹಾಗೇ ಆಗ್ತಾ ಉಂಟಲ್ಲ.. ಇದೆಲ್ಲಾ ಸರಿ ಅನಿಸ್ತದಾ ನಿಮಗೆ?
ಬನ್ನಂಜೆ
ಸುಮ್ಮನ್ನೆ ಇಲ್ಲದ್ದೆಲ್ಲಾ ಯೋಚನೆ ಮಾಡಬೇಡ. ದಿನೇಶಣ್ಣ ಇಲ್ಲಿಯವರೆಗೆ ನಿನಗೆ ಏನೂ ಕೊಟ್ಟೆ ಇಲ್ಲವೇ? ದಿನೇಶಣ್ಣ ಸಾಲ ಮನ್ನಾ ಮಾಡಿದ್ರು, ಒಂದು ಬಲೆ ಕೊಟ್ರು, ಮನೆ ಕೊಟ್ರು ಅಂತ ಅದನ್ನೇ ಯಾಕೆ ದೊಡ್ಡದು ಮಾಡ್ಬೇಕು?
ಮಾಧವ
(ಸ್ವಲ್ಪ ಹೊತ್ತು ಯೋಚಿಸಿ)
ಆದ್ರೆ ನಿಮಗೆ ಕಾರು ಬಂತು. ನನಗೆ ಮನೆ, ಬಲೆ, ಬದುಕು.. ಎಲ್ಲಾ ಬಂತು. ಅಷ್ಟು ಕರೆಕ್ಟಾಗಿ ಹೇಳ್ಬೇಕಾದರೆ, ಅದು ದೈವವೇ ಆಗಿರ್ಬೇಕಲ್ವಾ? ಎಂತದೋ.. ನಂಗೆ ನಂಬ್ಲಿಕ್ಕೇ ಆಗ್ತಾ ಇಲ್ಲ.
ಬನ್ನಂಜೆ ಏನೂ ಹೇಳುವುದಿಲ್ಲ. ಮಾಧವ ಬನ್ನಂಜೆ ಏನಾದರೂ ಹೇಳಲಿ ಎಂದು ಕಾಯುತ್ತಾನೆ. ಆದರೆ ಅವನು ಏನೂ ಹೇಳದೇ ಅಲ್ಲಿಂದ ಎದ್ದು ಹೋಗುತ್ತಾನೆ. (ಬನ್ನಂಜೆ ಸುಮ್ಮನಿರುವುದು ಮಾಧವನಿಗೆ ಇಷ್ಟವಾಗುತ್ತಿಲ್ಲ)
ಹೊರಾಂಗಣ. ಯಾವುದೋ ದಾರಿಯಲ್ಲಿ - ಹಗಲು
ಸಂಜೀವ ಕಾರು ನಿಲ್ಲಿಸಿಕೊಂಡು ಗಿರಾಕಿಗೆ ಕಾಯುತ್ತಿದ್ದಾನೆ. ಸುಗಂಧಿ ಮತ್ತು ಪ್ರಮೀಳಾ ಮೀನಿನ ಬುಟ್ಟಿ ಹಿಡಿದುಕೊಂಡು ಅಲ್ಲಿ ನಿಂತಿದ್ದಾರೆ. ಸಂಜೀವ ಅವರಿಗೆ ಫೋನಿನಲ್ಲಿ ಹೇಗೆ ಕಾರು ಬುಕ್ ಮಾಡುವುದು ಎಂದು ತೋರಿಸಿ ಜಂಬಕೊಚ್ಚಿಕೊಳ್ಳುತ್ತಿದ್ದಾನೆ. ಸುಗಂಧಿಗೆ ಸಂಜೀವನ ಫೋನ್ ನೋಡಿ ಆಸೆಯಾಗುತ್ತದೆ.
ಸಂಜೀವ
ಗಿರಾಕಿ ಎಲ್ಲಿದ್ದಾನೆ.. ಎಲ್ಲಿಗೆ ಹೋಗ್ಬೇಕು.. ಎಲ್ಲಾ ಗೊತ್ತಾಗ್ತದೆ. ಜಿ.ಪಿ.ಎಸ್? ಕೇಳಿದೀರಾ? ಅದು ಇದುವೇ! ಹಾ.. ಇದ್ರಲ್ಲಿ ಸೆಟ್ಟಿಂಗ್ ಉಂಟು ನೋಡಿ...
ಸುಗಂಧಿ
ಅಲ್ಲ.. ಹಾಗಾದ್ರೆ ನಾನು ಕೂಡಾ ನಿನ್ನ ಕಾರನ್ನು ಫೋನಲ್ಲಿ ಬುಕ್ ಮಾಡ್ಬೋದಾ?
ಸಂಜೀವ
ಬುಕ್ ಮಾಡ್ಲಿಕ್ಕೇನೋ ಆಗ್ತದೆ... ಕಾಸು ಕೊಡ್ಲಿಕ್ಕಾಗ್ತದಾ?
ಅಷ್ಟರಲ್ಲಿ ಅಲ್ಲಿಗೆ ಬರುವ ಒಂದು ದೊಡ್ಡ ಕಾರು ಪಕ್ಕದಲ್ಲಿ ನಿಲ್ಲುತ್ತದೆ. ಅದರಿಂದ ಸದಾಶಿವ ಇಣುಕುತ್ತಾರೆ. ಸುಗಂಧಿ, ಪ್ರಮೀಳಾ ಸಂಜೀವ ಎಲ್ಲರೂ ಸ್ವಲ್ಪ ಬೆರಗಾಗುತ್ತಾರೆ.
ಸದಾಶಿವ
ಇಲ್ಲಿ.. ದಿನೇಶಣ್ಣನ ಮನೆ ಎಲ್ಲಾಯ್ತು..?
ಸಂಜೀವ
ನೋಡಿ.. ಇದೇ ರೋಡಲ್ಲಿ ಸೀದಾ ಹೋಗಿ. ಅಲ್ಲಿ ಒಂದು ದೈವಸ್ಥಾನ ಉಂಟು. ಅಲ್ಲೇ ರೈಟ್. ಅಲ್ಲಿ ಯಾರನ್ ಕೇಳಿದ್ರೂ ಮನೆ ಎಲ್ಲೀಂತ ಹೇಳ್ತಾರೆ.
ಸದಾಶಿವ ಆಗಲಿ ಎನ್ನುವಂತೆ ನಮಸ್ಕರಿಸಿ ಅಲ್ಲಿಂದ ಹೊರಡುತ್ತಾರೆ. ಸಂಜೀವ ಮತ್ತೆ ಉಳಿದವರು ಹೋದ ಕಾರನ್ನು ನೋಡುತ್ತಿರುತ್ತಾರೆ.
ಸುಗಂಧಿ
(ಸಂಜೀವನಿಗೆ)
ಇಕಾ.. ನೀನು ಇಂಥಾ ಕಾರಲ್ಲಿ ಬಾ. ಅದ್ರ ಬಾಡಿಗೆ ನಾನು ಕೊಡ್ತೇನೆ!
ಸಂಜೀವನಿಗೆ ಮುಖಭಂಗವಾಗುತ್ತದೆ.
ಒಳಾಂಗಣ/ಹೊರಾಂಗಣ. ದಿನೇಶಣ್ಣನ ಮನೆ - ಹಗಲು
ದಿನೇಶಣ್ಣನ ಮನೆಯಲ್ಲಿ ಮಾಧವ ಹಾಗೂ ಬನ್ನಂಜೆ ಇದ್ದಾರೆ. ದಿನೇಶಣ್ಣ ರಾಕೇಶ ಸಿದ್ಧ ಮಾಡಿಕೊಂಡು ಬಂದ ಕಾಗದ ಪತ್ರ ಓದಿಸುತ್ತಿದ್ದಾನೆ. ಮಾಧವನ ಹೆಸರಿಗೆ ಅವನೀಗ ಇರುವ ಮನೆಯನ್ನು ಬರೆಸಿರುತ್ತಾರೆ. ರಾಕೇಶ ಯಾವುದೋ ಅಡ್ವಕೇಟ್ ಹಿಡಿದು ಪತ್ರ ಮಾಡಿಸಿಕೊಂಡು ಬಂದಿರುತ್ತಾನೆ. ರಾಕೇಶ ಪತ್ರ ಓದುವಾಗ ಸಂಪೂರ್ಣ ವಕೀಲನಂತೆ ಪೋಸ್ ಕೊಡುತ್ತಿದ್ದಾನೆ.
ರಾಕೇಶ
...ಮನೆ ಇರುವ ಐದು ಸೆಂಟ್ಸ್ ಜಾಗವೂ... ಮಾಧವನಿಗೆ ಸೇರುತ್ತದೆ. ಈ ಸ್ಥಳದ ಪೂರ್ವದಲ್ಲಿ ಪಂಚಾಯ್ತಿಯ ರಸ್ತೆ ಇದ್ದು, ಪಶ್ಚಿಮದಲ್ಲಿ ತೆಂಗಿನ ತೋಪು ಇದೆ. ಉತ್ತರದಲ್ಲಿ...
ಅಷ್ಟರಲ್ಲಿ ಅಲ್ಲಿಗೆ ಸದಾಶಿವನ ಕಾರು ಬರುತ್ತದೆ. ಎಲ್ಲರೂ ತಮ್ಮ ಕೆಲಸ ಬಿಟ್ಟು ಬಂದ ಹೊಸಬರನ್ನೇ ನೋಡಲಾರಂಭಿಸುತ್ತಾರೆ. ಸದಾಶಿವ ಕಾರಿಂದ ಇಳಿದು ನೇರ ದಿನೇಶಣ್ಣನ ಮನೆಗೆ ಬರುತ್ತಾರೆ. ಬಂದವರಿಗೆ ಕೂರಲಿಕ್ಕೆ ದಿನೇಶಣ್ಣ ಸಂಜ್ಞೆಯಲ್ಲೇ ಸೂಚಿಸುತ್ತಾರೆ. ಮಾಧವ ಮತ್ತು ಬನ್ನಂಜೆ ಸದಾಶಿವನಿಗೆ ಸ್ಥಳ ಮಾಡಿಕೊಡುತ್ತಾರೆ. ಸದಾಶಿವ ಅವರನ್ನೊಮ್ಮೆ ನೋಡಿ ಮುಗುಳ್ನಗುತ್ತಾನೆ.
ಸದಾಶಿವ
ನಮಸ್ಕಾರ.
ದಿನೇಶಣ್ಣ
ಯಾರೂಂತ ಗೊತ್ತಾಗ್ಲಿಲ್ಲ..
ಸದಾಶಿವ
ನನ್ನ ಹೆಸರು ಸದಾಶಿವ ಅಂತ. ಮೊನ್ನೆ ಕಡಲಲ್ಲಿ ಗಲಾಟೆ ಆಯ್ತಲ್ಲ...? ಅದು ನಮ್ದೇ ಬೋಟು ಉತ್ತರದಿಂದ ಬಂದದ್ದು.
ಮಾಧವ ಹಾಗೂ ಬನ್ನಂಜೆ ಇಬ್ಬರಿಗೂ ಸ್ವಲ್ಪ ಅಸಮಾಧಾನ, ಸಿಟ್ಟು, ಕಿರಿಕಿರಿ. ಇದನ್ನು ದಿನೇಶಣ್ಣನೂ ಸದಾಶಿವನೂ ಗುರುತಿಸುತ್ತಾರೆ. ಆದರೆ ಪ್ರತಿಕ್ರಿಯಿಸುವುದಿಲ್ಲ.
ದಿನೇಶಣ್ಣ
ನೋಡಿ ಅಣ್ಣ.. ನಾವು ಒಮ್ಮೆ ಬಲೆ ಹಾಕಿದ್ಮೇಲೆ ನೀವೂ ಅಲ್ಲಿಯೇ ಬಲೆ ಹಾಕ್ಬೋದಾ?
ಸದಾಶಿವ
ನಾನು ಜಗಳ ಮಾಡ್ಲಿಕ್ಕೆ ಬಂದದ್ದಲ್ಲ. ನಮ್ದು ಒಂದು ಹತ್ತು - ಹದಿನೈದು ಬೋಟುಗಳುಂಟು. ಆದ್ರೆ ಸರಿಕಟ್ಟಾದ ಒಂದೇ ಒಂದು ಜನ ಇಲ್ಲ. ಜನ ಸಿಕ್ಕೋದು ಎಷ್ಟು ಕಷ್ಟಾಂತ ನಿಮಗೆ ಗೊತ್ತೇ ಇದೆಯಲ್ಲಾ?
ದಿನೇಶಣ್ಣ ಮತ್ತಿತರರು, ಈ ಮಾತುಕತೆ ಯಾವ ದಿಕ್ಕಿನಲ್ಲಿ ಹೋಗುತ್ತಿದೆ ಎಂದು ಅರ್ಥವಾಗದೇ ನೋಡುತ್ತಿದ್ದಾರೆ. ಅಷ್ಟರಲ್ಲಿ ಅಲ್ಲಿಗೆ ಮಂಜೇಶ ಬರುತ್ತಾನೆ.
ಸದಾಶಿವ
ಶಭಾಶ್! ನಿಮ್ಮ ಮಗನಾ?! ನೋಡಿ.. ನಿಮ್ಮತ್ರ ಕಟ್ಟುಮಸ್ತಾದ ಹುಡುಗರಿದ್ದಾರೆ. ಸರಿಯಾದ ಜನ ಇಲ್ಲದೆ, ನಮ್ಮ ಅರ್ಧಕ್ಕರ್ಧ ಬೋಟುಗಳನ್ನು ತೀರದಲ್ಲೇ ಕಟ್ಟಿಹಾಕಿದ್ದೇವೆ. ಒಂದು ನಾಲ್ಕು ಸೆಟ್ ಜನ ಮಾಡಿ ಕೊಡಿ ನಮಗೆ. ನಮ್ಮ ಬೋಟು, ನಿಮ್ಮ ಜನ. ಮತ್ತೆ ನಮ್ಮ ಬೋಟೆಲ್ಲಾ ಸ್ಟೀಲಿಂದೇ. ಮಳೆಗಾಗಲೀ, ಬಿಸಿಲಿಗಾಗಲೀ, ಸ್ವಲ್ಪವೂ ಜಗ್ಗೋದಿಲ್ಲ. ಯಾವಾಗ ಬೇಕಾದ್ರೂ ಮೀನು ಹಿಡಿಯೋದಿಕ್ಕೆ ಹೋಗ್ಬೋದು. ಮತ್ತೆ.. ಮೀನು ವಿಲೇವಾರಿಗೆಲ್ಲಾ ನಮ್ದು ಕಾಂಟ್ರಾಕ್ಟ್ ಉಂಟು. ನಮ್ದೇ ಕ್ಯಾನಿಂಗ್ ಕಂಪೆನಿಯೂ ಉಂಟು ದುಬೈಯಲ್ಲಿ. ವರ್ಷ ಇಡೀ ಕೆಲ್ಸ. ಕೈ ತುಂಬಾ ಕಾಸು. ಏನಂತೀರಿ?
ದಿನೇಶಣ್ಣ ಮತ್ತಿತರರು ಗೊಂದಲದಲ್ಲೇ ಇದ್ದಾರೆ.
ದಿನೇಶಣ್ಣ
(ಸ್ವಲ್ಪ ಯೋಚಿಸಿ)
ನಿಮ್ಮ ಯೋಚನೆ ಒಳ್ಳೆದೇ. ಆದ್ರೆ ನಾವು ಇಲ್ಲಿವರೆಗೆ ನಡೆಸಿಕೊಂಡು ಬಂದಿರುವ ಸಾಂಪ್ರದಾಯಿಕ ಮೀನಿನ ಕಸುಬನ್ನು ಬಿಡ್ಲಿಕ್ಕಾಗ್ತದ?
ಅಲ್ಲಿ ಸೇರಿರುವ ಎಲ್ಲರೂ ದಿನೇಶಣ್ಣನನ್ನೇ ನೋಡುತ್ತಾರೆ. ಅವರಿಗೆ ದಿನೇಶಣ್ಣನ ನಿರ್ಧಾರ ಸಂಪೂರ್ಣವಾಗಿ ಅರ್ಥವಾದಂತಿಲ್ಲ.
ಸದಾಶಿವ
ದಿನೇಶಣ್ಣ.. ಎಂತ ಮಾತಾಡ್ತಿದ್ದೀರಿ? ಇಷ್ಟು ದೊಡ್ಡ ಬಿಸಿನೆಸ್ ಉಂಟು. ನೀವೂ ಹೀಗೇ ಯೋಚನೆ ಮಾಡೋದಾ?! ಇಂಥಾ ಯೋಚನೆಯಿಂದಲೇ ನಾವು ಮೀನು ಹಿಡಿವವರೆಲ್ಲಾ ಹಿಂದೆ ಉಳಿದಿರೋದು. ನೋಡಿ.. ಒಟ್ಟಿಗೆ ಬಿಸಿನೆಸ್ ಮಾಡುವ. ನಮ್ಮ ಮಕ್ಕಳೂ ನಮ್ಮ ಹಾಗೇ ಇರಬೇಕಾ? ನಮಗಿಂತ ಮುಂದುವರಿಯೂದು ಬೇಡ್ವಾ?!
ದಿನೇಶಣ್ಣ
ನಿಮ್ಮ ವ್ಯವಹಾರದ ಕ್ರಮ ನಮಗೆ ಹೊಂದೋದಿಲ್ಲ. ನೀವು ಬ್ರೀಡಿಂಗ್ ಸೀಸನ್ನಲ್ಲಿಯೂ ಮೀನು ಹಿಡೀತೀರಿ. ಮರಿ ಮೀನು ಹಿರಿ ಮೀನು ಹೀಗೆ ಎಲ್ಲದಕ್ಕೂ ಬಲೆ ಹಾಕ್ತೀರಿ. ನಮಗೆ ಸಂತೋಷವಾಗಿದ್ರೆ ಸಾಕು. ನಿಮ್ಮ ಹಾಗೆ ಒಮ್ಮೆಯೇ ದೊಡ್ಡ ಮನುಷ್ಯರಾಗುವ ದುರಾಸೆ ನಮಗಿಲ್ಲ.
ಸದಾಶಿವ
ಹಾಗಲ್ಲ ದಿನೇಶಣ್ಣ.. ನಾನ್ ಏನು ಹೇಳೋದು ಅಂದ್ರೆ..
ದಿನೇಶಣ್ಣ
ಕ್ಷಮಿಸಿ. ನೀವಿಷ್ಟು ದೂರ ಬಂದಿದ್ದೀರಿ. ನಿಮಗೆ ಒಂದಿಷ್ಟು ಬಾಯಾರಿಕೆ ಕೊಡೋದಕ್ಕೂ ಆಗಲಿಲ್ಲ ನಮಗೆ. ಮನೆಯಲ್ಲಿ ಯಾರೂ ಇಲ್ಲ. ಇನ್ನೊಮ್ಮೆ ಬನ್ನಿ.
ಸದಾಶಿವನಿಗೆ, ದಿನೇಶಣ್ಣ ತನಗೆ ಹೋಗಲು ಹೇಳಿದ್ದು ಎನ್ನುವುದು ಅರ್ಥವಾಗುತ್ತದೆ. ಅವನು ಅತ್ತ ನೋಡಿದರೆ ಮನೆಯೊಳಗೆ ದಿನೇಶಣ್ಣನ ಪತ್ನಿ ವೀಲ್ ಚೇರಿನಲ್ಲಿ ಕುಳಿತಿರುವುದು ಕಾಣಿಸುತ್ತದೆ. ಮಾಧವ, ಬನ್ನಂಜೆ, ರಾಕೇಶ ಮತ್ತು ಮಂಜೇಶ ಈ ಇಡೀ ಮಾತುಕತೆ ಕೇಳಿ ಗೊಂದಲದಲ್ಲಿ ನಿಂತಿದ್ದಾರೆ.
ಸದಾಶಿವ ನಿಧಾನಕ್ಕೆ ಕುಳಿತಲ್ಲಿಂದ ಎದ್ದು, ಕಾರಿನತ್ತ ಹೊರಡುತ್ತಾನೆ. ಅವರ ಡ್ರೈವರ್ ಬಾಗಿಲು ತೆರೆದು ನಿಲ್ಲುತ್ತಾನೆ.
ಕಾರು ಅತ್ತ ಹೋಗುತ್ತಲೇ ಮಂಜೇಶ ತಡೆಯಲಾರದೇ ಮಾತನಾಡುತ್ತಾನೆ.
ಮಂಜೇಶ
ನೀವೆಂಥಾ ವಿಚಿತ್ರ?! ಅವ್ರು ಅಷ್ಟು ದೊಡ್ಡ ಬಿಸಿನೆಸ್ ಮಾತಾಡ್ಲಿಕ್ಕೆ ಬಂದರೆ, ನೀವು... ಬೇಡಾಂತ ಈ ರೀತಿ ಅವ್ರನ್ನು ವಾಪಾಸ್ ಕಳಿಸೋದಾ?! ಅವರು ಯಾರೂಂತ ಗೊತ್ತುಂಟಾ? ಚಾಮುಂಡಿ ಫಿಶರೀಸ್ನ ಓನರ್ ಅವರು! ಅವರಿಗೆ ಬಾಂಬೆ, ಕೇರಳ, ದುಬೈಯಲ್ಲೆಲ್ಲಾ ಬಿಸಿನೆಸ್ ಉಂಟು!
ದಿನೇಶಣ್ಣ
ಅವರ ಮನೆ, ವ್ಯವಹಾರ ಎಲ್ಲಾ ಗೊತ್ತಿದೆ ನಿನಗೆ! ಸ್ವಂತ ಮನೆಯ ಕಸುಬೇನೂಂತ ಗೊತ್ತಿಲ್ಲ ಅಲ್ಲವೇ?! ನಿನಗದರ ಅಗತ್ಯವೂ ಇಲ್ಲ. ದುಬೈಯಿಂದ ಬಂದ್ರೇ ದೊಡ್ದದು ನಿನಗೆ! ಯಾವಾಗ ಬುದ್ಧಿ ಬರ್ತದೋ...! ನಾನು ಸುಮ್ಮನೇ ಕೋಣನ ಮುಂದೆ ಕಿಂದರಿ ಬಾರಿಸ್ತಾ ಇದ್ದೇನೆ..
ರಾಕೇಶ
ಅಲ್ಲ ದಿನೇಶಣ್ಣ.. ಮಂಜೇಶ ಎಂತ ಹೇಳಿದ್ದೂಂದ್ರೆ...
ದಿನೇಶಣ್ಣ ರಾಕೇಶನನ್ನೇ ದುರುಗುಟ್ಟಿ ನೋಡುತ್ತಾರೆ. ಅವನು ಸುಮ್ಮನಾಗುತ್ತಾನೆ.
ಮಂಜೇಶ
ಎಲ್ಲರೆದುರು ನನ್ನ ಮರ್ಯಾದೆ ತೆಗೆಯಿರಿ ನೀವು. ನಂಗೊದಿಷ್ಟೂ ಸಪೋರ್ಟ್ ಇಲ್ಲ. ನಾನು ದುಬೈಗೆ ಖಂಡಿತಾ ಹೋಗ್ತೇನೆ. ನೀವು ನೋಡ್ತಾ ಇರಿ!
ಮಂಜೇಶ ಸಿಟ್ಟಿನಲ್ಲಿ ಅಲ್ಲಿಂದ ಹೊರಡುತ್ತಾನೆ... ದಿನೇಶಣ್ಣನಿಗೆ ಸಿಟ್ಟು ಜೋರಾಗುತ್ತದೆ. ಅವರು ಮಂಜೇಶನ ಹಿಂದೆ ಎರಡು ಹೆಜ್ಜೆ ಇಟ್ಟು ಜೋರಾಗಿ ಕೂಗುತ್ತಾರೆ.
ದಿನೇಶಣ್ಣ
(ಸಿಟ್ಟಿನಲ್ಲಿ)
ಹೋಗಿ ಸಾಯಿ! ನನ್ನ ಹತ್ತಿರ ಹೇಳ್ಬೇಡ. ನಿನಗೊಂದು ರೂಪಾಯಿಯೂ ಕೊಡೋದಿಲ್ಲ ನಾನು. ಎಲ್ಲಾ ಆಸ್ತಿ ಮಾಧವನಿಗೆ ಕೊಡ್ತೇನೆ. ನಿನಗೆ ಕೊಟ್ರೆ ಎಲ್ಲಾ ಎಲ್ಲಾ ಲಗಾಡಿ ತೆಗೀತಿ ನೀನು.
ಎಲ್ಲರೂ ಒಮ್ಮೆ ಅಚ್ಚರಿಗೊಳ್ಳುತ್ತಾರೆ.
ಮಂಜೇಶ
(ಅಂಗಳದಲ್ಲಿದ್ದವನು ಒಂದು ಕ್ಷಣ ಗಲಿಬಿಲಿಯಾಗಿ ನಿಲ್ಲುತ್ತಾನೆ. ಆಮೇಲೆ ಸುಧಾರಿಸಿಕೊಂಡು)
ಹೋಗ್ಲಿ.. ಹಾಳಾಗಿ ಹೋಗ್ಲಿ. ಹೊಳೆಯಲ್ಲಿ ಕೊಚ್ಚಿಕೊಂಡು ಹೋಗ್ಲಿ ನಿಮ್ಮ ಆಸ್ತಿ. ನಾನು ಉದ್ಧಾರ ಆಗೋದು ನಿಮಗೆ ಯಾರಿಗೂ ಬೇಡ. ನಾನು ಹೋಗ್ತೇನೆ. ದುಬೈಗೆ ಹೋಗ್ತೇನೆ. ದುಬೈಗೆ ಹೋಗಿಯೇ ಹೋಗ್ತೇನೆ!
ಮಾಧ
ಇದೆಲ್ಲಾ ಎಂತ ಅಣ್ಣ..? ನೀವು ಇನ್ನೊಮ್ಮೆ ಮಂಜೇಶನೊಟ್ಟಿಗೆ ಸಮಾಧಾನದಲ್ಲಿ ಮಾತಾಡಿ...
ದಿನೇಶಣ್ಣ
(ಸಿಟ್ಟಿನಲ್ಲಿ. ಹತಾಷೆಯಲ್ಲಿ..)
ಮಾಧವ... ನೀನು ನನ್ನ ಮಗನಂತೆ ಇದ್ದೀಯ. ನನಗೇನಾದರೂ ಹೆಚ್ಚು ಕಮ್ಮಿ ಆದ್ರೆ ನೀನು, ನನ್ನನ್ನು ಬಿಟ್ಟಾಕ್ತೀಯಾ?
ಮಾಧವ
ಇಲ್ಲ ಅಣ್ಣ... ಅದು ಬೇರೆ...
ನಾವು ಮನೆಯೊಳಗಿನಿಂದ ಶಂಕರಿಯಮ್ಮನನ್ನು ಕಾಣುತ್ತೇವೆ.
ದಿನೇಶಣ್ಣ
(ರಾಕೇಶನಿಗೆ)
ನೋಡು.. ಒಂದು ವಿಲ್ ಬರೆ. ನನ್ನ ಎಲ್ಲಾ ಆಸ್ತಿ-ಪಾಸ್ತಿ ಮಾಧವನ ಹೆಸರಿಗೆ ಮಾಡು. ನಾಳೆ ನಾಡಿದ್ದಿನಲ್ಲಿ ಎಲ್ಲಾ ರೆಡಿ ಮಾಡಿಸಿಕೊಂಡು ಬಾ. ನಾನು ಸೈನ್ ಹಾಕ್ತೇನೆ. ನಮ್ಮ ಮಾಧವನಾದರೂ ಉದ್ಧಾರ ಆಗಲಿ!
ದಿನೇಶಣ್ಣನ ಧ್ವನಿ ಈಗ ಸ್ವಲ್ಪ ದುಃಖದ ಕಡೆಗೆ ತಿರುಗಿದೆ. ಕಣ್ಣಲ್ಲಿ ಒಂದು ಹನಿ ನೀರು ಬಂದು ನಿಂತಿದೆ. ಮಾಧವ ಬನ್ನಂಜೆ ಅಪ್ರತಿಭರಾಗಿ ನಿಂತಿದ್ದಾರೆ.
ಮಾಧವ ಬನ್ನಂಜೆಯ ಕಡೆಗೆ ನೋಡುತ್ತಾನೆ. ಆದರೆ ಬನ್ನಂಜೆ ಮಾಧವನನ್ನು ನೋಡುವುದೂ ಇಲ್ಲ. ಏನೂ ಹೇಳುವುದೂ ಇಲ್ಲ.
ಬನ್ನಂಜೆ ಸ್ಕ್ರೀನಿನಿಂದ ಆಚೆ ನಡೆದು ಹೋಗುತ್ತಾನೆ. ಇದನ್ನು ಮುಂದಿನ ದೃಶ್ಯದಲ್ಲಿ ಬಣ್ಣದ ವೇಷ ಎದ್ದು ಕೂರುವ ಶಾಟ್ನೊಂದಿಗೆ ಡಿಸಾಲ್ವ್ ಮಾಡಬೇಕು.
ಒಳಾಂಗಣ. ಯಕ್ಷಗಾನ ಚೌಕಿ - ಸಂಜೆ
ಸ್ವಲ್ಪ ದೂರದಲ್ಲಿ ಅರ್ಧ ವೇಷ ಹಾಕಿದ ನಟನೊಬ್ಬ ಬೀಡಿ ಸೇದುತ್ತಾ ನಿಂತಿರುತ್ತಾನೆ. ಆಟ ಆರಂಭವಾಗಲು ಇನ್ನೂ ಸ್ವಲ್ಪ ಹೊತ್ತಿದೆ. ಯಕ್ಷಗಾನ ಕಲಾವಿದರು ಬಣ್ಣ ಹಾಕುತ್ತಿದ್ದಾರೆ. ಅಲ್ಲಿಗೆ ಬಂದ ಒಬ್ಬಾತ ಕಲಾವಿದರೊಂದಿಗೆ ಮಾತನಾಡುತ್ತಿದ್ದಾನೆ.
ಕಲಾವಿದ ೧
ನೀನು ಸುಮ್ಮನಿರು ಮಾರಾಯ.. ಆ ರಾಕೇಶ ಕೋರ್ಟಲ್ಲಿ ಪ್ಯೂನು. ಊರಿಡೀ ತಾನು ಲಾಯರು ಅಂತ ಬುರುಡೆ ಬಿಟ್ಟುಕೊಂಡು ತಿರುಗ್ತಾನೆ. ಅವನೆಂತ ಬುಡ ಮೇಲು ಮಾಡ್ತಾನೋ ದೇವರಿಗೇ ಗೊತ್ತು!
ಕಲಾವಿದ ೨
ಛೇ! ನಮ್ಮ ದಿನೇಶಣ್ಣ ಯಾಕೆ ಹೀಗೆ ಮಾಡಿದರೂಂತ ಅರ್ಥವೇ ಆಗೋದಿಲ್ಲ. ಆಸ್ತಿಯನ್ನು ಯಾರಾದ್ರೂ ಹೀಗೆಲ್ಲಾ ಬರೆದು ಕೊಡ್ತಾರಾ? ಅಲ್ಲ.. ಮಗ ದುಬೈಗೆ ಹೋದ್ರೆ ಏನಾಯ್ತಪ್ಪ ಈಗ?
ಕಲಾವಿದ ೩
ಇದಿಕ್ಕೇ ಹೇಳೋದು... ಮಕ್ಕಳು... ಮೊಮ್ಮಕ್ಳು... ಮರಿ ಮಕ್ಕಳಿಗೇಂತ ಕಟ್ಟಿ ಇಟ್ಟರೆ ಹೀಗೇ ಆಗೋದು ಅಂತ!
ಕಲಾವಿದ ೪
ಅಪ್ಪ ಕುರುಡ, ಅಮ್ಮನಿಗಾಗುದಿಲ್ಲ, ಮಕ್ಕಳಿಗೆ ಬುದ್ಧಿ ಇಲ್ಲ. ಆದರೆ ಯಾರಿಗೂ ವ್ಯಾಮೋಹ ಬಿಟ್ಟದ್ದಿಲ್ಲ. ಅದಕ್ಕೇ ಅಲ್ವೇ ಕುರುವಂಶ ನಿರ್ವಂಶವಾಗಿದ್ದು?
ಪೇತ್ರಿ ಮತ್ತು ಪ್ರದೀಪ ಇಬ್ಬರೂ ನಗುತ್ತಾರೆ.
ಹೊರಾಂಗಣ. ಒಂದು ದೊಡ್ಡ ದೋಣಿಯ ಮೇಲೆ - ಹಗಲು
ಅದ್ಯಾವುದೋ ಒಂದು ಬೋಟ್ ರೆಸ್ಟೋರೆಂಟ್. ಒಳಗೆ ಸದಾಶಿವ ಒಬ್ಬನೇ ಮೀನಿನ ಊಟ ಮಾಡುತ್ತಿದ್ದಾರೆ. ರಾಕೇಶ್ ಹಾಗೂ ಮಂಜೇಶ ಬರುತ್ತಾರೆ.
ರಾಕೇಶ
ಸರ್.. ನಮಸ್ಕಾರ. ಇವನೇ ಸರ್.. ಮಂಜೇಶ.
ಸದಾಶಿವ
ಎಲ್ಲಿಯವರೆಗೆ ಓದಿದ್ದೀಯಾ?
ಮಂಜೇಶ
ನಾನು ಮೆಕ್ಯಾನಿಕಲ್ ಎಂಜ್..
ರಾಕೇಶ್ ಮಂಜೇಶನನ್ನು ತಡೆಯುತ್ತಾನೆ. ಉತ್ಸಾಹದಲ್ಲಿದ್ದ ಮಂಜೇಶ ಕೊಂಚ ಪೆಚ್ಚಾಗಿ,
ಮಂಜೇಶ
ಸೆಕೆಂಡ್ ಇಯರ್ವರೆಗೆ ಕಲ್ತಿದ್ದೇನೆ.
ಸದಾಶಿವ
ಇಂಜಿನಿಯರಿಂಗ್ ಅರ್ಧಕ್ಕೆ ಬಿಟ್ಟವನಾ ನೀನು?! ನಿನಗೆ ದುಬೈಯಲ್ಲಿ ಡ್ರೈವರ್ ಕೆಲಸ ಸಿಗಬಹುದು ಅಷ್ಟೇ. ನಿನಗ್ಯಾಕೆ ಇದೆಲ್ಲಾ? ಇಲ್ಲೇ ಇರ್ಬಹುದಲ್ಲಾ? ಆರಾಮಾಗಿ.. ಅಪ್ಪನ ವ್ಯವಹಾರ ನೋಡಿಕೊಂಡ್ರೆ ಆಯ್ತಪ್ಪಾ!
ಮಂಜೇಶ
ಆಮ್... ತೊಂದರೆ ಇಲ್ಲ... ನನಗೆ ಡ್ರೈವರ್ ಕೆಲಸ ಆದ್ರೂ ಅಡ್ಡಿಯಿಲ್ಲ. ನನ್ನನ್ನು ಬಿಟ್ಟಾಕ್ಬೇಡಿ ಪ್ಲೀಸ್.
ರಾಕೇಶ
ನೀವೆಂತ ಸದಾಶಿವಣ್ಣ..? ನೀವು ಮನಸ್ಸು ಮಾಡಿದರೆ, ಒಂದು ದೊಡ್ಡ ಕೆಲ್ಸ ಕೊಡ್ಸಿಲಿಕ್ಕೆ ಆಗೋದಿಲ್ವಾ? ನೀವು ಕೂಡಾ ಹೀಗೆ ಹೇಳಿದ್ರೆ ಹೇಗೆ?!
ಸದಾಶಿವ
ನಾನೆಂತ ಮಾಡೂದು ಮಾರಾಯ? ಇವನಪ್ಪ ಮನಸ್ಸು ಮಾಡಬೇಕು ಅಷ್ಟೇ. ಬನ್ನಿ ಒಟ್ಟಿಗೆ ಬಿಸಿನೆಸ್ ಮಾಡುವ ಅಂತ ಹೇಳಿದೆ. ಬೇಡ ನಾನಿಲ್ಲೇ ಸಾಯ್ತೇನೇಂತ ಹೇಳಿದ್ರು! ಇವನಪ್ಪ ಮನಸ್ಸು ಮಾಡಿದರೆ, ನಾನು ಈಗಲೂ ರೆಡಿ. ನನ್ನ ಮನೆ ಡೋರ್ ಯಾವಾಗ್ಲೂ ಓಪನ್. ಗೊತ್ತಾಯ್ತಾ?
ಮಂಜೇಶ ಸದಾಶಿವ ಶೆಟ್ಟರ ಮುಖ ನೋಡುತ್ತಾನೆ. ಇನ್ನು ಇಲ್ಲಿ ತನಗೇನೂ ಸಹಾಯ ಸಿಗುವುದಿಲ್ಲ ಎನ್ನುವುದು ಅವನಿಗೆ ಅರಿವಾಗುತ್ತದೆ.
ಹೊರಾಂಗಣ. ಹಳ್ಳಿಯ ಕಟ್ಟೆ - ಹಗಲು
ಮಂಜೇಶ, ಸಂಜೀವ ಹಾಗೂ ರಾಕೇಶ ಒಂದು ಟೀ ಅಂಗಡಿಯಲ್ಲಿ ನಿಂತು ಟೀ ಕುಡಿಯುತ್ತಿದ್ದಾರೆ. ಸಂಜೀವ ಸಿಗರೇಟು ಸೇದುತ್ತಿದ್ದಾನೆ. ಮಂಜೇಶನಿಗೆ ತಲೆ ಕೆಟ್ಟಿದೆ.
ಮಂಜೇಶ
ನಾನಿನ್ನು ಈ ಬೋಟುಗಳೊಟ್ಟಿಗೇ ನೇತಾಡಿಕೊಂಡಿರ್ಬೇಕಾಂತ..
ರಾಕೇಶ
ಹೌದು ಮಾರಾಯ.. ಆಸ್ತಿ ಪತ್ರಕ್ಕೆ ಇಲ್ಲಿಯವರೆಗೆ ಸೈನ್ ಬೀಳ್ಲಿಲ್ಲ. ಅದಕ್ಕೂ ಮುಂಚೆ ಏನಾದ್ರೂ ಮಾಡು ಮಾರಾಯ.. ಮಂಜೇಶ.. ನನ್ನ ಪರಿಸ್ಥಿತಿಯನ್ನು ಸ್ವಲ್ಪ ಅರ್ಥ ಮಾಡಿಕೋ!
ಅಲ್ಲಿರುವವರೆಲ್ಲ ರಾಕೇಶನ ಮುಖ ನೋಡುತ್ತಾರೆ. ರಾಕೇಶನಿಗೆ ಕಸಿವಿಸಿಯಾಗ್ತದೆ.
ಸಂಜೀವ
ಎಲ್ಲಾ ಆಸ್ತಿ ಮಾಧವನಿಗೆ ಕೊಡೋದಂತೆ! ಎಂತಾ ಖರ್ಮ! ಅವನು ಅಲ್ಲೇ ಇದ್ದ..! ಆದರೂ ಉಸಿರು ಎತ್ತಲಿಲ್ಲ! ಮಹಾ ಕಳ್ಳ ಅವನು!
ಮಂಜೇಶ
ಅವನೆಂತ ಹೇಳ್ತಾನೆ? ಮಾತಾಡ್ಲಿಕ್ಕೆ ಬಿಟ್ರೆ ತಾನೇ ಅವನಿಗೆ? ಎಲ್ಲಾ ನನ್ನ ಅಪ್ಪಂದೇ ತಪ್ಪು. ಮಗನಿಗೊಂದು ಚಾನ್ಸ್ ಕೊಟ್ಟು ನೋಡ್ಲಿಕ್ಕೆ ರೆಡಿ ಇಲ್ಲ. ಇದನ್ನೆಲ್ಲಾ ಯೋಚನೆ ಮಾಡುವಾಗ ಅವರಿಗೆ ಚೂರಿ ಹಾಕಿ ಬಿಡುವಾಂತ ಆಗ್ತದೆ!
ಟೀ ಕೊಡ್ಲಿಕ್ಕೆ ಬಂದ ಅಂಗಡಿಯವನು ಸೇರಿದಂತೆ, ಸಂಜೀವ, ರಾಕೇಶ ಎಲ್ಲರೂ ಒಂದು ಗಳಿಗೆ ಬೆಚ್ಚಿ ಬೀಳುತ್ತಾರೆ. ಟೀಯವನು ಸುಧಾರಿಸಿಕೊಂಡು, ಟೀ ಕೊಡುವುದನ್ನು ಮುಂದುವರೆಸುತ್ತಾನೆ. ಅವರು ಪರಸ್ಪರ ನೋಡಿಕೊಂಡು ಮಂಜೇಶನನ್ನು ನೋಡುತ್ತಾರೆ. ಮಂಜೇಶನಿಗೆ ಅದರ ಪರಿವೆಯೇ ಇಲ್ಲ. ಅವನು ಸಮುದ್ರದ ಕಡೆಗೆ ನೋಡಿ ಬೇಸರದಲ್ಲಿ ನಿಂತಿದ್ದಾನೆ.
ಹೊರಾಂಗಣ. ಸಮುದ್ರದಲ್ಲಿ - ಹಗಲು
ಬನ್ನಂಜೆ ಹಾಗೂ ಮಾಧವ ಕಡಲ ಮಧ್ಯದಲ್ಲಿ ಬೋಟಲ್ಲಿ ಸಾಗುತ್ತಿದ್ದಾರೆ. ಮಾಧವನ ಮನಸ್ಸು ತಳಮಳಗೊಂಡಿದೆ. ಮಾಧವ ಬನ್ನಂಜೆಯೊಡನೆ ಏನೋ ಮಾತನಾಡಲು ಹವಣಿಸುತ್ತಾನೆ. ಬನ್ನಂಜೆ ತನ್ನ ಪಾಡಿಗೆ ಬೇರೆಡೆ ತಿರುಗುತ್ತಾನೆ. ನೀರಿಂದ ಹೊರ ಬಿದ್ದ ಮೀನುಗಳು ಚಡಪಡಿಸುತ್ತಿರುವ ದೃಶ್ಯ ತೋರಿಸುತ್ತೇವೆ.
ಹೊರಾಂಗಣ. ಮಾಧವ ಸುಗಂಧಿಯರ ಹೊಸ ಮನೆ - ಸಂಜೆ
ಮಾಧವ ತನ್ನ ಯೋಚನೆಗಳಲ್ಲಿ ಕಳೆದು ಹೋಗಿ ಬಲೆಯನ್ನು ಸರಿ ಮಾಡುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾನೆ. ಅಲ್ಲಿಗೆ ಸುಗಂಧಿ ಬರುತ್ತಾಳೆ. ಆಕೆ ಮಾಧವನ ದ್ವಂದ್ವವನ್ನು ಗ್ರಹಿಸುತ್ತಾಳೆ.
ಸುಗಂಧಿ
ಓಯ್.. ಇಲ್ಲಿ ನೋಡಿ.. ಮುಖ ಯಾಕೆ ಹೀಗೆ ಬಾಡಿಕೊಂಡಿದೆ?!
ಮಾಧವ
ಏನೂ ಇಲ್ಲ...
ಮಾಧವ ಎಲ್ಲವೂ ಮಾಮೂಲಾಗಿದೆ ಎನ್ನುವಂತೆ ವರ್ತಿಸಲು ಪ್ರಯತ್ನಿಸುತ್ತಾನೆ. ಸುಗಂಧಿಗೆ ಅವನ ಗೊಂದಲದ ಅರಿವಾಗುತ್ತದೆ. ಸುಗಂಧಿ ಮಾಧವನ ಮುಖವನ್ನೇ ನೋಡುತಾಳೆ.
ಸುಗಂಧಿ
ಓಯ್.. !
ಮಾಧವ
ಎಲ್ಲವೂ ದೈವ ಹೇಳಿದ ಹಾಗೇ ನಾಡೀತಾ ಉಂಟು.
ಸುಗಂಧಿ
ಈಗ ಅಂಥದ್ದೆಂತ ಆಯ್ತಪ್ಪ..?
ಮಾಧವ
ಇವತ್ತು ದಿನೇಶಣ್ಣ.. ಆ ಲಾಯರಿದ್ದಾನಲ್ಲ ರಾಕೇಶ.. ಅವನತ್ರ ಅವರ ಆಸ್ತಿ ಪತ್ರ ಎಲ್ಲಾ ನನ್ನ ಹೆಸರಿಗೆ ಮಾಡಿ ಕೊಡ್ಲಿಕ್ಕೆ ಹೇಳಿದರು!
ಸುಗಂಧಿಗೆ ಸ್ವಲ್ಪ ಗೊಂದಲವಾಗುತ್ತದೆ. ಮಾಧವ ಹೌದು ಎನ್ನುವಂತೆ ಚಿಂತೆಯಲ್ಲಿ ತಲೆಯಾಡಿಸುತ್ತಾನೆ.
ಸುಗಂಧಿ
(ಬಹಳ ಸಂಭ್ರಮದಿಂದ)
ಅದಕ್ಕೆ ಚಿಂತೆ ಯಾಕೆ?! ಅದರಲ್ಲಿ ತಪ್ಪು ಏನಿದೆ? ದಿನೇಶಣ್ಣನಿಗೆ ನೀವು ಮಗನ ಹಾಗೆ. ಹಾಗಿರುವಾಗ ಅವರ ಆಸ್ತಿಯಲ್ಲಿ ನಿಮಗೆ ಪಾಲು ಕೊಟ್ಟರೆ, ಅದರಲ್ಲಿ ಏನು ತಪ್ಪಿದೆ? ಇಷ್ಟು ವರ್ಷ ನೀವು ಅವರಿಗಾಗಿ ಜೀವ ಬಿಟ್ಟು ದುಡೀಲಿಲ್ವಾ?
ಮಾಧವ
ಎಂತ ಮಾತಾಡ್ತಿ ಮಾರಾಯ್ತಿ? ಅವರ ಸ್ವಂತ ಮಗ ಮಂಜೇಶ ಇಲ್ಲವೇ?! ಆಸ್ತಿಯೆಲ್ಲಾ ಅವನಿಗೇ ಸೇರಬೇಕಲ್ವಾ?
ಸುಗಂಧಿ ಈಗ ಬಲೆಯನ್ನು ದಾಟಿ ಮಾಧವನ ಬಳಿಗೆ ಬರುತ್ತಾಳೆ. ಮಾಧವನ ಕುತ್ತಿಗೆಗೆ ಮುತ್ತಿಕ್ಕಿ ನಿಧಾನಕ್ಕೆ ಮನೆಯೊಳಗೆ ನಡೆಯುತ್ತಾಳೆ. ಮಾಧವ ಆಕೆಯ ಮನಸ್ಸಲ್ಲಿ ಏನು ನಡೆಯುತ್ತಿದೆ ಎಂದು ಅಚ್ಚರಿಗೊಂಡಿದ್ದಾನೆ.
ಒಳಾಂಗಣ. ಮಾಧವ ಹಾಗೂ ಸುಗಂಧಿಯರ ಹೊಸ ಮನೆ - ಸಂಜೆ
ಸುಗಂಧಿ ಸೆಂಟ್ ಬಾಟಲ್ ಹಿಡಿದು ಅದನ್ನು ತನ್ನ ಮೇಲೆ ಸ್ಪ್ರೇ ಮಾಡಿಕೊಳ್ಳುತ್ತಾಳೆ. ಮಾಧವ ಈಗ ಮನೆಯೊಳಗೆ ನಡೆದು ಬರುತ್ತಾನೆ. ಸುಗಂಧಿಯನ್ನು ಹುಡುಕಿಕೊಂಡು ಬರುತ್ತಾನೆ. ಅವನು ಬೆಡ್ರೂಮಿಗೆ ಬರುತ್ತಾನೆ. ಅವನಿಗೆ ಏನೋ ಪರಿಮಳ ಬಂದಂತಾಗುತ್ತದೆ.
ಮಾಧವ
ಅಬ್ಬ! ಎಂತ ಪರಿಮಳ ಅದು..
ಸುಗಂಧಿ ದಿನೇಶಣ್ಣನ ಮನೆಯಿಂದ ಸೆಂಟಿನ ಬಾಟಲು ತೆಗೆದುಕೊಂಡೇ ಬಂದಿದ್ದಾಳೆ! ಆಕೆ ಆ ಬಾಟಲನ್ನು ಎತ್ತಿ ಮಾಧವನಿಗೆ ತೋರಿಸುತ್ತಾಳೆ. ಮಾಧವನಿಗೆ ಬೆರಗಾಗುತ್ತದೆ. ಸುಗಂಧಿ ಹಾಸಿಗೆಯ ಮೇಲೆ ಕೂರುತ್ತಾಳೆ. ಮಾಧವನೂ ಆಕೆಯ ಬಳಿಯಲ್ಲೇ ಕೂರುತ್ತಾನೆ.
ಮಾಧವ
ಎಲ್ಲಿಂದ ತಂದೆ ಈ ಸೆಂಟ್ ಬಾಟಲ್?
ಸುಗಂಧಿ
ನಿಮಗೆ ಯಾಕೆ ಎಲ್ಲದರಲ್ಲೂ ಸಂಶಯ? ಇದೆಲ್ಲಾ ದೈವದ ಅನುಗ್ರಹ ಅಲ್ವಾ?
ಮಾಧವನಿಗೆ ಏನು ಹೇಳುವುದು ಎಂದು ಗೊತ್ತಾಗುವುದಿಲ್ಲ.
ಮಾಧವ
ಯಾವ ಸೆಂಟ್ ಮಾರಾಯ್ತಿ ಇದು..? ನನ್ನ ತಲೆ ಸಿಡೀತಾ ಉಂಟು..!
ಸುಗಂಧಿ
(ಮಾರ್ದವವಾಗಿ ನಗುತ್ತಾಳೆ)
ಇದು.. ಶ್ರೀಮಂತಿಕೆಯ ಪರಿಮಳ. ಅದು ನಿಮಗೂ ಬರ್ತಾ ಇದೆಯಲ್ಲಾ?
ಸುಗಂಧಿ ನಗುತ್ತಾಳೆ. ಆಕೆ ನಿಧಾನಕ್ಕೆ ಮಾಧವನ ವಸ್ತ್ರಗಳನ್ನು ಕಳಚುತ್ತಾ, ಅವನನ್ನು ಹಾಸಿಗೆಗೆ ನೂಕುತ್ತಿದ್ದಾಳೆ. ಮಾಧವನ ದೇಹ ಬೇಕು ಎನ್ನುತ್ತಿದೆ, ಮನಸ್ಸು ಬೇಡ ಎನ್ನುತ್ತಿದೆ. ಅವನು ತೊಳಲಾಡುತ್ತಿದ್ದಾನೆ.
ಮಾಧವ
(ಸ್ವಲ್ಪ ಸಮಾಧಾನದಿಂದ)
ನಮ್ಮ ಮದುವೆ ಮಾಡ್ಸಿದ್ದು ದಿನೇಶಣ್ಣನೇ ಅಲ್ವಾ? ಅವರ ಮನೆಗೆ ನಾವು ದ್ರೋಹ ಮಾಡಿದ ಹಾಗೆ ಆಗುತ್ತದೆಯಲ್ಲಾ?
ಸುಗಂಧಿ
(ರಮಿಸುತ್ತಲೇ, ಕಾಮದಾಟಕ್ಕೆ ಸಿದ್ಧವಾಗುತ್ತಾ)
ಆದರೆ ನಾನು ಮದ್ವೆ ಆದದ್ದು ನಿಮ್ಮನ್ನಲ್ವಾ? ನಂಗೆ ಕನಸು ಕಾಣುವುದನ್ನು ಹೇಳಿ ಕೊಟ್ಟದ್ದು ನೀವಲ್ಲವೇ?
ಮಾಧವ ನಿಧಾನಕ್ಕೆ ಸುಗಂಧಿಯ ಪ್ರಚೋದನೆಗೆ ಒಳಗಾಗುತ್ತಿದ್ದಾನೆ. ಅವನಿಗೆ ಮಾತು ಹೊರಡುತ್ತಿಲ್ಲ. ಅಪ್ಪುಗೆ-ಚುಂಬನಗಳು ಸಾಗಿವೆ. ಕೈಗಳು ಪರಸ್ಪರರ ದೇಹವನ್ನು ಶೋಧಿಸುತ್ತಿವೆ. ಕತ್ತು, ಭುಜಗಳ ಕ್ಲೋಸಪ್ ಕಾಣುತ್ತೇವೆ... ಅಲ್ಲಿ ಬೆವರಿನ ಹನಿಗಳು... ಆಗೀಗ ಸಿಲೋಟ್ ಶಾಟ್ಸ್ನಲ್ಲಿ ಕಾಣುವ ಅರೆಬೆತ್ತಲೆ ದೇಹಗಳು.
ಮಾಧವನಿಗೆ ಸಂಪೂರ್ಣವಾಗಿ ನಶೆಯೇರಿದೆ.
ಸುಗಂಧಿ
ನನಗೆ ಸೂರು ಕೊಟ್ಟವರು ನೀವು.. ಸೂರು ತೋರಿಸಿದವರೂ ನೀವೇ. ಮನಸಲ್ಲಿ ಆಸೆ ಹುಟ್ಟಿಸಿದವರೂ ನೀವೇ.. ನಮ್ಮ ಸುಂದರ ಕನಸುಗಳ ಎದುರು ಉಳಿದದ್ದೆಲ್ಲಾ ಕೆಲಸಕ್ಕೆ ಬಾರದ ವಿಷಯಗಳೇ ಅಲ್ಲವೇ?
ಮಾಧವನ ಕಸಿವಿಸಿ ಹೆಚ್ಚಾಗುತ್ತಿದೆ. ಆಗ ಸುಗಂಧಿ ನೀಡುವ ಒಂದು ಚುಂಬನಕ್ಕೆ ಮಾಧವ ಕರಗುತ್ತಾನೆ. ಇಬ್ಬರೂ ಮಲಗುತ್ತಾ, ಕ್ಯಾಮರಾದಿಂದ ಆಚೆಗೆ ಹೋಗುತ್ತಾರೆ.
ಸುಗಂಧಿ
ಎಲ್ಲವೂ ದೈವವೇ ನೋಡಿಕೊಳ್ತದೆ.. ನಮಗೊಂದು ದಾರಿ ತೋರಿಸ್ತದೆ.
ಒಳಾಂಗಣ/ಹೊರಾಂಗಣ. ಒಂದು ಮಾಂಟಾಜ್ ಸೀಕ್ವೆನ್ಸ್ - ರಾತ್ರಿ
ದಿನೇಶಣ್ಣ ಬೋಟು ಮಾಡುವ ಸ್ಥಳದಲ್ಲಿ ಅನ್ಯಮನಸ್ಕನಾಗಿ ಕುಳಿತಿದ್ದಾನೆ.
ಮಂಜೇಶ ಸಮುದ್ರ ತೀರದಲ್ಲಿ ಅಲೆಗಳನ್ನು ನೋಡುತ್ತಾ ಕುಳಿತಿದ್ದಾನೆ. ಅವನ ಜೊತೆಯಲ್ಲಿ ಸಂಜೀವ ಹಾಗೂ ರಾಕೇಶನೂ ಇದ್ದಾರೆ. ಅವರು ಅವರದ್ದೇ ಲೋಕದಲ್ಲಿ ಕಳೆದು ಹೋಗಿದ್ದಾರೆ.
ಸುಗಂಧಿ ಫಿಶ್ ಫ್ರೈ ಮಾಡುತ್ತಿದ್ದಾಳೆ. ಇಲ್ಲಿ ಮೀನು ಸೀಗುಡುವ ಶಬ್ದ ಕೇಳಿಸುತ್ತಿದೆ. ಮಾಧವ ಆಕೆಯನ್ನು ಹಿಂದಿನಿಂದ ತಬ್ಬಿಕೊಂಡಿದ್ದಾನೆ. ಅವರಿಬ್ಬರೂ ಅನ್ಯಮನಸ್ಕರಾಗಿದ್ದಾರೆ.
ಬನ್ನಂಜೆ ಏಕಾಂಗಿಯಾಗಿ ತನ್ನ ಮನೆಯಲ್ಲಿ ಕುಳಿತು ಬಲೆ ರಿಪೇರಿ ಮಾಡುತ್ತಿರುತ್ತಾನೆ. ಅವನೂ ಅನ್ಯಮನಸ್ಕನಾಗಿದ್ದಾನೆ.
ಒಳಾಂಗಣ. ಮಾಧವ ಸುಗಂಧಿಯರ ಹೊಸ ಮನೆ - ನಸು ಬೆಳಗ್ಗೆ
ಗಂಭೀರವಾಗಿರುವ ಸಮುದ್ರದ ಅಲೆಗಳಿಂದ ನಾವು ಬೆಳಗನ್ನು ಕಾಣುತ್ತೇವೆ. ಐತ ಕಳಿ ಇಳಿಸಿ, ಅದನ್ನು ತನ್ನ ಪಾತ್ರೆಗಳಿಗೆ ಬಗ್ಗಿಸುವುದು ಇತ್ಯಾದಿ ಪ್ರಕ್ರಿಯೆಗಳನ್ನು ನಾವು ಕಾಣುತ್ತೇವೆ.
ಮಾಧವನ ಮನೆಯಲ್ಲಿ ಮೊಬೈಲ್ ರಿಂಗ್ ಆಗಲಾರಂಭಿಸುತ್ತದೆ. ಮಾಧವ ನಿಧಾನಕ್ಕೆ ಎದ್ದು ಹೋಗಿ ಫೋನ್ ರಿಸೀವ್ ಮಾಡುತ್ತಾನೆ. ಅದು ದಿನೇಶಣ್ಣನ ಫೋನು.
ಮಾಧವ
ಸರಿ ಅಣ್ಣ.. ಬನ್ನಂಜೆಗೆ ನಾನು ಹೇಳ್ತೇನೆ..
ಮಾಧವ ಫೋನ್ ಕೆಳಗಿಡುತ್ತಾನೆ. ಹಿಂತಿರುಗಿ ನೋಡಿದರೆ ಸುಗಂಧಿ ತಲೆಕೂದಲು ಕಟ್ಟುತ್ತಾ ಬರುವ ಆಕೆ, ಏನಾಯ್ತು ಎನ್ನುವಂತೆ ಮಾಧವನ ಮುಖ ನೋಡುತ್ತಾಳೆ.
ಮಾಧವ
ದಿನೇಶಣ್ಣ ಕಾಲ್ ಮಾಡಿದ್ದು. ಇವತ್ತು ರಾತ್ರಿ ಇಲ್ಲೇ ಶಾಲೆ ಬಯಲಲ್ಲಿ ಆಟ ಉಂಟಂತೆ. ರಾತ್ರಿ ಊಟಕ್ಕೆ ನಮ್ಮನೆಗೆ ಬರುತ್ತೇವೆ ಅಂತ ಹೇಳಿದರು. ಏಡಿ ಸಾರು ಮಾಡ್ಬೇಕಂತೆ ನೋಡು... ಮತ್ತೆ ಬೇರೆಂತದೋ ಮಾತಾಡ್ಲಿಕ್ಕುಂಟೂಂತ ಹೇಳಿದ್ರು.
ಸುಗಂಧಿ
(ಸಂತೋಷಗೊಳ್ಳುತ್ತಾಳೆ)
ಹೌದಾ?! ಬೆಳಗ್ಗೆ ಬೆಳಗ್ಗೆ ಎಂಥ ಒಳ್ಳೆ ಸುದ್ದಿ! ಗ್ಯಾರೆಂಟಿ ಅವರು ಆಸ್ತಿ ಪತ್ರ ಕೊಡೋದಕ್ಕೇ ಬರ್ತಿರೋದು!
ಮಾಧವ
ನಂಗೆ ಹಾಗೆ ಕಾಣ್ತಿಲ್ಲ. ಬೇರೇನೋ ವಿಷಯ ಇರಬಹುದು.
ಸುಗಂಧಿ
ನೀವು ಹೋಗಿ ಐತಣ್ಣನಿಂದ ಒಂದಷ್ಟು ಕಳಿಯೂ, ಮಾರ್ಕೇಟಿನಿಂದ ಒಂದಷ್ಟು ಏಡಿಯೂ ತೆಕ್ಕೊಂಡು ಬನ್ನಿ. ನಾನು ಮಸಾಲೆ ಮಾಡಿಡ್ತೇನೆ.
ಮಾಧವನಿಗೆ ಸ್ವಲ್ಪ ಗೊಂದಲ. ಯೋಚನೆಯಲ್ಲಿ ಮುಳುಗಿದ್ದಾನೆ.
ಸುಗಂಧಿ ಅಡುಗೆ ಮನೆಯಲ್ಲಿ ಇದ್ದಾಳೆ. ಅಲ್ಲಿ ಬೆಳಗ್ಗಿನ ಕೆಲಸ ಆರಂಭವಾಗುತ್ತಿದೆ. ಮಾಧವ ತನ್ನ ಯೋಚನೆಗಳಲ್ಲೇ ಕಳೆದು ಒಳಗೆ ಬರುತ್ತಾನೆ.
ಸುಗಂಧಿ
ನಿಮಗೆ ಡೌಟು ಹೆಚ್ಚಾಯ್ತಪ್ಪ.. ಚಾ ಬೇಕಾ?
ಮಾಧವ ಚಾ ಇರಲಿ ಎನ್ನುವಂತೆ ತಲೆಯಾಡಿಸುತ್ತಾನೆ. ಆದರೂ ಅವನ ಯೋಚನೆಗಳು ತೀವ್ರವಾಗಿವೆ.
ಸುಗಂಧಿ
(ಚಹಾ ಮಾಡಲು ಶುರು ಮಾಡುತ್ತಾಳೆ)
ನನಗೆ ನಂಬಿಕೆಯಿದೆ. ನಮಗೆ ಸಿಗುತ್ತಿರೋದು, ಸಿಗಬೇಕಾದದ್ದೇ. ನಾವು ನಂಬಿದ ದೈವದ ಅನುಗ್ರಹ ಇದೆಲ್ಲಾ.
ಮಾಧವ
ಅನುಗ್ರಹವೋ? ನಮ್ಮ ಭ್ರಮೆಯೋ?!
ಸುಗಂಧಿ
(ಸಿಟ್ಟಿನಲ್ಲಿ)
ನಮ್ಮ ಮನಸ್ಸಿನ ಬಯಕೆಯನ್ನೇ ದೈವವು ವರವಾಗಿ ನೀಡಿರುವಾಗ ಸಂಶಯವೇಕೆ? ಅಷ್ಟಕ್ಕೂ ಇಲ್ಲದ ರಗಳೆಯನ್ನು ನಾವೇಕೆ ಎಳೆದುಕೊಳ್ಳಬೇಕು? ದಿನೇಶಣ್ಣನೇ ಮೈಮೇಲೆ ಬಿದ್ದು ಕೊಡ್ತೇನೆ ತೆಕ್ಕೊಳ್ಳಿ ತೆಕ್ಕೊಳ್ಳಿ ಅಂತ ಹೇಳ್ತಿರುವಾಗ, ಬೇಡಾಂತ ನಾವು ಯಾಕೆ ಹೇಳಬೇಕು?!
(ಚಹಾ ಕೊಡುತ್ತಾಳೆ)
ಚಾ ಕುಡ್ದು ಐತಣ್ಣನತ್ರ ಹೋಗಿ ಬನ್ನಿ. ಈಗಲೇ ಕಳಿ ತಂದಿಟ್ರೆ, ಸಂಜೆ ಆಗುವಾಗ ಚೆನ್ನಾಗಿ ಹುಳಿ ಬಂದಿರ್ತದೆ.
ಮಾಧವ ಚಹಾ ಕುಡಿಯಲಾರಂಭಿಸುತ್ತಾನೆ.
ಹೊರಾಂಗಣ. ಹಳ್ಳಿ ಕಟ್ಟೆ - ಬೆಳಗ್ಗೆ
ಮಾಧವ ಕಳಿ ತೆಗೆದುಕೊಂಡು ಹೋಗುತ್ತಿದ್ದಾನೆ. ದಾರಿಯಲ್ಲಿ ರಾಕೇಶ, ಸಂಜೀವ ಹಾಗೂ ಮಂಜೇಶ ತಮ್ಮ ಅಡ್ಡಾದಲ್ಲಿ ಇರುವುದನ್ನು ಕಾಣುತ್ತಾನೆ. ಮಾಧವ ಅವರನ್ನು ನೋಡಿ ಮುಗುಳ್ನಗುತ್ತಾನೆ. ಆದರೆ ಆ ಕಡೆಯಿಂದ ಪ್ರತಿಕ್ರಿಯೆ ಮಿಶ್ರವಾಗಿರುತ್ತದೆ. ಮಾಧವ ಸ್ವಲ್ಪ ಹಿಂಜರಿಕೆಯಿಂದಲೇ ಅವರತ್ತ ನಡೆಯುತ್ತಾನೆ.
ಸಂಜೀವ
ಓ.. ಮಾಧವ...
ರಾಕೇಶ
ಏನು.. ಇವತ್ತು ರಾತ್ರಿ ಭಾರೀ ಗಮ್ಮತ್ತಿರುವ ಹಾಗುಂಟು..?
ಸಂಜೀವ
(ಕೊಂಚ ಕುಹಕದಿಂದ)
ಇಲ್ಲದೆ ಮತ್ತೆ? ದೊಡ್ಡಸ್ತಿಕೆ ಬರಿವಾಗ ಸಣ್ಣ ಮೀನು ತಿನ್ನುಂದುಂಟಾ?! ಏಡಿ! ಏಡಿಯೇ ಬೇಕು ಸಮಾರಾಧನೆಗೆ!
ಮಾಧವ
ನೋಡು.. ಅಧಿಕಪ್ರಸಂಗ ಮಾತನಾಡಬೇಡ... ದಿನೇಶಣ್ಣ ಹೇಳೋದಂತೆ, ಇವನು ಆಸ್ತಿ ಪತ್ರ ರೆಡಿ ಮಾಡೋದಂತೆ. ಅದನ್ನು ತೆಗೆದುಕೊಳ್ಳೋದಕ್ಕೆ ನನಗೇನು ಹುಚ್ಚೇ? ದಿನೇಶಣ್ಣನ ಆಸ್ತಿಗೆ ವಾರಸುದಾರ ಮಂಜೇಶ. ನಾನಲ್ಲ. ಸುಮ್ಮನೆ ಬಾಯಿಗೆ ಬಂದದ್ದು ಮಾತನಾಡ್ಬೇಡಿ!
ಮಂಜೇಶ
ಅಯ್ಯೋ.. ಬಿಡಿ ಮಾಧವಣ್ಣ..
ಮಾಧವ
ಹೇಗೆ ಬಿಡೋದು ಮಂಜೇಶ..?! ಎಲ್ಲರೂ ಮನಸ್ಸಿಗೆ ಬಂದ ಹಾಗೆ ಮಾಡುದು, ಕಡೆಗೆ ನಾನು ಕೆಟ್ಟವನು ಆಗೋದು! ನಾನೇನು ಆಸ್ತಿ ನಂಗೆ ಕೊಡಿ ಅಂತ ಕೇಳಿದ್ದೇನಾ? ಅಥವಾ ನಿನಗೆ ಆಸ್ತಿ ಕೊಡ್ಬಾರ್ದೂಂತ ಚುಚ್ಚಿ ಕೊಟ್ಟಿದ್ನಾ? ಯಾಕೆ ಸುಮ್ಮ ಸುಮ್ಮನೆ ನನ್ನ ಬಗ್ಗೆ ಇಲ್ಲದ್ದೆಲ್ಲಾ ಮಾತಾಡೋದು?
ರಾಕೇಶ
ಅಲ್ಲಲ್ಲ.. ಇಲ್ಲಿ ನೋಡು... ಮಂಜೇಶನಿಗೆ ಹೇಗಿದ್ರೂ...
ಮಾಧವ
ಮಂಜೇಶನನ್ನು ನಾನೇನು ಇವತ್ತು ನೋಡ್ತಿರೋದಾ? ಅವನಿಗೆ ದುಬೈಗೆ ಹೋಗ್ಲಿಕ್ಕೆ ಆಸೆ ಉಂಟೂಂತ ಎಷ್ಟು ಸಲ ದಿನೇಶಣ್ಣನ ಹತ್ರ ಹೇಳಿದ್ದಾನೆಂತ ನಿಮಗೆ ಗೊತ್ತುಂಟಾ? ಸುಮ್ಮನೆ ಈಗ ದೂರು ನನಗೆ! ನೋಡು ರಾಕೇಶ... ಅವರು ಹೇಳಿದ್ರೂಂತ ಈಗ ನೀನು ಆಸ್ತಿ ಪತ್ರ ಎಲ್ಲಾ ರೆಡಿ ಮಾಡ್ಬೇಡ...
ಮಾಧವ ಮಾತನಾಡುತ್ತಾ ಗದ್ಗತಿತನಾಗುತ್ತಾನೆ. ರಾಕೇಶ ಸಂಜೀವರಿಗೆ ತಮ್ಮ ಮಾತಿನ ಮೇಲೆ ಬೇಸರವಾಗುತ್ತದೆ. ಸಂಜೀವ ಮಾಧವನ ಭುಜದ ಮೇಲೆ ಕೈ ಇಡುತ್ತಾನೆ.
ರಾಕೇಶ
(ಸ್ವಲ್ಪ ತಗ್ಗಿದ್ದಾನೆ. ತಪ್ಪಿತಸ್ತನ ಧ್ವನಿಯಲ್ಲಿ)
ಅದು... ಆಸ್ತಿ ಪತ್ರ ರೆಡಿ ಮಾಡಿ ದಿನೇಶಣ್ಣನಿಗೆ ಕೊಟ್ಟಾಯ್ತು... ಇಲ್ಲದಿದ್ರೆ ಅವರ ಹಠ ಗೊತ್ತುಂಟಲ್ಲ...
ಮಾಧವ
ನೋಡಿ... ನೋಡಿ! ಇವನ ಬುದ್ಧಿ ನೋಡಿ! ಹೀಗೆ ಮಾಡ್ಬೇಡಿ ಅಂತ ದಿನೇಶಣ್ಣನಿಗೆ ಹೇಳಬಹುದಿತ್ತಲ್ಲಾ?! ಅದು ಮಾಡದೇ, ಈಗ ನನ್ನನ್ನು ಯಾಕೆ ದೂರೋದು?!
ಮಾಧವ ಇನ್ನೂ ಗದ್ಗದಿತನಾಗಿಯೇ ಇದ್ದಾನೆ. ಈಗ ರಾಕೇಶನೂ ಬಳಿಗೆ ಬರ್ತಾನೆ.
ರಾಕೇಶ
ಛೇ... ನೀನು ಎಂತ ಮಾಧವಣ್ಣಾ ನೀನು? ಬಿಡು. ಈ ಚಿಲ್ಲರೆ ವಿಷಯಕ್ಕೆ ಕಣ್ಣೀರು ಹಾಕೋದಾ?! ಕಡಲ ಗುಳಿಗ ನೀನು.. ಕಡಲ ಗುಳಿಗ!
ಮಾಧವ
ನೋಡು... ಇನ್ನೊಂದ್ ಸರ್ತಿ ನೀನು, ನನ್ನ ಮತ್ತೆ ಮಂಜೇಶನ ನಡುವೆ ತಂದ್ ಹಾಕ್ಬೇಡ...
ಸಂಜೀವ
ಛೇ! ಹಾಗೆಲ್ಲಾ ಏನೂ ಇಲ್ಲ ಬಿಡು. ಇವತ್ತು ರಾತ್ರಿ ಊಟಕ್ಕೆ ನಾವೂ ಬರ್ತೇವೆ. ಅತ್ತಿಗೆಯತ್ರ ಹೇಳು... ಏಡಿ ಸಾರು ಸ್ವಲ್ಪ ಜಾಸ್ತಿ ಮಾಡಲಿ. ಮತ್ತೆ... ಕಳಿಯಲ್ಲಿ ನಮಗೂ ಒಂದು ಪಾಲು ಇರಲಿ.
ಮಾಧವ ಏನೂ ಹೇಳದೇ ಅಲ್ಲಿಂದ ಹೊರಡುತ್ತಾನೆ.
ಸಂಜೀವ
(ಮಂಜೇಶನನ್ನು ಛೇಡಿಸುವಂತೆ)
ಕಳಿಯಲ್ಲಿ ಮಕ್ಕಳಿಗೆಲ್ಲಾ ಪಾಲಿಲ್ಲ!
ಮಂಜೇಶ ಅನ್ಯಮನಸ್ಕನಾಗಿಯೇ ಇದ್ದಾನೆ. ಆದರೂ ಮುಗುಳ್ನಗುತ್ತಾನೆ.
ಒಳಾಂಗಣ. ಯಕ್ಷಗಾನ ಚೌಕಿ - ರಾತ್ರಿ
ಯಕ್ಷಗಾನ ಚೌಕಿಯಲ್ಲಿ ವೇಷಗಳು ಸಿದ್ಧವಾಗಿವೆ. ಅವರು ಬೀಡಿ ಸೇದುತ್ತಾ, ಚಾ ಕುಡಿಯುತ್ತಾ ಅತ್ತಿತ್ತ ಹೋಗುತ್ತಿದ್ದಾರೆ. ರಂಗಸ್ಥಳದ ಕಡೆಯಿಂದ ವಿಘ್ನೇಷಾಯ.. ಎನ್ನುತ್ತಾ ಆರಂಭದ ಪದ್ಯ ಕೇಳಿಬರುತ್ತಿದೆ. ದಿನೇಶಣ್ಣ ಚೌಕಿಗೆ ಬಂದು ಒಂದಿಬ್ಬರನ್ನು ಮಾತನಾಡಿಸಿ ಹೋಗುತ್ತಾರೆ. ನಾವಿನ್ನೂ ಆಟದ ವೇದಿಕೆ ಕಂಡಿಲ್ಲ. ದಿನೇಶಣ್ಣನ ಜೊತೆಗೆ ಬನ್ನಂಜೆ, ಮಂಜೇಶ ಮತ್ತೆ ಇನ್ನೂ ಕೆಲವರು ಇದ್ದಾರೆ. ದಿನೇಶಣ್ಣನನ್ನು ನೋಡಿ ಅನೇಕರು ನಮಸ್ಕರಿಸುತ್ತಿದ್ದಾರೆ. ಗೌರವ ಸೂಚಿಸುತ್ತಿದ್ದಾರೆ.
ದಿನೇಶಣ್ಣ ಈಗ ಸ್ವಲ್ಪ ಅತ್ತ ಹೋಗಿ ಚರುಮುರಿ ಅಂಗಡಿಗೆ ಹೋಗುತ್ತಾರೆ. ಮಾಧವನೂ ಅಲ್ಲಿಗೆ ಬರುತ್ತಾನೆ.
ಮಾಧವ
ಅಣ್ಣ... ಎಂತದೋ ಮಾತಾಡ್ಲಿಕ್ಕುಂಟೂಂತ ಹೇಳಿದ್ರಿ..
ದಿನೇಶಣ್ಣ
(ಹೇಗೆ ಮಾತನಾಡುವುದು ಎಂದು ಯೋಚಿಸುತ್ತಾ ಆರಂಭಿಸುತ್ತಾರೆ)
ನಂಗೆ ಮಂಜೇಶನದ್ದೇ ಟೆನ್ಷನ್ ಮಾಧವಾ..
ಮಾಧವ
ಅಲ್ಲ ದಿನೇಶಣ್ಣ... ನೀವು ಆಸ್ತಿಯಲ್ಲಿ ಮಂಜೇಶನಿಗೆ ಏನೂ ಕೊಡೂದಿಲ್ಲಾಂದ್ರೆ ಹೇಗೆ? ಅವನು ಎಷ್ಟಿದ್ದರೂ ನಿಮ್ಮ ಮಗ ಅಲ್ವಾ...
ದಿನೇಶಣ್ಣ, ಏನೋ ನೆನಪಾದವರಂತೆ, ಸಹಿ ಆಗಿರುವ ಆಸ್ತಿ ಪತ್ರವನ್ನು ಮಾಧವನಿಗೆ ತೋರಿಸುತ್ತಾರೆ.
ದಿನೇಶಣ್ಣ
ಸ್ವಂತ ಮಗ ದಾರಿ ತಪ್ಪಿದಾಗ ಏನಾದ್ರೂ ಮಾಡಬೇಕಲ್ಲಾ? ಮಂಜೇಶ, ಆ ರಾಕೇಶನ ಚೇಲ! ನಿನ್ನಂಥವನೊಟ್ಟಿಗೆ ದೋಸ್ತಿ ಮಾಡೋದು ಬಿಟ್ಟು ಅವನಿಗೆ ಸಿಕ್ಕಿದ್ದು ಆ ಅರೆವಕೀಲನಾ?! ಅವನು ಇವನ ತಲೆ ಹಾಳು ಮಾಡ್ಲಿಕ್ಕೆ. ಇವನು ಅವನು ಹೇಳಿದ ಹಾಗೆ ಕುಣೀಲಿಕ್ಕೆ. ಅದಿಕ್ಕೆ... ಆ ರಾಕೇಶನಿಂದಲೇ, ಮಂಜೇಶನಿಗೆ ಸ್ವಲ್ಪ ಬಿಸಿ ಮುಟ್ಟಿಸುವ ಪ್ರಯತ್ನ ಇದು. ಹೀಗಾದರೂ ಅವನಿಗೆ ಸ್ವಲ್ಪ ಬುದ್ಧಿ ಬರುತ್ತಾ ನೋಡುವ.
ಮಾಧವನಿಗೆ ಸ್ವಲ್ಪ ಗಲಿಬಿಲಿಯಾಗಲಾರಂಭಿಸುತ್ತದೆ.
ದಿನೇಶಣ್ಣ
ಮಾಧವ.. ಅದನ್ನೇ ಹೇಳೋದಿಕ್ಕೆ ನಾನು ನಿನ್ನನ್ನು ಕರೆದದ್ದು. ಆ ರಾಕೇಶ ಮಾಡಿದ ಆಸ್ತಿ ಪತ್ರವನ್ನು ನಾನು ಎಲ್ಲರ ಮುಂದೆ ಓದುತ್ತೇನೆ. ನೀನೇನೂ ಕಸಿವಿಸಿ ಆಗಬೇಡ. ಇದೊಂದು ಸಣ್ಣ ನಾಟಕ ಅಷ್ಟೆ. ಹೀಗಾದ್ರೂ ಮಂಜೇಶನಿಗೆ ಬುದ್ಧಿ ಬರ್ತದಾಂತ ನೋಡುವ...
ಮಾಧವನಿಗೆ ಕಳವಳ, ಸಂಶಯ, ಗೊಂದಲ. ಅವನು ಅದನ್ನು ಅಡಗಿಸಲು ಪ್ರಯತ್ನಿಸುತ್ತಾನೆ.
ಮಾಧವ
(ಸ್ವಲ್ಪ ತಡವರಿಸುತ್ತಾ)
ಹಾಗಾದ್ರೆ ಈ ಆಸ್ತಿ ಪತ್ರ...?
ದಿನೇಶಣ್ಣ
ಯಾವ ಆಸ್ತಿ ಪತ್ರ? ಆ ರಾಕೇಶ ಮಾಡಿದ ಕಾಗದಕ್ಕೆ ಎಂತ ಬೆಲೆ? ಅವನೊಬ್ಬ ಲಾಯರೇ ಅಲ್ಲ ಮಾರಾಯ!
ಮಾಧವ ಹುಸಿ ನಗು ಬೀರುತ್ತಾನೆ. ಆದರೆ ಅವನು ಒಳಗಿನಿಂದ ಒಳಗೇ ತೀವ್ರವಾಗಿ ಕುಸಿದು ಹೋಗಿದ್ದಾನೆ.
ಒಳಾಂಗಣ. ಮಾಧವ ಸುಗಂಧಿಯರ ಹೊಸ ಮನೆ - ರಾತ್ರಿ
ಮಾಧವ ಈಗ ಅಡುಗೆ ಮನೆಯಲ್ಲಿದ್ದಾನೆ. ಸುಗಂಧಿ ಅಡುಗೆ ಮಾಡುವ ಗಡಿಬಿಡಿಯಲ್ಲಿದ್ದಾಳೆ. ಅಡುಗೆ ಮನೆಯಲ್ಲಿ ಕುಕ್ಕರಿನಲ್ಲಿ ಅನ್ನ ಬೇಯುತ್ತಿದೆ. ಮಾಧವ ಗಾಬರಿಯಲ್ಲಿದ್ದಾನೆ. ಸುಗಂಧಿಯೂ ತೀವ್ರ ಯೋಚನೆಯಲ್ಲಿದ್ದಾಳೆ.
ಸುಗಂಧಿ
ಅವರಿಗೆ ಬೇಕಾದ ಹಾಗೆ ಆಟ ಆಡ್ಲಿಕ್ಕೆ ನಾವೆಂತ ಗೊಂಬೆಗಳಾ? ಅವರೇ ನಮ್ಮ ಮದುವೆ ಮಾಡ್ಸಿದ್ದು, ಹೌದು. ಆದರೆ ಹಾಗಂತ ನಮ್ಮ ಬದುಕಿನ ಮೇಲೆ ಅವರಿಗೆ ಅಧಿಕಾರ ಕೊಟ್ಟದ್ದು ಯಾರು?
ಮಾಧವ
ಅಲ್ಲ.. ನಾವೇ ಸ್ವಲ್ಪ ಅರ್ಜೆಂಟ್ ಮಾಡಿದೆವಾಂತ.. ಅಷ್ಟೆಲ್ಲಾ ಕನಸು ಕಂಡದ್ದು ನಮ್ಮದೇ ತಪ್ಪೋ ಏನೋ..!
ಸುಗಂಧಿ
ಎಂತ ಮಾತಾಡ್ತೀರಿ ನೀವು? ದಿನವೂ ಕಡಲಲ್ಲಿ ಮೈ ಮುರಿದು ದುಡಿಯೋದು ಯಾರು? ನೀವಾ? ದಿನೇಶಣ್ಣನಾ? ಅಲ್ಲ ಆ ಮಂಜೇಶನಾ? ಎಂತ ತಮಾಷೆ ಇದು ಅವರದ್ದು..! ಇವತ್ತು ಆಸ್ತಿ ನಿನಗೆ. ನಾಳೆ ಆಸ್ತಿ ನಿಂಗಿಲ್ಲ! ನಾಡಿದ್ದು ಇನ್ನೆಂತದೋ. ಎಂತ ಆಟ ಇದು! ನಮ್ಮ ಬದುಕು ಅಂದ್ರೆ ಇವರಿಗೆ ತಮಾಷೆಯಾಗಿಬಿಟ್ಟಿದೆ.
ಮಾಧವ
ಆದರೆ ಈಗ ಏನು ಮಾಡೋದು? ನಾವು ಪಡ್ಕೊಂಡು ಬಂದದ್ದೇ ಇಷ್ಟು ಅಂದುಕೊಳ್ಳಬೇಕಷ್ಟೇ.
ಸುಗಂಧಿ
ನಿಮ್ಮ ತಂದೆಯೂ, ನಿಮ್ಮ ಹಾಗೆ ಹೇಡಿಯಾಗಿದ್ದರೆ, ಅವರಿಗೆ ‘ಕಡಲ ಹುಲಿ’ ಅನ್ನುವ ಹೆಸರು ಬರ್ತಿತ್ತಾ? ದೈವ ಕೊಡುವುದು, ಪಡೆದುಕೊಳ್ಳಲಿಕ್ಕೆ ಗೊತ್ತಿರುವವರಿಗೆ ಮಾತ್ರ, ನೆನಪಿರಲಿ.
ಮಾಧವ
ಆದರೆ ನಮಗೆ ಸಿಗುತ್ತದೆ ಅಂದುಕೊಂಡದ್ದು ದಿನೇಶಣ್ಣ ಕೊಡುತ್ತೇನೆ ಎಂದು ಹೇಳಿದ್ದಕ್ಕೆ ಅಲ್ವಾ? ಇಲ್ಲದಿದ್ರೆ...?
ಸುಗಂಧಿ
ದೈವ ದಾರಿ ತೋರಿಸಿದೆ. ಹೆಜ್ಜೆ ಇಡೋದು ನಮ್ಮ ಕೆಲಸ. ಈಗ ಯಾಕೆ ಹೆದರಿ ಹಿಂದೆ ಸರಿಯಬೇಕು?!
ಮಾಧವ
ಆದರೆ, ದಿನೇಶಣ್ಣ ಕೊಡೋದಿಲ್ಲ ಅಂತ ಹೇಳುವಾಗ ನಾವಾದರೋ ಏನು ಮಾಡಬಹುದು?
ಸುಗಂಧಿ
ಎಂತ ಮಾಡೋದು ಅಂದರೆ?! ನಾವೇನು ಭಿಕ್ಷುಕರೆ?
ಮಾಧವ
ಅಲ್ಲ... ಆದರೆ...
ಮಾಧವನಿಗೆ ತೀವ್ರ ಕಸಿವಿಸಿಯಾಗುತ್ತದೆ. ಆತ ಸುಗಂಧಿಯ ಬಳಿಗೆ ಹೋಗಿ ಆಕೆಯ ಭುಜವನ್ನು ಹಿಡಿದು ಮಾತನಾಡಿಸಲು ಪ್ರಯತ್ನಿಸುತ್ತಾನೆ. ಸುಗಂಧಿ ಅತ್ತಿತ್ತ ನೋಡಿ ಅಡಿಗೆ ಮನೆಯಲ್ಲಿರುವ ಚೂರಿ ಒಂದನ್ನು ಎತ್ತಿಕೊಳ್ಳುತ್ತಾಳೆ. ಮಾಧವನಿಗೆ ಅದನ್ನು ನೋಡಿ ಗಾಬರಿಯಾಗುತ್ತದೆ. ಆಕೆಯ ಮನಸ್ಸಲ್ಲಿ ಏನು ನಡೆಯುತ್ತಿದೆ ಎನ್ನುವುದನ್ನು ಅರಿಯುವುದೇ ಅವನಿಗೆ ಕಷ್ಟವಾಗಿದೆ.
ಅತ್ತ ಯಕ್ಷಗಾನ ಪ್ರಸ್ತುತಿ ಮುಂದುವರಿಯುತ್ತಿದೆ. ಅಲ್ಲಿ ಅರ್ಜುನ, ಬಂಧು ವರ್ಗದವರೊಡನೆ ಕಾದಾಡಲಾರೆ ಅನ್ನುತ್ತಿದ್ದಾನೆ. ಕೃಷ್ಣ ಅರ್ಜುನನನ್ನು ಯುದ್ಧಕ್ಕೆ ಪ್ರೇರೇಪಿಸುತ್ತಿದ್ದಾನೆ. ಇತ್ತ ಸುಗಂಧಿ ಹಾಗೂ ಮಾಧವನ ನಡುವೇ ಅದೇ ಸ್ಥಿತಿಯೇ ಇದೆ.
ಸುಗಂಧಿ
ರಾಕೇಶ ಮಾಡಿದ ಆಸ್ತಿ ಪತ್ರ ಸುಳ್ಳು ಅಂತ ನಮಗೆ ಹಾಗೂ ದಿನೇಶಣ್ಣನಿಗೆ ಮಾತ್ರ ಗೊತ್ತಿರೋದು. ದಿನೇಶಣ್ಣನೇ ಇಲ್ಲದಿದ್ರೆ?
ಮಾಧವನಿಗೆ ಭಯ, ಶಾಕ್ ಆಗುತ್ತದೆ. ಒಂದು ಕ್ಷಣ ಹೇಗೆ ಪ್ರತಿಕ್ರಿಯಿಸುವುದೆಂದೇ ಅವನಿಗೆ ಅರ್ಥವಾಗುವುದಿಲ್ಲ.
ಮಾಧವ
(ಶಾಕ್ನಲ್ಲಿ)
ಏನೂಂತ ಮಾತನಾಡುತ್ತಿದ್ದೀಯ?! ನಿನ್ನ ತಲೆ ಸರಿ ಉಂಟಾ? ದಿನೇಶಣ್ಣ ಇಲ್ಲದಿದ್ರೆ ಅಂದೆಯಾ?! ಏನು ಅವರಿಗೆ ಚೂರಿ ಹಾಕ್ತಿಯಾ? ಏನಾಗಿದೆ ನಿನ್ನ ಬುದ್ಧಿಗೆ?!
ಸುಗಂಧಿ ಏನೂ ಹೇಳದೇ ಒಳಗೊಳಗೇ ಧೈರ್ಯ ತಂದುಕೊಳ್ಳುತ್ತಿದ್ದಾಳೆ. ಮಾಧವನಿಗೆ ಆಕೆಯನ್ನು ನೋಡಿ ಭಯವಾಗಲಾರಂಭಿಸುತ್ತದೆ.
ಮಾಧವ
ನೀನು ಮಾತನಾಡುತ್ತಿರುವುದು ಕೊಲೆಯ ವಿಚಾರ. ಕೋರ್ಟು - ಪೋಲೀಸು - ಜನ ಇದ್ದಾರೆ.. ಸಗಣಿ ತಿನ್ನುವ ಕೆಲಸ ಇದು. ಇಂಥಾ ಯೋಚನೆ ಯಾಕೆ ಬಂತು ನಿನ್ನ ತಲೆಗೆ?
ಸುಗಂಧಿ ನಿಟ್ಟುಸಿರು ಬಿಡುತ್ತಾಳೆ.
ಸುಗಂಧಿ
ದೊಡ್ಡವರು ಮಾಡಿದ್ರೆ ಎಲ್ಲಾ ಸರಿ. ನಾವು ಮಾಡಿದ್ರೆ ಮಾತ್ರ ತಪ್ಪು? ಹೂಂ... ಕೊಂದರೆ ಹುಲಿಯನ್ನೇ ಕೊಲ್ಲಬೇಕು. ಇಲಿಯನ್ನಲ್ಲ! ಮಾಡಿದ ಕೆಲಸದಿಂದ ನಾವು ಶ್ರೀಮಂತಿಕೆಯನ್ನು ಪಡೆಯಬೇಕು. ದುಡ್ಡು ಎಲ್ಲಿಂದ ಬಂತು ಎಂದು ಯಾರೂ ಕೇಳೋದಿಲ್ಲ. ಆ ಶ್ರೀಮಂತಿಕೆ ನಮಗೆ ಎಲ್ಲಾ ಸುಖಗಳನ್ನು ಕೊಡುತ್ತದೆ.
ಮಾಧವ
ಆದರೆ... ಇದು ಸರಿಯಾ? ನಂಬಿದವರ ಬೆನ್ನಿಗೆ ಚೂರಿ ಹಾಕಬಾರದು. ದಿನೇಶಣ್ಣ ನಮ್ಮನ್ನು ನಂಬಿದ್ದಾರೆ.
ಸುಗಂಧಿ
ನಾವೂ ಅವರನ್ನು ನಂಬಿದ್ದೆವು. ಅವರತ್ರ ದುಡ್ಡುಂಟು. ಸಹಾಯ ಮಾಡಿದ್ರು. ಬಡತನದಲ್ಲಿ, ನೆಮ್ಮದಿಯಿಂದ ಕನಸು ಕಾಣುವುದೂ ಸಾಧ್ಯವಿಲ್ಲ.
ಮಾಧವ ಈಗ ಮನಸ್ಸಲ್ಲೇ ಬದಲಾಗುತ್ತಿದ್ದಾನೆ.
ಅತ್ತ ಯಕ್ಷಗಾನವೂ ಮುಂದುವರಿಯುತ್ತಿದೆ.
ಮಾಧವ
ನೀನು ಹೇಳೂದು ಅವ್ರನ್ನು ಕೊಲೆ ಮಾಡಬೇಕೂಂತ!
ಸುಗಂಧಿ
ಯಾಕೆ ಅದನ್ನು ಕೊಲೆ ಅಂತ ಹೇಳಿ ಅಷ್ಟು ದೊಡ್ಡ ವಿಷಯ ಮಾಡಬೇಕು? ನಾವು ದೈವದ ನುಡಿಯನ್ನು ಸತ್ಯ ಮಾಡ್ತಿರೋದು ಅಷ್ಟೇ. ನಮಗೆ ಸೇರಬೇಕಾದದ್ದನ್ನು ಪಡೆದುಕೊಳ್ಳುತ್ತಿರುವುದು ಅಷ್ಟೇ.
ಮಾಧವ ಹತಾಶನಾಗಿ ಕುಸಿಯುತ್ತಾನೆ. ಸುಗಂಧಿ ಅವನ ಪಕ್ಕದಲ್ಲಿ ತಾನೂ ಕೆಳಗೆ ಕುಸಿದು ಕೂರುತ್ತಾಳೆ.
ಸುಗಂಧಿ
(ಮಾಧವನಿಗೆ ದೈರ್ಯ ತುಂಬಿಸುತ್ತಾ)
ಮಂಜೇಶನಿಗೆ ಇದು ಯಾವುದೂ ಬೇಡ. ಆದರೆ, ನಮಗೆ ಇದೆಲ್ಲಾ ಬೇಕು! ದಿನೇಶಣ್ಣನತ್ರ ಇರೋದೆಲ್ಲಾ ನೀವೇ ದುಡಿದದ್ದು. ನಿಜವಾಗಿ ಹೇಳುವುದಿದ್ದರೆ, ಅವರ ಆಸ್ತಿಯೆಲ್ಲವೂ ನಿಮಗೇ ಸೇರಬೇಕಾಗಿರುವುದು. ಈಗ ಇಲ್ಲದ್ದೆಲ್ಲ ಯೋಚನೆ ಮಾಡಿ ಟೈಮ್ ವೇಸ್ಟ್ ಮಾಡಬೇಡಿ.
ಮಾಧವ ಅಧೀರನಾಗಿ ಸುಗಂಧಿಯನ್ನು ನೋಡುತ್ತಾನೆ. ಅವನ ಕಣ್ಣಲ್ಲಿ ನಿರ್ಧಾರವಿದೆ. ಅವನು ನಿಧಾನಕ್ಕೆ ಆಗಲಿ ಎನ್ನುವಂತೆ ತಲೆಯಾಡಿಸುತ್ತಾನೆ. ಮನೆಯಾಚೆಯಿಂದ ಗೂಬೆಯೊಂದು ಕೂಗಿದಂತೆ ಕೇಳಿಸುತ್ತದೆ. ಮಾಧವ ಅತ್ತ ನೋಡುತ್ತಾನೆ. ಕಿಟಕಿಯ ಬಳಿಗೆ ನಡೆದು ಹೋಗುತ್ತಾನೆ.
ಮಾಧವ
(ಕಿಟಕಿಯನ್ನು ಮುಚ್ಚುತ್ತಾ)
ಅಗೋ... ಗೂಬೆ ಕೂಗ್ತಾ ಇದೆ...!
ಸುಗಂಧಿ
(ಎದ್ದು ಬಂದು ಮಾಧವನ ಭುಜದ ಮೇಲೆ ಕೈ-ಇಟ್ಟು)
ಹೇಡಿಗೆ ಹೆದರಿಕೆ ಕಿವಿಯೊಳಗೇ ಕುಳಿತು ಮಾತನಾಡುತ್ತದೆಯಂತೆ! ಎಲ್ಲವೂ ಅಪಶಕುನದಂತೆಯೇ ಕಾಣಿಸುತ್ತದೆ.
ಮಾಧವ ತೀಕ್ಷ್ಣವಾಗಿ ಸುಗಂಧಿಯ ಮುಖವನ್ನೊಮ್ಮೆ ನೋಡುತ್ತಾನೆ. ಅಷ್ಟರಲ್ಲಿ ಕುಕ್ಕರ್ ಸೀಟಿ ಊದುತ್ತದೆ. ಮಾಧವ ಹಾಗೂ ಸುಗಂಧಿ ಇಬ್ಬರೂ ಒಮ್ಮೆ ಗಾಬರಿಬೀಳುತ್ತಾರೆ. ಆದರೆ ಸುಧಾರಿಸಿಕೊಳ್ಳುತ್ತಾರೆ. ಸುಗಂಧಿ ಕುಕ್ಕರ್ ಕಡೆಗೆ ಹೋಗುತ್ತಾಳೆ. ಮಾಧವ ಅಲ್ಲಿಂದಾಚೆಗೆ ನಡೆದು ಹೋಗುತ್ತಾನೆ.
ಮಾಧವ ಈಗ ಬೆಡ್ ರೂಮಿನಲ್ಲಿದ್ದಾನೆ. ಟವೆಲ್ಲಿನಿಂದ ತನ್ನ ಮೈಯ್ಯ ಬೆವರನ್ನು ಒರಸಿಕೊಳ್ಳುತ್ತಿದ್ದಾನೆ. ಅವನಿಗೆ ತೀರಾ ಗಾಬರಿಯಾಗಿದೆ. ತೀವ್ರ ಯೋಚನೆಯಲ್ಲಿದ್ದಾನೆ. ಸುಗಂಧಿ ಅಲ್ಲಿಗೆ ಬರುವವಳು, ನಿಧಾನಕ್ಕೆ ಆತನನ್ನು ಹಿಂದಿನಿಂದ ತಬ್ಬಿಕೊಳ್ಳುತ್ತಾಳೆ. ಮಾಧವನ ಗೊಂದಲ ಇನ್ನಷ್ಟು ಹೆಚ್ಚಾಗುತ್ತದೆ.
ಸುಗಂಧಿ
(ನಯವಾಗಿ)
ನಿಮ್ಮ ತಂದೆ ಮಾಡಿದ್ದ ಸಾಲ ತೀರಿಸಿದಿರಿ. ನನ್ನನ್ನು ಮದುವೆಯಾಗಿ ಮನೆಗೆ ಕರೆದುಕೊಂಡು ಬಂದಿರಿ. ದಿನೇಶಣ್ಣನಿಗೆ ಬೆನ್ನೆಲುಬಾಗಿ ನಿಂತಿರಿ. ಎಲ್ಲರಿಗೂ ಒಳ್ಳೆಯದೇ ಮಾಡಿದ ನಿಮಗೆ ಏನು ಸಿಕ್ಕಿದಂತಾಯಿತು?
ಮಾಧವ ಏನೂ ಹೇಳದೇ, ತೊಳಲಾಡುತ್ತಾ ನಿಲ್ಲುತ್ತಾನೆ. ಸುಗಂಧಿ ಮೆದುವಾಗಿ ಮಾಧವನ ಬೆನ್ನಿಗೆ ಮುತ್ತಿಡುತ್ತಾಳೆ.
ಸುಗಂಧಿ
ಬೇರೆಯವರ ಮನೆಗೆ ಆಧಾರ ಆಗಿರುವ ನೀವು, ನಿಮ್ಮ ಮನೆಗೆ ಯಾವಾಗ ಆಧಾರ ಆಗ್ತೀರಿ?
ಮಾಧವ ಹಾಗೂ ಸುಗಂಧಿಯ ಮಧ್ಯೆ ಅಸಹನೀಯ ಮೌನವಿದೆ. ಹೊರಗಿನಿಂದ ಗೂಬೆಯೊಂದು ಕೂಗುವ ಸದ್ದು ಮತ್ತೆ ಕೇಳಿಸುತ್ತದೆ. ಮಾಧವನ ಗಮನ ಆ ಕಡೆಗೆ ಒಮ್ಮೆ ಹೋಗುತ್ತದೆ. ಅವನು ಅಸಹನೆ, ಗೊಂದಲಗಳಿಂದ ತಲೆ ಕೊಡವಿಕೊಳ್ಳುತ್ತಾನೆ.
ಮಾಧವ
ಸರಿ.. ಆದ್ರೆ ಯಾರಿಗೂ ಸಂಶಯ ಬರ್ಲಿಕ್ಕಿಲ್ವಾ?
ಸುಗಂಧಿ
ಯಾರಿಗೂ ಸಂಶಯ ಬರದ ಹಾಗೆ ಮಾಡುವ. ಮಂಜೇಶನ ಮೇಲೆ ದೂರು ಬರುವ ಹಾಗೆ ಮಾಡಿದ್ರೆ ಎಲ್ಲವನ್ನೂ ಒತ್ತರೆ ಮಾಡಿದ ಹಾಗಾಗುತ್ತದೆ.
ಮಾಧವ ತೀವ್ರವಾಗಿ ಯೋಚಿಸಲಾರಂಭಿಸುತ್ತಾನೆ.
ಸುಗಂಧಿ
ಎಲ್ಲರೂ ಯಕ್ಷಗಾನ ನೋಡಿ ನಿದ್ದೆ ಕೆಟ್ಟು ದಣಿದಿರುತ್ತಾರೆ. ಮೈಯ್ಯ ಮೇಲೆ ಸ್ವಯವಿಲ್ಲದೇ ನಿದ್ರಿಸಿರುತ್ತಾರೆ. ಆಗ ನೀವು ಮೆಲ್ಲಗೆ ಹೋಗಿ ಕೆಲಸ ಮುಗಿಸಿಬಿಡಿ.
ಮಾಧವ
ಇದೆಲ್ಲ ನಿನಗೆ ಬೇಕಾಗಿರುವುದು. ಈ ಕೆಲಸವನ್ನೂ ನೀನೇ ಮಾಡಬಹುದಲ್ಲಾ?
ಸುಗಂಧಿ
(ಸ್ವಲ್ಪ ತಡವರಿಸುತ್ತಾ)
ಮಾತಾಡುವಾಗ ಗಂಡಸಿನ ಹಾಗೆ ಮಾತನಾಡಿ. ನೀವು ಯಾವಾಗ ಸಂಸಾರದ ಜವಾಬ್ದಾರಿ ವಹಿಸಿಕೊಳ್ಳೋದು? ಕಡಲಗುಳಿಗ ನೀವು. ನಿಮ್ಮ ಕೈಯಲ್ಲಾಗೋದಿಲ್ಲವೇ ಇದು? ಇದನ್ನೂ ನಿಮ್ಮ ಹೆಂಡತಿಯೇ ಮಾಡಬೇಕೇ?
ಮಾಧವ ಸ್ವಲ್ಪ ಅಧೀರನಾಗುತ್ತಾನೆ. ಅವನಿಗೆ ಅವಮಾನ ಮಾಡಿದಂತೆ, ತಿವಿದಂತಾಗುತ್ತದೆ.
ಈ ದೃಶ್ಯ ಮುಂದಿನ ದೃಶ್ಯದೊಂದಿಗೆ ಇಂಟರ್ ಕಟ್ ಆಗುತ್ತಾ ಹೋಗುತ್ತದೆ.
ಹೊರಾಂಗಣ. ಯಕ್ಷಗಾನ ಬಯಲು - ರಾತ್ರಿ
ಇತ್ತ ಯಕ್ಷಗಾನ ಆಟ ಶುರುವಾಗುತ್ತದೆ. ದಿನೇಶಣ್ಣ ಆಟ ನೋಡಲು ಕುಳಿತಿದ್ದಾರೆ. ಅರ್ಜುನನಿಗೆ ಗೀತೋಪದೇಶ ಮಾಡುವ ಕೃಷ್ಣನ ಸಂದರ್ಭವನ್ನು ಕಾಣುತ್ತೇವೆ. ದಿನೇಶಣ್ಣ ಮತ್ತು ಅವನ ಜೊತೆಗಾರರು ಮಗ್ನರಾಗಿ ಆಟ ನೋಡುತ್ತಿರುತ್ತಾರೆ. ಸ್ವಲ್ಪ ಹೊತ್ತಿನ ನಂತರ ದಿನೇಶಣ್ಣ ಕುಳಿತಲ್ಲೇ ತೂಕಡಿಸಲಾರಂಭಿಸುತ್ತಾರೆ. ಅವರು ಎದ್ದು ನೋಡಿದರೆ, ಮಂಜೇಶನೂ ನಿದ್ರಿಸುತ್ತಿದ್ದಾನೆ. ಅವರು ಮಂಜೇಶನನ್ನು ಎಬ್ಬಿಸಿ ಬಾ ಹೋಗೋಣ ಎಂದು ಅಲ್ಲಿಂದ ಹೊರಡುತ್ತಾರೆ.
ಒಳಾಂಗಣ/ಹೊರಾಂಗಣ. ಮಾಧವ ಹಾಗೂ ಸುಗಂಧಿಯರ ಹೊಸ ಮನೆ - ರಾತ್ರಿ
ಎಲ್ಲರೂ ಮಾಧವನ ಮನೆಗೆ ಬರುತ್ತಾರೆ. ಇಲ್ಲಿ ಒಂದು ರಿದಮಿಕ್ ಮೊಂಟಾಜ್ ರೀತಿಯಲ್ಲಿ ಬಿಲ್ಡಪ್ ಆಗುತ್ತಾ ಹೋಗುತ್ತದೆ. ಮನೆಯಾಚೆ ಗೂಬೆ ಆಗೀಗ ಕೂಗುವ ಸದ್ದು ನಮಗೆ ಕೇಳಿಸುತ್ತಿದೆ. ಎಲ್ಲರ ಗಮನ ಪದೇ ಪದೇ ಅತ್ತ ಹೋಗುತ್ತಿದೆ.
ದಿನೇಶಣ್ಣ ಮುಖಕ್ಕೆ ನೀರು ಹೊಡೆದುಕೊಳ್ಳುತ್ತಿದ್ದಾನೆ. ಸುಗಂಧಿ ಪಕ್ಕದಲ್ಲಿ ನಿಂತು ಅವನಿಗೆ ಟವೆಲ್ ಕೊಡುತ್ತಾಳೆ. ದಿನೇಶಣ್ಣ ಸಣ್ಣ ಮುಗುಳ್ನಗೆಯೊಂದಿಗೆ ಟವೆಲ್ ತೆಗೆದುಕೊಂಡು ಮುಖ ಒರೆಸಿಕೊಳ್ಳುತ್ತಿದ್ದಾನೆ. ಸುಗಂಧಿ ತೀಕ್ಷ್ಣವಾಗಿ ದಿನೇಶಣ್ಣನನ್ನೇ ನೋಡುತ್ತಿದ್ದಾಳೆ. ಹಿಂದಿನಿಂದ ಬರುವ ಮಂಜೇಶ ಇವರನ್ನು ದಾಟಿಕೊಂಡು ಹೋಗುತ್ತಾನೆ.
ಮಾಧವ ಈಗ ಊಟದ ಬಟ್ಟಲುಗಳನ್ನು ತೆಗೆಯಲು ಕವಾಟಿನ ಬಳಿ ಇದ್ದಾನೆ. ಅದರ ಮೇಲಿರುವ ದೇವರ ಚಿತ್ರ ಕಂಡು ಸ್ತಬ್ಧನಾಗುತ್ತಾನೆ. ಅಲ್ಲಿಗೆ ಬರುವ ಸುಗಂಧಿಗೆ ಮಾಧವನ ತಳಮಳ ಅರ್ಥವಾಗುತ್ತದೆ. ಆಕೆ ಒಂದು ಮೊರವನ್ನು ದೇವರ ಚಿತ್ರದ ಎದುರು ಇಡುತ್ತಾಳೆ. ಮಾಧವನಿಗೆ ತಳಮಳ.
ಎಲ್ಲರೂ ಸೇರಿ ಊಟ ಮಾಡುವ ದೃಶ್ಯವನ್ನು ಕಾಣುತ್ತೇವೆ. ಸುಗಂಧಿ ಮತ್ತು ಮಾಧವ ಬಡಿಸುತ್ತಿದ್ದಾರೆ. ದಿನೇಶಣ್ಣ, ಬನ್ನಂಜೆ, ಮಂಜೇಶ, ಸಂಜೀವ ಉಣ್ಣುತ್ತಿದ್ದಾರೆ. ಏಡಿಯ ಪದಾರ್ಥದ ಹೊಗಳಿಕೆ ನಡೆಯುತ್ತಿದೆ. ಸುಗಂಧಿ ಹಾಗೂ ಮಾಧವ ಹುಸಿನಗು ಬೀರುತ್ತಿದ್ದಾರೆ. ಅವರೊಳಗಿನ ತಳಮಳ ಅವರನ್ನು ತೀವ್ರವಾಗಿ ಕಾಡುತ್ತಿರುವುದು ಕಾಣುತ್ತಾ ಸಾಗುತ್ತೇವೆ.
ಬನ್ನಂಜೆ ಮತ್ತು ಮಾಧವ ಹಾಸಿಗೆಗಳನ್ನು ಹಾಸುವಲ್ಲಿ ಜೊತೆಯಾಗಿ ಕೆಲಸ ಮಾಡುತ್ತಿದ್ದಾರೆ. ಮಾಧವ ಕಳ್ಳ ದೃಷ್ಟಿಯಿಂದ ಬನ್ನಂಜೆಯನ್ನೇ ನೋಡುತ್ತಿದ್ದಾನೆ. ಆದರೆ ಬನ್ನಂಜೆಗೆ ಇದರ ಅರಿವೇ ಇಲ್ಲ.
ದಿನೇಶಣ್ಣ ಮಾಧವನ ಕೈಹಿಡಿದು ಏನೋ ಮಾತನಾಡುತ್ತಿದ್ದಾನೆ. ಮಾಧವ ಹಾಗೇ ಒಂದು ಓರೆ ನೋಟದಿಂದ ಮನೆಯೊಳಗೆ ನೋಡಿದರೆ, ಅಲ್ಲಿ ಸುಗಂಧಿ ತೀಕ್ಷ್ಣವಾಗಿ ಮಾಧವನನ್ನೇ ನೋಡುತ್ತಿದ್ದಾಳೆ. ಮಾಧವನಿಗೆ ತಳಮಳ, ಗೊಂದಲ.
ಮನೆಯೊಳಗೆ ಬನ್ನಂಜೆ ಹಾಗೂ ಮಂಜೇಶ ಕುಳಿತು ಕುಡಿಯುತ್ತಿದ್ದಾರೆ. ಸಂಜೀವನೂ ಬಂದು ಅವರನ್ನು ಸೇರಿಕೊಳ್ಳುತ್ತಾನೆ. ಸುಗಂಧಿ ಅವನ ಕೈಗೂ ಒಂದು ಕಳಿಯ ಬಾಟಲಿ ಕೊಡುತ್ತಾಳೆ. ಸಂಜೀವ ತುಸು ಮುಜುಗರದಿಂದಲೇ ತನ್ನ ತಂದೆಯೆದುರು ಕಳಿ ಕುಡಿಯಲಾರಂಭಿಸುತ್ತಾನೆ. ಇದನ್ನು ಕಂಡು ಬನ್ನಂಜೆ ಹಾಗೂ ಮಂಜೇಶ ನಗುತ್ತಾರೆ.
ಸುಗಂಧಿ ಅಡುಗೆ ಮನೆಯಲ್ಲಿ ಎಲ್ಲವನ್ನೂ ಓರಣ ಮಾಡುತ್ತಾ ಅಲ್ಲಿಯೇ ಇರುವ ಕತ್ತಿಯನ್ನು ಒಮ್ಮೆ ಎತ್ತಿ ಅಲಗನ್ನು ಹಗುರವಾಗಿ ಸ್ಪರ್ಷಿಸಿ ಮತ್ತೆ ಅಲ್ಲೇ ಇಡುತ್ತಾಳೆ. ಆಗ ಅವಳ ಹಿಂದೆ ಮಾಧವ ಬಂದು ನಿಂತಿರುತ್ತಾನೆ. ಅವರಿಬ್ಬರೂ ಪರಸ್ಪರ ನೋಡಿಕೊಳ್ಳುತ್ತಾರೆ.
ಹೊರಾಂಗಣ. ಮಾಧವ ಹಾಗೂ ಸುಗಂಧಿಯರ ಹೊಸ ಮನೆ - ರಾತ್ರಿ
ಮಾಧವ ಮನೆಯಾಚೆಗೆ ಒಂದು ದೋಣಿಯಲ್ಲಿ ಕುಳಿತಿದ್ದಾನೆ. ಅಲ್ಲಿಗೆ ಸುಗಂಧಿ ಬರುತ್ತಾಳೆ. ಆಕೆ ಅವನ ಭುಜ ಮುಟ್ಟಿ, ಸಮಾಧಾನದಿಂದ ಅವನ ಕಡೆಗೆ ಕತ್ತಿಯನ್ನು ಹಿಡಿ ಮುಂದೆ ಮಾಡಿ ಚಾಚುತ್ತಾಳೆ. ಮಾಧವ ಕತ್ತಿಯನ್ನು ನೋಡುತ್ತಾನೆ.
ಕೈ ಈಗ ದಿನೇಶಣ್ಣನ ಕೈಯಂತೆಯೂ, ಕೈಯಲ್ಲಿ ದೊನ್ನೆಯಲ್ಲಿ ಪಾಯಸವಿದ್ದಂತೆಯೂ ಕಾಣಿಸುತ್ತದೆ.
ಕೈ ಈಗ ಬನ್ನಂಜೆಯ ಕೈಯಂತಾಗುತ್ತದೆ. ಅದರಲ್ಲಿ ತೊಳಲಾಡುತ್ತಿರುವ ಒಂದು ಮೀನು ಕಾಣಿಸುತ್ತದೆ.
ಕೈ ಮತ್ತೆ ಸುಗಂಧಿಯ ಕೈಯ್ಯಾಗುತ್ತದೆ. ಅದರಲ್ಲಿ ಕತ್ತಿಯಿದೆ.
ಮಾಧವ ಈ ಎಲ್ಲಾ ಶಾಟ್ಗಳಿಗೆ ಶಾಕ್ನಿಂದ ಪ್ರತಿಕ್ರಿಯಿಸುತ್ತಾನೆ. ಅವನಿಗೆ ಒಟ್ಟು ಅನುಭವ ತೀವ್ರವಾಗಿ ಕಾಡುತ್ತದೆ.
ಅವನು ಅದುರುವ ಕೈಗಳಿಂದ ಕತ್ತಿಯನ್ನು ಕೈಗೆತ್ತಿಕೊಳ್ಳುತ್ತಾನೆ.
ಒಳಾಂಗಣ. ಮಾಧವ ಹಾಗೂ ಸುಗಂಧಿಯರ ಹೊಸ ಮನೆ - ರಾತ್ರಿ
ಮನೆಯೊಳಗೆ ಎಲ್ಲರೂ ಮಲಗಿರುವಾಗ ಅವರನ್ನು ದಾಟುತ್ತಾ, ನಿಧಾನಕ್ಕೆ ಮಾಧವ ಒಂದು ಕೋಣೆಯೆಡೆಗೆ ನಡೆಯುತ್ತಿದ್ದಾನೆ. ಅವನ ಕೈಯ್ಯಲ್ಲಿ ಕತ್ತಿಯಿದೆ. ಅವನ ಕೈಗಳು ಅದುರುತ್ತಿವೆ. ಮುಖದಲ್ಲಿ ಬೆವರು ಮೂಡುತ್ತಿದೆ. ಒಬ್ಬೊಬ್ಬರನ್ನೇ ದಾಟುತ್ತಾ ಮಾಧವ ದಿನೇಶಣ್ಣ ಇರುವ ಕೋಣೆಗೆ ಬರುತ್ತಾನೆ. ಅಲ್ಲಿ ಮಂಜೇಶ ಹಾಗೂ ದಿನೇಶಣ್ಣ ಮಲಗಿರುತ್ತಾರೆ. ಪರಸ್ಪರ ದೂರ ಇರುತ್ತಾರೆ. ಮಾಧವ ದಿನೇಶಣ್ಣನ ಮುಖವನ್ನು ನೋಡುತ್ತಾನೆ. ದಿನೇಶಣ್ಣ ಹಾಯಾಗಿ, ಪ್ರಶಾಂತವಾಗಿ ಮಲಗಿದ್ದಾರೆ. ಮಾಧವನ ಆತಂಕ ಹೆಚ್ಚಾಗುತ್ತದೆ. ಮಾಧವ ನಡುಗುವ ಕೈಯ್ಯನ್ನು ಮೇಲೆತ್ತುತ್ತಾನೆ. ಅಲ್ಲೇ ಥರಗುಡುವ ಕೈ ನಿಲ್ಲುತ್ತದೆ. ದಿನೇಶಣ್ಣನ ಮುಖವನ್ನೇ ಆತ ಭಯದಿಂದ ನೋಡುತ್ತಿದ್ದಾನೆ. ದಿನೇಶಣ್ಣ ಕಣ್ಣು ತೆರೆಯುತ್ತಾನೆ. ಮಾಧವನ ಗಾಬರಿ ಹೆಚ್ಚಾಗುತ್ತದೆ. ಕತ್ತಿಯಿರುವ ಕೈ ರಭಸದಿಂದ ಕೆಳಗಿಳಿಯುತ್ತದೆ. ಮಾಧವನ ಮುಖಕ್ಕೆ ರಕ್ತ ಹಾರುತ್ತದೆ.
ಒಳಾಂಗಣ. ಮಾಧವ ಹಾಗೂ ಸುಗಂಧಿಯರ ಹೊಸ ಮನೆ - ರಾತ್ರಿ
ಸುಗಂಧಿ ಕೋಣೆಯಲ್ಲಿ ಕಾಯುತ್ತಿದ್ದಾಳೆ. ಅಲ್ಲಿಗೆ ಮಾಧವ ರಭಸದಿಂದ ನುಗ್ಗಿ ಬರುತ್ತಾನೆ. ಅವನ ಮುಖದಲ್ಲಿ ರಕ್ತದ ಕಲೆಯಿದೆ. ಸುಗಂಧಿ ಮತ್ತು ಮಾಧವನಿಗೆ ಒಂದು ಕ್ಷಣ ಏನು ಮಾಡುವುದೆಂದು ತೋಚುವುದಿಲ್ಲ. ಮಾಧವ ಮತ್ತೆ ಅದುರುವ ಹೆಜ್ಜೆಗಳನ್ನಿಡುತ್ತಾ ಕೋಣೆಯೊಳಗೆ ಬಂದು ಕುಸಿದು ಬೀಳುತ್ತಾನೆ. ಮೊಣಕಾಲಲ್ಲಿ ಕುಳಿತಿದ್ದಾನೆ. ಅವನ ಎದುರಿಗೆ ಬಂದು ಕೂರುವ ಸುಗಂಧಿ ಏನಾಯಿತು ಎನ್ನುವಂತೆ ಅವನನ್ನು ನೋಡುತ್ತಾಳೆ.
ಮಾಧವ ನಡುಗುವ ಕೈಯೆತ್ತಿ ಕತ್ತಿಯನ್ನು ತೋರಿಸುತ್ತಾನೆ. ಅದರಲ್ಲಿ ರಕ್ತ ಮೆತ್ತಿರುತ್ತದೆ. ಸುಗಂಧಿ ಕೂಡಲೇ ಆ ಕತ್ತಿಯನ್ನು ಸೆಳೆಯುತ್ತಾಳೆ. ಆಕೆ ಕೋಣೆಯಿಂದ ಮೆತ್ತನೆ ಹೆಜ್ಜೆಯಿಡುತ್ತಾ ಓಡುತ್ತಾಳೆ. ಮಲಗಿರುವವರನ್ನು ಲಗುಬಗೆಯಿಂದ ಹಾರುತ್ತಾ ದಾಟುತ್ತಾ ಹೋಗುತ್ತಾಳೆ. ದಿನೇಶಣ್ಣ ಮಲಗಿದ್ದ ಕೋಣೆಯನ್ನು ಪ್ರವೇಶಿಸುವ ಆಕೆ, ಕತ್ತಿಯನ್ನು ಮಂಜೇಶನ ಪಕ್ಕದಲ್ಲಿ ಇಡುತ್ತಾಳೆ. ದಿನೇಶಣ್ಣನನ್ನು ಒಮ್ಮೆ ನೋಡಿ ಬೆರಗಾಗಿ ನಿಲ್ಲುತ್ತಾಳೆ. (ಆದರೆ ನಾವಿಲ್ಲಿ ದಿನೇಶಣ್ಣನನ್ನು ತೋರಿಸುವುದಿಲ್ಲ)
ಕೋಣೆಯಲ್ಲಿ ಮಾಧವ ಇನ್ನೂ ದಿಗ್ಭ್ರಮೆಯಿಂದ ನಡುಗುತ್ತಿದ್ದಾನೆ. ಅಲ್ಲಿಗೆ ಬರುವ ಸುಗಂಧಿ ಆತುರದಲ್ಲಿ ಮಾಧವನ ಬಟ್ಟೆ ಬಿಚ್ಚಲಾರಂಭಿಸುತ್ತಾಳೆ. ಮಾಧವ ಹಾಗೇ ಸುಮ್ಮನೆ ಕುಳಿತಿರುತ್ತಾನೆ. ಸುಗಂಧಿಯ ಕೈಗಳು ಮಾಧವನ ಮೈಯ್ಯಿಂದ ಬಟ್ಟೆಯನ್ನು ಬಿಚ್ಚುತ್ತಿದ್ದರೂ, (ಇದನ್ನು ಹಿಂದೆ ತೋರಿಸಿದಂತೆ ರೊಮ್ಯಾಂಟಿಕ್ ಲೈಟಿಂಗ್ ಮೂಲಕ ತೋರಿಸಬೇಕು) ಮಾಧವನಲ್ಲಿ ಯಾವುದೇ ಪ್ರತಿಕ್ರಿಯೆಯಿಲ್ಲ. ಸುಗಂಧಿ ಮಾಧವನ ಮುಖವನ್ನು ಬಟ್ಟೆಯಿಂದ ಒರಸುತ್ತಾಳೆ. ಮುಖದಲ್ಲಿ ಇರಬಹುದಾದ ರಕ್ತದ ಕಲೆಗಳಿಗಾಗಿ ಹುಡುಕುತ್ತಾಳೆ. ಮೈಯ್ಯಲ್ಲಿ ಇರಬಹುದಾದ ರಕ್ತದ ಕಲೆಯನ್ನೂ ಹುಡುಕಿ ಒರಸುತ್ತಾಳೆ. ಈ ಸ್ಪರ್ಷದಲ್ಲಿ ಆತುರವಿದೆ. ಆದರೆ ಮೊದಲಿನ ಪ್ರೀತಿಯಿಲ್ಲ.
ಸುಗಂಧಿ
(ಮಾಧವನನ್ನು ತಬ್ಬಿಕೊಂಡು)
ಓ ನನ್ನ ದೈವ... ಕಡಲ ಗುಳಿಗ.. ಏನನ್ನು ಬೇಕಾದರೂ ಗೆಲ್ಲುವ ಯೋಧ ನೀವು.
ಸುಗಂಧಿ ಎಲ್ಲಾ ಬಟ್ಟೆಯನ್ನು ತೆಗೆದುಕೊಂಡು ಅಲ್ಲಿಂದ ಓಡುತ್ತಾಳೆ. ಮಾಧವ ಇನ್ನೂ ಭಯದಿಂದ, ಸುಧಾರಿಸಿಕೊಳ್ಳುತ್ತಾ ಕೋಣೆಯಲ್ಲಿ ಒಂಟಿಯಾಗಿ ಕುಳಿತಿದ್ದಾನೆ.
ಒಳಾಂಗಣ/ಹೊರಾಂಗಣ. ಮಾಧವ ಹಾಗೂ ಸುಗಂಧಿಯರ ಹೊಸ ಮನೆ - ನಸು ಬೆಳಗ್ಗೆ
ಇನ್ನೂ ಬೆಳಕು ಮೂಡುತ್ತಿದೆ. ಆಗ ಮಾಧವನ ಮನೆಯನ್ನು ಹೊರಗಿನಿಂದ ಕಾಣುತ್ತಿದ್ದೇವೆ. ಅಲ್ಲಿ ಒಂದು ಕೋಣೆಯ ಲೈಟ್ ಆನ್ ಆಗುತ್ತದೆ. ಮಂಜೇಶ ಜೋರಾಗಿ ಕಿರಿಚುವುದು ಕೇಳಿಸುತ್ತದೆ.
ಮಂಜೇಶ
ಅಮ್ಮಾ...
ಈಗ ಮನೆಯೊಳಗೆ ದಿನೇಶಣ್ಣ ಮಲಗಿದ್ದ ಕೋಣೆಗೆ ಬನ್ನಂಜೆ ಓಡಿ ಬಂದಿದ್ದಾನೆ. ಅವನ ಹಿಂದಿನಿಂದ ಸುಗಂಧಿಯೂ ಬಂದು ನಿಲ್ಲುತ್ತಾಳೆ. ಮಂಜೇಶ ಗಾಬರಿಯಿಂದ ನೆಲದಲ್ಲಿ ಬಿದ್ದು ಏದುಸಿರು ಬಿಡುತ್ತಿದ್ದಾನೆ. ಅವನ ಕೈಯ್ಯಲ್ಲಿ ರಕ್ತಸಿಕ್ತ ಕತ್ತಿಯಿದೆ. ಬನ್ನಂಜೆ ಗಾಬರಿಯಿಂದ ದಿನೇಶಣ್ಣನ ಕಡೆಗೆ ನೋಡುತ್ತಾನೆ. ಅಲ್ಲಿ ಕೊಲೆಯಾದ ದಿನೇಶಣ್ಣನನ್ನು ಮೊದಲ ಬಾರಿಗೆ ನಾವು ಕಾಣುತ್ತೇವೆ.
ಸುಗಂಧಿ
(ಮಂಜೇಶನ ಕಡೆಗೆ ಕೈತೋರಿಸುತ್ತಾ. ಜೋರಾಗಿ ಕಿರುಚುತ್ತಾಳೆ)
ಕೊಂದ! ಕೊಂದ! ಮಂಜೇಶ ಕೊಂದ! ಮಂಜೇಶ...!
ಮಂಜೇಶ ಗಾಬರಿಯಿಂದ ಎದ್ದು ಬನ್ನಂಜೆ ಹಾಗೂ ಸುಗಂಧಿಯ ಮಧ್ಯದಿಂದ ಓಡಿಹೋಗುತ್ತಾನೆ. ಸುಗಂಧಿ ಬೆರಗು ನಟಿಸುತ್ತಾಳೆ. ಬನ್ನಂಜೆ ಮಂಜೇಶನನ್ನು ತಡೆಯುವ ಪ್ರಯತ್ನವೇ ಮಾಡುವುದಿಲ್ಲ. ಅವನು ದಿನೇಶಣ್ಣನ ದೇಹವನ್ನು ನೋಡುತ್ತಾ ತಣ್ಣಗೆ ನಿಂತಿರುತ್ತಾನೆ.
ಮಂಜೇಶನಿಗೆ ಗಾಬರಿಯಾಗಿ ಆತ ಓಡಲಾರಂಭಿಸುತ್ತಾನೆ. ಮನೆಯ ಹೊರಗೆ ಆಗಷ್ಟೇ ಬೆಳಕು ಹರಿಯಲಾರಂಭಿಸಿರುತ್ತದೆ. ಅಲ್ಲಿ ಕತ್ತಿಯನ್ನು ಬಿಸಾಡಿ ಮಂಜೇಶ ಓಡುತ್ತಾನೆ.
ದಾರಿಯಲ್ಲಿ ಕಳಿತೆಗೆದುಕೊಂಡು ಹೋಗುತ್ತಿರುವ ಐತನ ಸೈಕಲ್ಲಿಗೆ ಢಿಕ್ಕಿಹೊಡೆಯುವ ಮಂಜೇಶ ಹಾಗೇ ಎದ್ದು ಸುಧಾರಿಸಿಕೊಂಡು ಅಲ್ಲಿಂದ ಓಡಲಾರಂಭಿಸುತ್ತಾನೆ. ಐತನ ಕಳಿಯ ಮಡಿಕೆಗಳು ಒಡೆದು ಕಳಿಯೆಲ್ಲಾ ದಾರಿಯಲ್ಲಿ ಹರಿಯುತ್ತದೆ.
ಒಳಾಂಗಣ/ಹೊರಾಂಗಣ. ಮಾಧವ ಹಾಗೂ ಸುಗಂಧಿಯರ ಹೊಸ ಮನೆ - ರಾತ್ರಿ
ಮಾಧವನ ಮನೆಯ ಹೊರಾಂಗಣದಲ್ಲಿ ಇದ್ದೇವೆ. ಒಂದು ಟೈಮ್ ಲ್ಯಾಪ್ಸ್ ಕಾಣುತ್ತೇವೆ. ಇಲ್ಲಿಗೆ ದಿನೇಶಣ್ಣನ ಪತ್ನಿಯನ್ನು ಕರೆತರಲಾಗುತ್ತದೆ. ಅವರನ್ನು ವೀಲ್ ಚೇರಿನಲ್ಲಿ ಒಂದೆಡೆ ಕೂರಿಸಲಾಗುತ್ತದೆ. ಪೋಲೀಸರು ಬರುವುದು, ಜನ ಸೇರುವುದು ಇತ್ಯಾದಿಗಳನ್ನು ಕಾಣುತ್ತಾ ಸಾಗುತ್ತೇವೆ. ಇನ್ಸ್ಪೆಕ್ಟರ್ ರೂಪೇಶ ಸ್ಥಳಕ್ಕೆ ಬರುತ್ತಾನೆ. ದಿನೇಶಣ್ಣನ ಹೆಣವನ್ನು ಸಾಗಿಸಲಾಗುತ್ತದೆ. ಮಾಧವ, ಸುಗಂಧಿ, ಬನ್ನಂಜೆ ಹಾಗೂ ಸಂಜೀವರನ್ನು ರೂಪೇಶ ಮಾತನಾಡಿಸುವುದು ಕಾಣುತ್ತದೆ.
ದೂರದಲ್ಲಿ ನಿಂತ ಪ್ರಮೀಳಾ ಇದೆಲ್ಲವನ್ನೂ ಭಯದಿಂದ ನೋಡುತ್ತಿದ್ದಾಳೆ. ಅಲ್ಲಿ ಸೇರಿರುವ ಜನರೆಲ್ಲರೂ ಗಾಬರಿಯಿಂದ ನೋಡುತ್ತಿದ್ದಾರೆ. ಆಂಬ್ಯುಲೆನ್ಸ್ ಅಲ್ಲಿಂದ ಹೊರಡುತ್ತದೆ. ಒಡೆದ ಕಳಿ ಕೊಡಪಾನದ ಬಳಿಯಲ್ಲೇ ರಕ್ತ ಸಿಕ್ತ ಕತ್ತಿ ಸಿಗುತ್ತದೆ. ಅದನ್ನು ಹುಷಾರಾಗಿ ಎತ್ತಿ ಕವರಲ್ಲಿ ಹಾಕಿ ಪೋಲೀಸರು ವಶಪಡಿಸಿಕೊಳ್ಳುತ್ತಾರೆ.
ಮಾಧವ ಬನ್ನಂಜೆಯ ಮುಖವನ್ನು ಭಯದಿಂದಲೇ ನೋಡುತ್ತಾನೆ.
ಬನ್ನಂಜೆ ಅಪನಂಬಿಕೆಯಿಂದ ಮಾಧವನ ಮುಖ ನೋಡುತ್ತಾನೆ. ಏನೋ ಹೇಳಲು ಹೊರಡುತ್ತಾನೆ. ಆದರೆ ಏನೂ ಉತ್ತರಿಸುವುದಿಲ್ಲ. ಮಾಧವ ಬನ್ನಂಜೆಯ ಉತ್ತರಕ್ಕೆ ಕಾಯುತ್ತಿರುತ್ತಾನೆ. ಆದರೆ ಉತ್ತರ ಬರದಿರುವಾಗ ಅವನಿಗೆ ಕಸಿವಿಸಿ ಹೆಚ್ಚುತ್ತದೆ. ಅಲ್ಲಿಗೆ ಬರುವ ಸುಗಂಧಿ ಮಾಧವನ ಭುಜಕ್ಕೆ ಕೈ ಇಟ್ಟು ಸಮಾಧಾನ ಮಾಡುತ್ತಾಳೆ. ಮಾಧವನ ಗಮನ ಇತರ ಕಡೆಗೆ ಹೋಗುತ್ತದೆ.
ಸುಗಂಧಿ ಈಗ ಶಂಕರಿಯ ಕಡೆಗೆ ನೋಡುತ್ತಾಳೆ. ಅವರು ಯಾವುದೇ ಭಾವನೆಯಿಲ್ಲದೇ ಎಲ್ಲವನ್ನೂ ನೋಡುತ್ತಿದ್ದಂತೆ ಕಾಣುತ್ತಿದ್ದಾರೆ.
ಸಂಜೀವನಿಗೆ ಮಂಜೇಶನ ಬಗ್ಗೆ ಬಹಳ ಸಿಟ್ಟು ಬಂದಿದೆ. ಅವನು ಅತ್ತಿತ್ತ ಶತಪಥ ನಡೆಯುತ್ತಿದ್ದಾನೆ.
ಮಾಧವನಿಗೆ ಇದರಿಂದ ಸ್ವಲ್ಪ ಗಾಬರಿಯಾಗುತ್ತದೆ. ಅವನು ಸುಗಂಧಿಯನ್ನು ನೋಡುತ್ತಾನೆ. ಆಕೆ ಮಾಧವನಿಗೆ ಮುಖಕೊಡುವುದಿಲ್ಲ. ಮಾಧವ ಹೇಗೋ ತನ್ನ ಗಾಬರಿಯನ್ನು ತಡೆದುಕೊಳ್ಳುತ್ತಾನೆ.
ಒಳಾಂಗಣ. ಯಕ್ಷಗಾನ ಚೌಕಿ - ರಾತ್ರಿ
ಕಲಾವಿದರು ವೇಷದಲ್ಲಿ ಕುಳಿತಿದ್ದಾರೆ. ಆ ಕಡೆ ಆಟ ಜೋರಾಗಿ ನಡೆಯುತ್ತಿದೆ. ಅಷ್ಟರಲ್ಲಿ ಒಬ್ಬ ಕಲಾವಿದ ಮರಳಿ ಚೌಕಿಗೆ ಬರುತ್ತಾನೆ. ರಾಜವೇಷದಲ್ಲಿ.
ಕಲಾವಿದ ೧
ರಂಗಸ್ಥಳದಲ್ಲಿ ಕುಣಿಯುವಾಗ ದಿನೇಶಣ್ಣನೇ ನೆನಪಾಗ್ತಾ ಇತ್ತು. ಎಂಥಾ ಸಾವು ಬಂತಪ್ಪ ಅವರಿಗೆ.. ಛೇ..!
ಕಲಾವಿದ ೨
ಸ್ವಂತ ಮಗನ ಕೈಯಿಂದಲೇ... ದೇವರೇ...!
ಅಷ್ಟರಲ್ಲಿ ಅಲ್ಲಿಗೆ ಕಲಾವಿದ ೩ ಬರುತ್ತಾರೆ.
ಕಲಾವಿದ ೩
ಇವತ್ತು ಭಾಗವತರು ಪದ್ಯ ಹೇಳಿದ್ರು.. ರಬ್ಬರ್ ರಬ್ಬರ್ ಎಳ್ದ ಹಾಗೆ ಎಳ್ದೆಳ್ದು.. ಎಳ್ದೆಳ್ದು.. ಯಬ್ಬಾ.. ಬಹುಶಃ ಭಾಗವತರ ಸಕ್ಕರೆಗೆ ಚಾ ಹೆಚ್ಚಾಗಿರ್ಬೇಕು...
ಕಲಾವಿದ ೧
(ನಕ್ಕು ಪ್ರತಿಕ್ರಿಯಿಸುತ್ತಾ)
ಈ ಕಾಲದಲ್ಲಿ ಯಾರನ್ನೂ ನಂಬ್ಲಿಕ್ಕಾಗೂದಿಲ್ಲ. ಮನುಷ್ಯ ಯಾವಾಗ ಬದಲಾಗ್ತಾನೇಂತ ಹೇಳಲಿಕ್ಕಾಗೋದಿಲ್ಲ.
ಆಚೆಗೆ ಆಟ ಜೋರಾಗಿ ನಡೆಯುತ್ತಿದೆ.
ಹೊರಾಂಗಣ. ಮೀನುಗಾರಿಕಾ ಬಂದರು - ಹಗಲು
ರಾಕೇಶ ನಡೆದುಕೊಂಡು ಹೋಗುತ್ತಿರಬೇಕಾದರೆ ಅಲ್ಲಿಗೆ ಪೋಲೀಸರಿಬ್ಬರು ಬರುತ್ತಾರೆ. ಅವರನ್ನು ಕಂಡು ರಾಕೇಶ ತುಸು ಗಾಬರಿಯಾಗುತ್ತಾನೆ. ಪೋಲೀಸರು ರಾಕೇಶನನ್ನು ಬೆರಸಿಕೊಂಡು ಹೋಗಿ ಹಿಡಿಯುತ್ತಾರೆ. ಅವನಿಗೆ ಚೆನ್ನಾಗಿ ಹೊಡೆಯಲಾರಂಭಿಸುತ್ತಾರೆ.
ಇನ್ಯಾವುದೋ ಒಂದು ಸ್ಥಳದಲ್ಲಿ ರೂಪೇಶನ ಎದುರು ರಾಕೇಶನನ್ನು ಕೂರಿಸಲಾಗಿದೆ. ಅವನ ಮೈಯ್ಯಲ್ಲೆಲ್ಲಾ ಬಾಸುಂಡೆ ಎದ್ದಿದೆ. ರೂಪೇಶ ಅವನನ್ನು ಮಾತನಾಡಿಸುತ್ತಿದ್ದಾನೆ.
ರೂಪೇಶ
ಬೆಳಗ್ಗೆ ಸುಮಾರು ಆರು ಗಂಟೆಗೆ ಮಂಜೇಶ ಮಾಧವನ ಮನೆಯಿಂದ ತಪ್ಪಿಸಿಕೊಂಡು ಹೋಗಿದ್ದಾನೆ. ಅದು ಸಾಲದೂಂತ, ಅದೇ ದಿನ ಎಂಟು ಸಲ ನಿಂಗೆ ಕಾಲ್ ಮಾಡಿದ್ದಾನೆ. ಆಮೇಲೆ ಜನ ಕಣ್ಣಿಗೆ ಕಾಣ್ತಾ ಇಲ್ಲ. ಎಲ್ಲಿಗೆ ಹೋಗಿದ್ದಾನೆ ಹೇಳು.. ಮರ್ಯಾದೆಯಲ್ಲಿ ಹೇಳು.
ರಾಕೇಶ ನೋವಿನಿಂದ ಅಳು ಮುಖ ಹಾಕಿಕೊಂಡು ರೂಪೇಶನನ್ನೇ ನೋಡುತ್ತಾನೆ. ರೂಪೇಶ ತಾಳ್ಮೆಯಲ್ಲಿ ಕೇಳಲು ಸಿದ್ಧನಾಗಿ ಕುಳಿತಿದ್ದಾನೆ.
ಹೊರಾಂಗಣ. ದಿನೇಶಣ್ಣನ ಮನೆ - ಹಗಲು
ಈಗ ಮಾಧವ, ಬನ್ನಂಜೆ, ಸಂಜೀವ ಹಾಗೂ ಇತರ ಕೆಲವರು ದಿನೇಶಣ್ಣನ ಮನೆಯಲ್ಲಿದ್ದಾರೆ. ಅಲ್ಲಿಗೆ ಪೋಲೀಸರೂ ಬಂದಿದ್ದಾರೆ.
ರೂಪೇಶ
ಮಂಜೇಶ ಮುಂಬೈಯಲ್ಲಿದ್ದಾನಂತೆ. ಮುಂಬೈ ಪೋಲಿಸ್ ಹಾಗಂತ ರಿಪೋರ್ಟ್ ಮಾಡಿದ್ದಾರೆ. ಅವನನ್ನು ಅವರು ಅಲ್ಲಿ ಅರೆಸ್ಟ್ ಮಾಡ್ತಾರೆ. ಚೂರಿಯಲ್ಲಿರುವ ಫಿಂಗರ್ ಪ್ರಿಂಟ್ ಮಂಜೇಶನದ್ದೇ ಅಂತ ಪ್ರೂವ್ ಆಗಿದೆ. ಈಗ ಯಾರಾದ್ರೂ ಕೇಸ್ ರಿಜಿಸ್ಟರ್ ಮಾಡ್ಬೇಕು. ಶಂಕರಿ ಅಮ್ಮ ಸೈನ್ ಹಾಕ್ಬೋದಾ?
ಬನ್ನಂಜೆ, ಮಾಧವ ಮತ್ತಿತರರು ಪರಸ್ಪರ ಮುಖ ನೋಡಿಕೊಳ್ಳುತ್ತಾರೆ.
ಒಬ್ಬ ಬೆಸ್ತ
ಇಲ್ಲ ಸರ್.. ಅವರಿಗೆ ಕೈ ಅಲ್ಲಾಡಿಸೋಕೇ ಆಗಲ್ಲ...
ರೂಪೇಶ್
ಓಹ್! ಸಾರೀ..
ಒಬ್ಬ ಬೆಸ್ತ
(ಮುಂದುವರಿಸುತ್ತಾ)
ಮಾಧವಣ್ಣ... ದಿನೇಶಣ್ಣನ ವಾರಸುದಾರ ನೀವೇ ಅಲ್ವಾ? ಮಗನ ಹಾಗೆ ಮುಂದೆ ನಿಂತು ಕೇಸ್ ಹಾಕಿ.
ಮಾಧವ ಸಣ್ಣ ನಡುಕದಿಂದಲೇ ಬನ್ನಂಜೆಯ ಕಡೆಗೆ ನೋಡುತ್ತಾನೆ. ಬನ್ನಂಜೆ ಒಂದು ಸಣ್ಣ ಉಪೇಕ್ಷೆಯಿಂದಲೇ ಮಾಧವನನ್ನು ನೋಡುತ್ತಾನೆ.
ಇನ್ನೊಬ್ಬ ಬೆಸ್ತ
ಮುಂದೆ ನೀವೇ ನಮ್ಮನ್ನು ಮುಂದಕ್ಕೆ ನಡೆಸಿಕೊಂಡು ಹೋಗಬೇಕು. ಆ ನಾಲಾಯಕ್ ಮಂಜೇಶ... ಜೈಲಿಗೆ ಹೋಗ್ಬೇಕು. ನೀವು ಸೈನ್ ಹಾಕಿ ಮಾಧವಣ್ಣ.. ನಿಮ್ಮೊಟ್ಟಿಗೆ ನಾವಿದ್ದೇವೆ.
ಸಂಜೀವ, ಬನ್ನಂಜೆ ಮಾಧವ ಪರಸ್ಪರ ನೋಡುತ್ತಾರೆ. ಜನರ ಮಾತುಗಳನ್ನು ಅವರೆಲ್ಲರೂ ಕೇಳಿಸಿಕೊಳ್ಳುತ್ತಿದ್ದಾರೆ.
ರೂಪೇಶ ಕೇಸ್ ವಿವರಗಳನ್ನು ಓದಿ ಹೇಳುತ್ತಿದ್ದಾನೆ. (ನಾವು ಮಾಧವ ಮತ್ತು ಬನ್ನಂಜೆಯ ರಿಯಾಕ್ಷನ್ ಮೇಲೆಯೇ ಇರುತ್ತೇವೆ. ಧ್ವನಿ ತುಂಬಾ ಸ್ಪಷ್ಟವಾಗಿ ಕೇಳಿಸುವ ಅಗತ್ಯವಿಲ್ಲ.) ಕೊನೆಯಲ್ಲಿ ನಡುಗುವ ಕೈಯಲ್ಲೇ ಮಾಧವ ಕೇಸ್ ರಿಜಿಸ್ಟರ್ ಮಾಡಲು ಸೈನ್ ಮಾಡುತ್ತಾನೆ.
ಮಾಧವನಿಗೆ ಹಿನ್ನೆಲೆಯಲ್ಲೆಲ್ಲೋ ಭೂತ ಕುಣಿಯುತ್ತಾ ಹೋಗುತ್ತಿರುವಂತೆ ಕಾಣಿಸುತ್ತದೆ. ಉಳಿದ ಧ್ವನಿಗಳೆಲ್ಲವೂ ಗೊಗ್ಗರಾಗುತ್ತಾ, ದೃಶ್ಯಗಳೆಲ್ಲವೂ ಮಬ್ಬಾಗುತ್ತಾ ಸಾಗುತ್ತದೆ.
ರೂಪೇಶ
ನಮ್ಮ ಮನೆಯಲ್ಲಿ ನಡೆದ ಈ ದುರ್ಘಟನೆಯನ್ನು ಪರಿಶೀಲಿಸಿ, ಅಪರಾಧಿಯನ್ನು ಬಂಧಿಸಿ ನ್ಯಾಯಾಂಗ ಕಾರ್ಯಾಚರಣೆ ನಡೆಸಬೇಕೆಂದು ನಾನು ಈ ಮೂಲಕ ವಿನಂತಿಸಿಕೊಳ್ಳುತ್ತಿದ್ದೇನೆ. ಇತೀ ತಮ್ಮ ವಿಶ್ವಾಸಿ, ಮಾಧವ.
(ದೈವದ ನುಡಿಯಂತೆಯೇ, ಮಾಧವ ದಿನೇಶಣ್ಣನ ನಂತರ, ಸ್ವತಃ ತಾನೇ ಒಡೆಯನಾಗಿ ಅಭಿಷಿಕ್ತನಾಗುವ ದೃಶ್ಯ ಇದು. ಊರವರು ಒಪ್ಪಿಕೊಂಡಂತೆ, ಮುಂದೆ ಎಲ್ಲಾ ವ್ಯವಹಾರಗಳು ಅವನ ಕೈಸೇರುತ್ತವೆ. ಮಾಧವ ಇದನ್ನು ಒಪ್ಪಿಕೊಳ್ಳುವ ಪ್ರಕ್ರಿಯೆ ಇಲ್ಲಿ ಆರಂಭವಾಗುತ್ತದೆ. ಆದರೆ, ಅವನಿಗೆ ಇನ್ನೂ ಅಸ್ಪಷ್ಟವಾಗಿರುವ ಬನ್ನಂಜೆಯ ಪ್ರತಿಕ್ರಿಯೆ ಕಾಡುತ್ತಿದೆ.)
ಹೊರಾಂಗಣ. ಮುಂಬೈಯಲ್ಲೆಲ್ಲೋ ಒಂದು ಜಾಗದಲ್ಲಿ - ಹಗಲು
ಮಂಜೇಶ ಸದಾಶಿವನ ಬಳಿಗೆ ಬಂದಿದ್ದಾನೆ. ಮುಂಬೈಯ್ಯಲ್ಲಿದ್ದಾರೆ ಅವರಿಬ್ಬರೂ.
ಸದಾಶಿವ
(ಕೊಂಚ ಅಸಹನೆಯಲ್ಲೇ)
ಕೊಂದದ್ದು ನೀನಲ್ಲಾಂತ ಈಗ ಹೇಳಿದ್ರೆ ಎಂತ ಪ್ರಯೋಜನ ಮಾರಾಯ? ಯಾರು ನಂಬ್ತಾರೆ ನಿನ್ನನ್ನು? ನೀನು ಆ ಜಾಗ ಬಿಟ್ಟು ಓಡಿ ಬಂದದ್ಯಾಕೆ? ಅಲ್ಲೇ ಇದ್ದಿದ್ರೆ ಏನಾದ್ರೂ ಮಾಡ್ಬೋದಿತ್ತು.
ಮಂಜೇಶ
ಏನಾದರೂ ಮಾಡಿ ಸರ್. ನನ್ನ ತಲೆಯೇ ಓಡ್ತಿಲ್ಲ. ಅಪ್ಪನ ದೇಹ.. ರಕ್ತ.. ಎಲ್ಲಾ ನೋಡಿ ನಂಗೆ ಹೆದರಿಕೆ ಆಯಿತು.
ಸದಾಶಿವ
ನೋಡು.. ನಿನ್ನ ಮೇಲೆ ಕೊಲೆ ಆರೋಪ ಉಂಟು. ನಿನ್ನೊಟ್ಟಿಗೆ ವ್ಯವಹಾರ ಮಾಡಿದ್ರೆ ನಂಗೆ ಡೇಂಜರ್. ನನ್ನನ್ನೂ ಒಳಗೆ ಹಾಕ್ತಾರೆ ಗೊತ್ತುಂಟಾ? ನಂಗೆ ಯಾಕೆ ಮಾರಾಯ ಬೇಡದ್ದೆಲ್ಲಾ...
ಮಂಜೇಶ
ಏನಾದ್ರೂ ಮಾಡಿ ಸರ್.. ಇದೊಂದ್ ಸಲ ಬಚಾವ್ ಮಾಡಿ ಸರ್ ಪ್ಲೀಸ್.. ಪ್ಲೀಸ್.. ಪ್ಲೀಸ್ ಸರ್!
ಸದಾಶಿವ ಯೋಚಿಸಲಾರಂಭಿಸುತ್ತಾನೆ.
ಹೊರಾಂಗಣ. ಮಾಧವ ಹಾಗೂ ಸುಗಂಧಿಯರ ಹೊಸ ಮನೆ - ಹಗಲು
ಬನ್ನಂಜೆ ಈಗ ಮಾಧವನ ಮನೆಗೆ ಬಂದಿದ್ದಾನೆ. ಬಾಗಿಲು ತಟ್ಟುತ್ತಾನೆ. ಹೊಸ ಸೀರೆಯಲ್ಲಿ ಹೊರಟು ಸಿದ್ಧವಾಗಿರುವ ಸುಗಂಧಿ ಬಾಗಿಲು ತೆರೆಯುತ್ತಾಳೆ. ಆಕೆ ಬನ್ನಂಜೆಯ ಮುಖವನ್ನು ನೋಡಿ ಸ್ವಲ್ಪ ಅಚ್ಚರಿಗೊಳ್ಳುತ್ತಾಳೆ. ಬನ್ನಂಜೆಗೂ ಆಕೆ ಸಿಂಗರಿಸಿಕೊಂಡು ಸಿದ್ಧವಾಗಿರುವುದನ್ನು ಕಂಡು ತುಸು ಅಚ್ಚರಿಯಾಗುತ್ತದೆ.
ಸುಗಂಧಿ
ಏನಾಯ್ತಣ್ಣ...?
ಬನಂಜೆ
ನಾಳೆ ಬೆಳಗ್ಗೆ ಕಡಲಿಗೆ ಹೋಗುವಾಂತ ಯೋಚಿಸ್ತಿದ್ದೆವು... ಆ.. ಮಾಧವ ಮನೆಯಲ್ಲಿಲ್ವ...?
ಸುಗಂಧಿ
ಹಾಮ್... ಇದ್ದಾರೆ... ರೆಡಿ ಆಗ್ತಾ ಇದ್ದಾರೆ.. ಸ್ವಲ್ಪ ಪೇಟೆ ಕಡೆಗೆ ಹೋಗೋಣ ಅಂತ... ಮನೆಯಲ್ಲಿದ್ದು ಇದ್ದು ತಲೆ ಹಾಳಾಗಿದೆ. ಸ್ವಲ್ಪ ಮನಸು ಹಗುರಾಗ್ಲಿಕ್ಕೆ ಪೇಟೆ ಸುತ್ತಿ ಬರುವಾಂತ ಹೊರಟದ್ದು...
ಬನ್ನಂಜೆ ಆಗಲಿ ಎನ್ನುವಂತೆ ತಲೆಯಾಡಿಸುತ್ತಾನೆ. ಆದರೆ ಅವನಿಗೆ ಇದು ಸ್ವಲ್ಪ ವಿಚಿತ್ರ ಅನ್ನಿಸುತ್ತದೆ. ಬನ್ನಂಜೆ ಅಲ್ಲಿಂದ ಹೊರಡ್ತಾನೆ...
ಹೊರಾಂಗಣ. ಭೂತಸ್ಥಾನ - ಹಗಲು
ಬನ್ನಂಜೆ ಈಗ ಭೂತಸ್ಥಾನದ ಎದುರು ಇದ್ದಾನೆ. ಅವನು ಅಲ್ಲಿ ಕುಳಿತು ಕೈಜೋಡಿಸಿದ್ದಾನೆ. ಆತ ಹೀಗಾಗಬಾರದಿತ್ತು ಎನ್ನುವಂತೆ ತಲೆಯಾಡಿಸುತ್ತಿದ್ದಾನೆ. ಅವನ ಕಣ್ಣಲ್ಲಿ ನೀರು ತುಂಬಿದೆ.
ಹೊರಾಂಗಣ. ಮಾಲ್ಗಳಲ್ಲಿನ ಮೊಂಟಾಜ್ - ಹಗಲು
ಮಾಧವ ಹಾಗೂ ಸುಗಂಧಿ ಈಗ ಮಂಗಳೂರಿನ ಪೇಟೆಯಲ್ಲಿದ್ದಾರೆ. ಅವರು ಸಂತೋಷದಿಂದಿದ್ದಾರೆ. ಜೊತೆಯಾಗಿ ಸುತ್ತಾಡುವುದು, ಮಾಲ್ ಪ್ರವೇಶಿಸುವುದು, ಇತ್ಯಾದಿ ಮಾಂಟಾಜ್ ಕಾಣುತ್ತೇವೆ. (ಇಲ್ಲಿ ಬನ್ನಂಜೆ ಹಾಗೂ ಸಂಜೀವ ಎಷ್ಟು ಒಂಟಿತನ ಅನುಭವಿಸುತ್ತಿದ್ದಾರೆ ಎನ್ನುವುದನ್ನು ಮುಂದಿನ ಎರಡು ದೃಶ್ಯಗಳೊಂದಿಗೆ ಇಂಟರ್ ಕಟ್ ಮಾಡುವ ಮೂಲಕ ಬೆಳೆಸಬೇಕು)
ಹೊರಾಂಗಣ. ಸಮುದ್ರದಲ್ಲಿ - ಹಗಲು
ಬನ್ನಂಜೆ ಈಗ ಸಮುದ್ರದಲ್ಲಿ ಮೀನಿನ ದೋಣಿಯಲ್ಲಿ ಇತರರೊಂದಿಗೆ ಇದ್ದಾನೆ. ಎಲ್ಲರೂ ನಿತ್ಯದ ಮೀನು ಹಿಡಿಯುವ ಕೆಲಸಗಳನ್ನು ಮಾಡುತ್ತಿದ್ದಾರೆ. ಬನ್ನಂಜೆ ತೀವ್ರ ದುಃಖದಲ್ಲಿದ್ದಾನೆ.
ಹೊರಾಂಗಣ. ದಾರಿ ಬದಿಯಲ್ಲಿ ಸಮುದ್ರ ಕೊರೆತ ತಡೆಯಲು ಹಾಕಿದ ಬಂಡೆಗಳ ಮೇಲೆ - ಹಗಲು
ಸಂಜೀವ ಎಲ್ಲೋ ಕಾರು ನಿಲ್ಲಿಸಿ ಗಿರಾಕಿಗಳಿಗಾಗಿ ಕಾಯುತ್ತಿದ್ದಾನೆ. ಅವನ ಮುಖದಲ್ಲೂ ದುಃಖ ನಿರಾಸೆ ಕಾಣಿಸುತ್ತಿದೆ.
ಒಳಾಂಗಣ. ಯಕ್ಷಗಾನ ಚೌಕಿ - ಬೆಳಗ್ಗೆ
ಕಲಾವಿದರು ಆಟ ಮುಗಿಸಿ ಬಣ್ಣ ತೆಗೆದು ತಮ್ಮ ಬಟ್ಟೆಗಳನ್ನು ಮಡಚುತ್ತಿದ್ದಾರೆ.
ಕಲಾವಿದ ೧
ಇವತ್ತು ಆಟ ಬಹಳ ಚೆನ್ನಾಗಿ ಮೂಡಿಬಂತು.
ಇನ್ನೊಂದು ಕಡೆ ಮುಖದಿಂದ ಬಣ್ಣ ತೆಗೆಯುತ್ತಿರುವ ಇನ್ನೊಬ್ಬ ಕಲಾವಿದ ಮಾತನಾಡುತ್ತಾನೆ. ಅವನಿಗೆ ಮುಖದ ಬಣ್ಣ ಎಷ್ಟು ತೆಗೆದರೂ ಅದು ತನ್ನ ಮುಖದಿಂದ ಹೋಗುತ್ತಿಲ್ಲ ಎಂದು ಅನ್ನಿಸಲಾರಂಭಿಸುತ್ತದೆ.
ಕಲಾವಿದ ೨
(ಮುಖದಲ್ಲಿ ಹರಡಿದ ಬಣ್ಣವನ್ನು ಒರಸುತ್ತಲೇ)
ಇದು ಯಾವ ಸೀಮೆಯಿಂದ ತಂದ ಬಣ್ಣವೋ ಗೊತ್ತಿಲ್ಲ... ಎಷ್ಟು ತಿಕ್ಕಿದರೂ ಹೋಗುತ್ತಿಲ್ಲ.
ಅಲ್ಲೇ ನಡೆದು ಹೋಗುತ್ತಿರುವ ಇನ್ನೊಬ್ಬ ಕಲಾವಿದ ಬಗ್ಗಿ ಇವನ ಮುಖ ನೋಡುತ್ತಾನೆ.
ಕಲಾವಿದ ೩
ಬಣ್ಣದ ಸೊಗಸು ಇರುವುದು ಮನಸ್ಸಿನಲ್ಲಿ ಅಲ್ಲವೇ? ಒಮ್ಮೆ ಬಣ್ಣ ಹಚ್ಚಿದವನು ಅದನ್ನು ತೆಗೆಯುವುದೂ ಅಂತ ಉಂಟೇ? ಮುಖದ ಬಣ್ಣ, ಮನಕ್ಕೆ ಇಳಿಬೇಕು. ಮನದ ಬಣ್ಣ ಇಹಕೆ ಕಾಣಬೇಕು ಕಂದಾ...
ಕಲಾವಿದ ೨
ಪ್ರಸಂಗ ಬರೀಲಿಕ್ಕೆ ಹೇಳಿ ಮಾಡ್ಸಿದ ಜನ ಇವ..!
ಮೇಳದವರೆಲ್ಲ ನಗುತ್ತಾರೆ.
ಹೊರಾಂಗಣ. ವಿವಿಧ ಲೊಕೇಷನ್ನುಗಳಲ್ಲಿ ನಡೆಯುವ ಮೊಂಟಾಜ್ ದೃಶ್ಯ - ಹಗಲು
ಟೈಮ್ ಲ್ಯಾಪ್ಸ್ ಶಾಟ್ಸ್. ಮಾಧವ ಒಬ್ಬನೇ ಸಮುದ್ರ ದಂಡೆಯಲ್ಲಿ ನಿಂತು ಯೋಚಿಸುವುದು. ಸಮಯ ಜಾರುವುದು. ಸುತ್ತಲಿನ ಜಗತ್ತು ಎಂದಿನಂತೆ ಮುಂದುವರಿಯುವುದು. ಒಂದೆಡೆ ಭಜನೆ ಪೂಜೆ ಜಾತ್ರೆ ಇತ್ಯಾದಿ...
ಈ ಬಾರಿ ಕಡಲ ಪೂಜೆ ಮಾಧವನ ಮುಂದಾಳತ್ವದಲ್ಲಿ ನಡೆಯುವ ಮಾಂಟಾಜ್ ದೃಶ್ಯವೂ ಇದರೊಂದಿಗೆ ಮುಂದುವರಿಯುತ್ತದೆ. ಕಾಲ ಒಂದಷ್ಟು ಮುಂದಕ್ಕೆ ಜಾರಿದೆ.
ಒಳಾಂಗಣ/ಹೊರಾಂಗಣ. ಮಾಧವ ಹಾಗೂ ಸುಗಂಧಿಯರ ಹೊಸ ಮನೆ - ಹಗಲು
ಸುಗಂಧಿ ಮೀನು ಹೆಚ್ಚುತ್ತಿದ್ದಾಳೆ. ಅವಳ ಮನಸ್ಸು ಇನ್ನೆಲ್ಲೋ ಇದೆ. ಸುಗಂಧಿಗೆ ಸ್ವಲ್ಪ ಹೊತ್ತಿನಲ್ಲಿ, ಕೈ ತುಂಬಾ ರಕ್ತ ಮೆತ್ತಿದಂತೆ ಭಾಸವಾಗುತ್ತದೆ. ತೊಳೆದಷ್ಟೂ ರಕ್ತ ಬರುತ್ತಲೇ ಇರುವಂತೆ ಆಕೆಗೆ ಅನಿಸುತ್ತದೆ. ಆಕೆ ಸೋಪು ಹಾಕಿ ಕೈತೊಳೆಯುತ್ತಾಳೆ. ಆದರೆ ರಕ್ತ ಇನ್ನೂ ಬರುತ್ತಲೇ ಇದೆ. ಆಕೆ ಗಾಬರಿಯಿಂದ ಕಿರುಚಿಕೊಳ್ಳುತ್ತಾಳೆ.
ಸುಗಂಧಿ
ರಕ್ತ.. ರಕ್ತ..!
ಮಾಧವ ಅಲ್ಲಿಗೆ ಓಡಿ ಬರುತ್ತಾನೆ. ಅಷ್ಟರಲ್ಲಿ ಆಕೆಗೆ ಹೊಟ್ಟೆ ತೊಳಸಿ ಬಂದಂತಾಗಿ ವಾಂತಿ ಮಾಡಿಕೊಳ್ಳುತ್ತಾಳೆ. ಆಕೆ ಕಣ್ಣು ಮುಚ್ಚಿ ಮಾಧವನಿಗೆ ಒರಗಿ ಕೂರುತ್ತಾಳೆ. ಮಾಧವ ಆಕೆಗೆ ಮುತ್ತಿಡುತ್ತಾನೆ. ಆದರೆ ಈಗ ಆಕೆಗೆ ಮುತ್ತು ಬೇಡವಾಗಿದೆ. ಮಾಧವ ಸುಗಂಧಿಯ ತುಟಿಗೆ ಮುತ್ತಿಡಲು ಹೋಗುತ್ತಾನೆ. ಆದರೆ ಆಕೆ ಆತನ ಮುಖವನ್ನು ದೂರಕ್ಕೆ ನೂಕುತ್ತಾಳೆ. ಮಾಧವನಿಗೆ ಆಧಾರ ತಪ್ಪಿದಂತಾಗುತ್ತಿದೆ. (ಅಧೀರನಾಗುತ್ತಾನೆ)
ಮಾಧವ
ನಾನು ನಿನಗೆ ಏನು ತಂದಿದ್ದೇನೆ ಹೇಳು? ಯೋಚಿಸು ನೋಡೋಣ.. ಎಲ್ಲಿ ಕಣ್ಣು ಮುಚ್ಚು.
ಮಾಧವ ತನ್ನ ಕಿಸೆಯಿಂದ ಒಂದು ಸೆಂಟ್ ಬಾಟಲ್ ತೆಗೆಯುತ್ತಾನೆ. ಅವಳ ಮುಖದ ಮುಂದೆ ಹಿಡಿಯುತ್ತಾನೆ. ಪರಿಮಳ ಬರುವಂತೆ ಕೊಂಚ ದೂರದಿಂದ ಸ್ಪ್ರೆ ಮಾಡುತ್ತಾನೆ. ಆಕೆ ಆ ಸುಸ್ತಿನಲ್ಲೂ ನಸುನಗುತ್ತಾ ಸೆಂಟು ಬಾಟಲನ್ನು ತೆಗೆದುಕೊಳ್ಳುತ್ತಾಳೆ. ಗಂಡ ಹೆಂಡತಿ ಇಬ್ಬರೂ ಮುಗುಳ್ನಗುತ್ತಾರೆ. ಅವರಿಬ್ಬರೂ ಜೊತೆಗಿರುವ ಸಮಾಧಾನದಲ್ಲಿರುತ್ತಾರೆ.
ಹೊರಾಂಗಣ. ದಾರಿ ಬದಿಯಲ್ಲೆಲ್ಲೋ - ಹಗಲು
ಸಂಜೀವ ಸಮುದ್ರ ಕಿನಾರೆಯಲ್ಲಿ ಫೋನಲ್ಲಿ ಮಾತನಾಡುತಿದ್ದಾನೆ. ಆತನ ಸಂಭಾಷಣೆಯಿಚಿದ ಅವನು ಮಾತಾನಾಡುತ್ತಿರುವುದು ಮಂಜೇಶನ ಬಳಿ ಎಂಬುದು ಗೊತ್ತಾಗುತ್ತದೆ.
ಸಚಿಜೀವ
ಏನೇ ಆಗಲಿ, ನೀನು ಹಾಗೆ ಓಡಿ ಹೋದದ್ಯಾಕೆ? ಎಲ್ಲಾ ಬಿಟ್ಟು ಆ ಸದಾಶಿವನ ಹತ್ರಕ್ಕಾ ನೀನು ಹೋಗಿದ್ದು ಅವರಿಗೂ ದಿನೇಶಣ್ಣನಿಗೂ ಸರಿ ಇರ್ಲಿಲ್ಲ.
ಸಂಜೀವ ಆಚೆ ಕಡೆಯಿಂದ ಮಾತನಾಡುವುದನ್ನು ಕೇಳಿಸಿಕೊಳ್ಳುತ್ತಿದ್ದಾನೆ.
ಸಂಜೀವ
ಛೇ! ನಿನಗೆ ಹೇಗೆ ಹೇಳ್ಬೇಕೂಂತ ನನಗೆ ತಿಳಿಯುತ್ತಿಲ್ಲ. ರಾಕೇಶನನ್ನು ಪೋಲೀಸರು ಒಳಗೆ ಹಾಕಿದ್ದಾರೆ. ನೀನು ಮುಂಬೈಯಲ್ಲಿದ್ದೀಂತ ಅವನು ಬಾಯಿ ಬಿಟ್ಟಿದ್ದಾನೆ. ನಂಗೆ ಆ ಮಾಧವನ ಮೇಲೇ ಸಂಶಯ...
ಸಂಜೀವ ತಲೆಬಿಸಿಯಿಂದ ಒದ್ದಾಡುತ್ತಿದ್ದಾನೆ.
ಒಳಾಂಗಣ. ಮಾಧವ ಹಾಗೂ ಸುಗಂಧಿಯರ ಹೊಸ ಮನೆ - ಹಗಲು
ಸುಗಂಧಿ ಹಾಗೂ ಮಾಧವ ಊಟ ಮಾಡುತ್ತಿದ್ದಾರೆ.
ಮಾಧವ
ದೈವದ ನುಡಿಯ ಹಾಗೇ ಒಂದೊಂದೇ ನಿಜವಾಗುತ್ತಿದೆ. ದೈವ ಹೇಳಿದ ಹಾಗೇ ನಾನೆಲ್ಲಾ ಮಾಡ್ತಾ ಬಂದೆ. ಈಗ ಎಲ್ಲಾ ಬಿಸಿನೆಸ್ ವ್ಯವಹಾರವೂ ನಾನೇ ಮಾಡ್ಬೇಕೂಂತ ಎಲ್ರೂ ಹೇಳ್ತಾ ಇದ್ದಾರೆ. ನನ್ನ ನಂತರ ಈ ಕೆಲ್ಸಕ್ಕೆ ಸಂಜೀವನನ್ನು ರೆಡಿ ಮಾಡ್ಬೇಕು.
ಸುಗಂಧಿಗೆ ಈ ಮಾತು ಕೇಳಿ ಹಿತವಾಗುವುದಿಲ್ಲ. ಅವಳಿನ್ನೂ ವಾಂತಿ ಮಾಡಿದ ಸುಸ್ತಿನಲ್ಲಿದ್ದಾಳೆ.
ಸುಗಂಧಿ
ಸಂಜೀವನಾ?! ಅವನ್ಯಾಕೆ?!
ಮಾಧವ
(ಇದೇಕೆ ಹೀಗೆ ಹೇಳುತ್ತಿದ್ದಾಳೆ ಎನ್ನುವಂತೆ ಆಕೆಯನ್ನು ನೋಡುತ್ತಾನೆ)
ದಿನೇಶಣ್ಣನ ಬಿಸಿನೆಸ್ ನನಗೆ ಗೊತ್ತಿರುವಷ್ಟು ಬೇರೆ ಯಾರಿಗೂ ಗೊತ್ತಿಲ್ಲ. ಒಂದು ವೇಳೆ ನನಗೇನಾದರೂ ಹೆಚ್ಚು ಕಮ್ಮಿ ಆದ್ರೆ ಇದನ್ನೆಲ್ಲಾ ಯಾರು ನೋಡಿಕೊಳ್ಳೋದು? ಬನ್ನಂಜೆಗೆ ವಯಸ್ಸಾಗ್ತಾ ಉಂಟು. ಮತ್ತೆ ಇದನ್ನು ಸಂಜೀವನೇ ನೋಡಿಕೊಳ್ಬೇಕಲ್ಲ? ಅದಕ್ಕೇ... ಅವನಿಗೆ ಈಗಿನಿಂದಲೇ ಟ್ರೈನಿಂಗ್ ಕೊಡ್ಬೇಕು...
ಸುಗಂಧಿಯ ತೀವ್ರ ಅಸಮಾಧಾನ ಕಂಡು ಮಾಧವ ಮಾತು ನಿಲ್ಲಿಸುತ್ತಾನೆ. ಸುಗಂಧಿಯ ಕೋಪಗ್ರಸ್ತ ಮುಖ ಸಣ್ಣಕೆ ಅರಳಲಾರಂಭಿಸುತ್ತದೆ. ಮಾಧವನಿಗೆ ಗೊಂದಲವಾಗುತ್ತದೆ.
ಸುಗಂಧಿ
ಆದರೆ, ನಮ್ಮ ನಂತರ ಇದೆಲ್ಲಾ, ನಮ್ಮ ಮಗುವಿಗೆ ಸೇರಬೇಕು ಅಂತ ನಿಮಗೆ ಅನಿಸೋದಿಲ್ಲವೇ?
ಮಾಧವನಿಗೆ ಅರ್ಥವಾಗುವುದಿಲ್ಲ.
ಮಾಧವ
ಆದರೆ... ನಮಗೆ... ಮಗು?!
ಸುಗಂಧಿ ನಾಚಿಕೊಳ್ಳುತ್ತಾ ಅಲ್ಲಿಂದ ಓಡುತ್ತಾಳೆ. ಮಾಧವನಿಗೆ ಅರ್ಥವಾಗುವುದಿಲ್ಲ.
ಸುಗಂಧಿ ಈಗ ಮನೆಯ ಹೊರಗೆ ಒಂದು ತೆಂಗಿನ ಮರದ ಬುಡದಲ್ಲಿದ್ದಾಳೆ. ಅಲ್ಲಿಗೆ ಬರುವ ಮಾಧವ ಆಕೆಯನ್ನು ಮಾತನಾಡಿಸಲು ಪ್ರಯತ್ನಿಸುತ್ತಾನೆ.
ಸುಗಂಧಿ
(ನಸುನಾಚುತ್ತಲೇ)
ಹೆಂಡತಿ ವಾಂತಿ ಮಾಡಲು ಶುರು ಮಾಡಿದರೆ ಅದಕ್ಕೆ ಏನು ಅರ್ಥ ಎಂದು ಗೊತ್ತಾಗದೇ ಇರುವಷ್ಟು ಪೆದ್ದುವಾ ನೀವು?
ಮಾಧವನಿಗೆ ಗಾಬರಿ, ಗೊಂದಲಗಳಾಗುತ್ತವೆ. ಸುಗಂಧಿ ನಾಚಿಕೆಯಲ್ಲೇ ಮುಳುಗಿದ್ದಾಳೆ.
ಮಾಧವ
(ಅಪನಂಬಿಕೆಯಿಂದ)
ನೀನೆಂತ ಹೇಳ್ತಾ ಇದ್ದಿ ಮಾರಾಯ್ತಿ..?
ಸುಗಂಧಿ
(ಹುಸಿಮುನಿಸಿನಿಂದ)
ಎಲ್ಲ ಬಾಯ್ಬಿಟ್ಟೇ ಹೇಳ್ಬೇಕಾ? ಮನೆಯಲ್ಲೊಂದು ತೊಟ್ಟಿಲು ಕಟ್ಟುವ ಸಮಯ ಬಂದಿದೆ!
ಮಾಧವನಿಗೆ ದಿಗ್ಭ್ರಮೆ. ನಸು ನಗುತ್ತಿರುವ ಸುಗಂಧಿಯ ಹಿಂದಿನಿಂದ ದೈವವು ತನ್ನ ಎಲ್ಲಾ ವೈಭವದಿಂದ ಕುಣಿಯುತ್ತಾ ಹೋದಂತೆ ಕಾಣಿಸುತ್ತದೆ.
ಒಳಾಂಗಣ/ಹೊರಾಂಗಣ. ಬನ್ನಂಜೆಯ ಮನೆ - ಹಗಲು
ಮಾಧವ ಬನ್ನಂಜೆಯ ಮನೆಗೆ ಬರುತ್ತಾನೆ. ಸಂಜೀವ ಅಲ್ಲೇ ಹೊರಗೆ ಕಾರು ತೊಳೆಯುತ್ತಾ ಇದ್ದಾನೆ.
ಮಾಧವ
ಬನ್ನಂಜೆಣ್ಣ.. ಬನ್ನಂಜೆಣ್ಣ..
ಗೌರಿ
ಹೋ ಮಾಧವಣ್ಣ... ಅತ್ತಿಗೆ ಹೇಗಿದ್ದಾರೆ... ಅವರನ್ನು ನೋಡದೆ ತುಂಬ ಟೈಮಾಯ್ತು.. ಈಗ ನೀವು ನಮ್ಮ ಮನೆಗೆ ಬರೋದೇ ಇಲ್ವಲ್ಲಾ!
ಮಾಧವ ಕಿರುನಗೆ ಬೀರಿ ಆಕೆಯನ್ನು ನೋಡುತ್ತಾನೆ. ಆದರೆ ಅವನ ಮನಸ್ಸಿನ ಗೊಂದಲದಲ್ಲಿ ಆ ನಗು ಕಳೆದೇ ಹೋಗುತ್ತದೆ. ಬಟ್ಟೆ ಒಣಗಿ ಹಾಕುತ್ತಿದ್ದ ಗೌರಿ ಅದನ್ನು ಮುಂದುವರೆಸುತ್ತಾಳೆ. ಮಾಧವ ಬನ್ನಂಜೆಯತ್ತ ತಿರುಗಿ, ಅದೇ ಅಳುಕಿನಲ್ಲೇ ಮುಂದುವರಿಯುತ್ತಾ...
ಮಾಧವ
ನಾಳೆ ಕಡಲಿಗೆ ನಾನೂ ಬರ್ಲಾ?
ಸಂಜೀವ, ತನ್ನ ತಂದೆ ಇದಕ್ಕೆ ಒಪ್ಪದಿರಲಿ ಎನ್ನುವಂತೆ ಬನ್ನಂಜೆಯನ್ನು ನೋಡುತ್ತಾನೆ. ತುಸು ದೀರ್ಘವಾಗಿ ಯೋಚಿಸುವ ಬನ್ನಂಜೆ ಆಗಲಿ ಎನ್ನುವಂತೆ ತಲೆಯಾಡಿಸುತ್ತಾನೆ. ಮಾಧವ ಅಲ್ಲಿಂದ ಹೊರಡುತ್ತಾನೆ. ಸಂಜೀವನಿಗೆ ಸಿಟ್ಟು ಬರುತ್ತದೆ.
ಸಂಜೀವ
ಈಗ ಇವ ದೊಡ್ಡ ಜನ ಆಗಿದ್ದಾನೆ... ದಿನೇಶಣ್ಣನನ್ನು ಕೊಂದದ್ದು ಇವನೇ ಅಂತ ನಂಗೆ ಡೌಟು.. ಇನ್ನೂ ಯಾಕೆ ಅವನ ಸಹವಾಸ? ನಿಮಿಗೆ... (ಬುದ್ಧಿ ಇಲ್ಲವೇ ಎಂಬಂತೆ ತಲೆಯತ್ತ ಕೈತೋರಿಸಿ) ಇಲ್ವಾ?
ಬನ್ನಂಜೆ ಏನೂ ಹೇಳದೇ ಮಗನನ್ನೇ ತೀವ್ರವಾಗಿ ದಿಟ್ಟಿಸುತ್ತಾನೆ.
ಹೊರಾಂಗಣ. ಸಮುದ್ರದಲ್ಲಿ ಮೀನುಗಾರಿಕೆ - ಹಗಲು
ದೋಣಿಯ ಮೇಲೆ ಬಿದ್ದಿರುವ ಮೀನೊಂದು ಒದ್ದಾಡುತ್ತಿರುವ, ತೊಳಲಾಡುತ್ತಿರುವ ಶಾಟ್ ಮತ್ತೆ ಕಾಣುತ್ತೇವೆ.
ಆಳ ಸಮುದ್ರದಲ್ಲಿ ಮಾಧವ ಹಾಗೂ ಬನ್ನಂಜೆ ಬೋಟಿನಲ್ಲಿ ಮೀನು ಹಿಡಿಯುವ ಸಿದ್ಧತೆ ಮಾಡುತ್ತಿದ್ದಾರೆ. ಇಬ್ಬರಲ್ಲೂ ಮೊದಲಿನ ಸಲಿಗೆಯಿಲ್ಲ. ಅಸಹಜತೆ ಇದೆ. ಮಾಧವನೇ ವಿಷಯ ಪ್ರಸ್ತಾಪಿಸುತ್ತಾನೆ.
ಮಾಧವ
ದಿನೇಶಣ್ಣನ ನಂತರ, ನೀವೇ ಈ ವ್ಯವಹಾರದ ಜವಾಬ್ದಾರಿ ತಗೊಳ್ಬೇಕಿತ್ತು. ನನ್ನನ್ಯಾಕೆ ಮುಂದೆ ನೂಕಿದ್ದು?
ಬನ್ನಂಜೆ ಸುಮ್ಮನೆ ಮಾಧವನನ್ನು ದಿಟ್ಟಿಸಿ ನೋಡುತ್ತಾನೆ.
ಮಾಧವ
ನಂಗೊತ್ತುಂಟು... ನಂಬೂದಿಲ್ಲಾಂತ ನೀವು ಬಾಯಲ್ಲಿ ಹೇಳಿದ್ರೂ ಒಳಗೊಳಗೆ ದೈವದ ಮಾತನ್ನು ನಂಬೂದು.. ಎಲ್ಲವೂ ಆ ದೈವ ಹೇಳಿದ ಹಾಗೇ ನಡೀತಾ ಉಂಟಲ್ಲ..?
ಬನ್ನಂಜೆ ಈಗಲೂ ಏನೂ ಹೇಳದೇ ಅಸಹನೆಯಿಂದ ಇನ್ನೊಂದು ಕಡೆಗೆ ನೋಡುತ್ತಾನೆ.
ಮಾಧವ
(ಬನ್ನಂಜೆಯ ಬಳಿಗೆ ಹೋಗಿ ಸ್ವಲ್ಪ ಅಸಹನೆಯಿಂದ)
ಹೀಗೆ ಕಿವುಡರ ಹಾಗೆ ಇದ್ದು ಬಿಟ್ಟರೆ ಎಲ್ಲವೂ ಸರಿಯಾಗುತ್ತದೆಯೇ? ಇದೆಲ್ಲ ಕೈ ಮೀರಿ ಹೋಗ್ತಾ ಉಂಟೂಂತ ಅನಿಸ್ತಿಲ್ಲವೇ?
ಬನ್ನಂಜೆ
(ಈಗ ಕುದಿಯುತ್ತಿರುವ ಸಿಟ್ಟಿನಲ್ಲಿ. ಆದರೂ ತಗ್ಗಿದ ಧ್ವನಿಯಲ್ಲಿ)
ನೀನು ತಪ್ಪು ಮಾಡಿದೆ ಮಾಧವ... ತುಂಬ... ತುಂಬ ದೊಡ್ಡ ತಪ್ಪು ಮಾಡಿದೆ.. ನೀನು ಮಾಡಿದ ಪಾಪ ಏಳೇಳು ಜನ್ಮಕ್ಕೂ ನಿನ್ನನ್ನು ಕಾಡಲಿದೆ... ಯಾವ ದೈವವೂ ನಿನ್ನನ್ನು ಕ್ಷಮಿಸಲಿಕ್ಕಿಲ್ಲ.
ಮಾಧವ
(ಆಘಾತಗೊಂಡು)
ಇದರಲ್ಲಿ ನನ್ನ ತಪ್ಪೇನಿದೆ?! ಎಲ್ಲವೂ ದೈವದ ಮಾತಿನ ಹಾಗೇ ಆಗ್ತಾ ಉಂಟಲ್ಲ..?!
ಬನ್ನಂಜೆ
(ಇನ್ನೂ ಸಿಟ್ಟು, ಅಸಹನೆಯಲ್ಲಿ)
ಯಾವ ದೈವದ ಮಾತು...?
ಮಾಧವ ಗಲಿಬಿಲಿಗೊಳ್ಳುತ್ತಾನೆ. ಅವನು ಬನ್ನಂಜೆಯನ್ನು ತಬ್ಬಿಕೊಳ್ಳುತ್ತಾನೆ.
ಮಾಧವ
ಇದರಲ್ಲಿ ನನ್ನದೇನೂ ತಪ್ಪಿಲ್ಲ. ಎಲ್ಲವನ್ನೂ ದೈವವೇ ಮಾಡಿಸಿದ್ದು. ನಾನೆಲ್ಲ ಸರಿ ಮಾಡ್ತೇನೆ.. ಎಲ್ಲ ಸರಿ ಮಾಡ್ತೇನೆ!
ಬನ್ನಂಜೆ
ದೈವದ ನುಡಿ ಅಂತ ನೀನು ಹೇಳುತ್ತಿರೋದು, ನಿಜಕ್ಕೂ ನಿನ್ನೊಳಗಿನ ಪಾಪ ಪ್ರಜ್ಞೆ! ಅದು ನಿನ್ನ ಮನಸ್ಸಿನ ಮಾತು ಹೇಳ್ತಾ ಉಂಟು. ಅದಕ್ಕೆ ದೈವದ ಹೆಸರು ಕೊಡಬೇಡ!
ಮಾಧವ
ಆದರೆ ಕೊಲೆ ಮಾಡಿದ್ದು ಮಂಜೇಶನೇ ಅಲ್ವಾ?
ಬನ್ನಂಜೆ
(ಪ್ರಶ್ನಾರ್ಥಕವಾಗಿ)
ಕೊಲೇ?! ಕೊಲೆಯ ವಿಷಯ ನಾನು ಮಾತೇ ಆಡಲಿಲ್ಲವಲ್ಲಾ?!
ಬಾಯಿ ತಪ್ಪಿ ಬಂದ ಮಾತಿನಿಂದ, ಮಾಧವನಿಗೆ ಇಕ್ಕಟ್ಟಿನಲ್ಲಿ ಸಿಕ್ಕಿ ಬಿದ್ದಂತಾಗುತ್ತದೆ. ಅವನು ಬನ್ನಂಜೆಯನ್ನು ಎದುರಿಸಲಾಗದೇ ನಿಂತಲ್ಲೇ ತೊಳಲಾಡುತ್ತಾನೆ. ಬನ್ನಂಜೆ ಅರ್ಥಗರ್ಭಿತವಾಗಿ ಮೌನವಾಗಿದ್ದಾನೆ.
ಒಳಾಂಗಣ. ಮಾಧವ ಹಾಗೂ ಸುಗಂಧಿಯರ ಹೊಸ ಮನೆ - ರಾತ್ರಿ
ಸುಗಂಧಿ ಈಗ ಓಡಿ ಬಂದು ವಾಶ್ ಬೇಸಿನ್ನಿನಲ್ಲಿ ವಾಂತಿ ಮಾಡಿಕೊಳ್ಳುತ್ತಾಳೆ. ಮುಖ ತೊಳೆದುಕೊಂಡು ಹಾಗೇ ತಲೆಯೆತ್ತಿದಾಗ ಕನ್ನಡಿಯಲ್ಲಿ ಆಕೆಗೆ ತನ್ನ ಮುಖದ ತುಂಬಾ ರಕ್ತವಿದ್ದಂತೆ ಕಾಣಿಸುತ್ತದೆ. ಆಕೆ ಮುಖ ಒರೆಸಿಕೊಳ್ಳಲಾರಂಭಿಸುತ್ತಾಳೆ. ಆಕೆಯ ಕೈಯೆಲ್ಲಾ ಈಗ ರಕ್ತಮಯ. ಆಕೆ ಕಂಗಾಲಾಗುತ್ತಾ ಹೋಗುತ್ತಾಳೆ. ಆಕೆ ಹಾಗೇ ಕೆಳಗೆ ಬೀಳುತ್ತಾಳೆ. ಆಕೆ ನೆಲದಲ್ಲಿ ಒದ್ದಾಡಲಾರಂಭಿಸುತ್ತಾಳೆ. (ಆಕೆಯ ಹೊಟ್ಟೆ ಸ್ವಲ್ಪ ಉಬ್ಬಿರುವುದನ್ನು ನಾವೀಗ ಕಾಣಬಹುದು) ನೆಲದಲ್ಲೆಲ್ಲಾ ರಕ್ತ, ಅವಳ ಮೈಮೇಲೆಲ್ಲಾ ರಕ್ತ ಕಾಣಿಸುತ್ತದೆ. ಸುಗಂಧಿ ಅಳಲಾರಂಭಿಸುತ್ತಾಳೆ. ಆಕೆ ಸೆಂಟು ಬಾಟಲು ತೆಗೆದು ಕೈಗೆ- ಮೈಗೆ ಸೆಂಟು ಹಾಕಿಕೊಳ್ಳುತ್ತಾಳೆ. ಮತ್ತೆ ಮೂಸಿ ನೋಡುತ್ತಾಳೆ. ಮತ್ತೆ ಮತ್ತೆ ಸೆಂಟು ಹಾಕಿಕೊಳ್ಳುತ್ತಾಳೆ.
ಅಷ್ಟರಲ್ಲಿ ಅಲ್ಲಿಗೆ ಮಾಧವ ಬರುತ್ತಾನೆ. ಆತ ಸುಗಂಧಿಯನ್ನು ತಬ್ಬಿ ಹಿಡಿಯುತ್ತಾನೆ. ಇಬ್ಬರೂ ನೆಲದಲ್ಲಿ ಕುಳಿತಿದ್ದಾರೆ. ಮನೆಯಾಚೆಯಿಚಿದ ಕಾಗೆ ಕೂಗುವ ಕರ್ಕಶ ಶಬ್ದ ಆಗೀಗ ಕೇಳಿಸುತ್ತಿದೆ. ಸುಗಂಧಿ ಮೌನವಾಗಿ ಅಳುತ್ತಿದ್ದಾಳೆ. ಮಾಧವನೂ ಗಾಬರಿಯಾಗಿದ್ದಾನೆ. ಅವನು ಸುಗಂಧಿಯ ಕತ್ತಿಗೆ ಮುತ್ತಿಡುತ್ತಾನೆ.
ಮಾಧವ
ನೀನು ಈ ಸೆಂಟ್ ಹಾಕ್ಬೇಡ ಚಿನ್ನು. ಅದರ ವಾಸನೆಗೇ ನಿನಗೆ ಬಹುಷಃ ತಲೆ ಸುತ್ತಿದ ಹಾಗೆಲ್ಲಾ ಆಗೋದು.
ಸುಗಂಧಿ
(ಬಹಳ ದುಃಖದಿಂದ)
ಹೌದು. ಅದೇ ಇರಬೇಕು... ಈ ವಾಸನೆ... ಮೀನಿನ ಮಾರ್ಕೆಟ್... ಪ್ರಮೀಳ... ದಿನೇಶಣ್ಣನ ಹೆಣ... ಎಲ್ಲವೂ ನೆನಪಾಗುತ್ತದೆ. ಎಷ್ಟು ತಿಕ್ಕಿದ್ರೂ ನನ್ನ ಮೈಯ ವಾಸನೆ ಯಾಕೆ ಹೋಗುವುದಿಲ್ಲ? ನನಗೆ ಶ್ರೀಮಂತರ ಪರಿಮಳ ಯಾವತ್ತೂ ಬರಲು ಸಾಧ್ಯವೇ ಇಲ್ಲವೇ?
ಮಾಧವ
ನನ್ನ ಚಿನ್ನು, ನಿನ್ನ ಮೈಯ ಮೀನಿನ ವಾಸನೆಯೇ ನನಗೆ ಇಷ್ಟ... ಯಾಕೆ ಇನ್ಯಾವುದೋ ವಾಸನೆಯನ್ನು ಮೈಗೆ ಹಚ್ಚಿಕೊಳ್ಳುತ್ತೀಯಾ?
ಸುಗಂಧಿ ದುಃಖದಲ್ಲೂ ಒಂದು ಸಣ್ಣ ಆಶಾಕಿರಣ ಮೂಡಿದಂತೆ ನಸುನಗುತ್ತಾಳೆ. ಮಾಧವ ಈಗ ಆಕೆಯನ್ನು ತಬ್ಬಿಕೊಂಡು ಮುದ್ದಿಸಲು ಮುಂದಾಗುತ್ತಾನೆ. ಆದರೆ ಸುಗಂಧಿ ಅವನ ಅಪ್ಪುಗೆಯನ್ನು ಬಿಡಿಸಿಕೊಳ್ಳುತ್ತಾಳೆ. ಆಕೆಗೆ ದೇಹದ ಸಾನಿಧ್ಯ ಇಷ್ಟವಾಗುತ್ತಿಲ್ಲ.
ಮನೆಯ ಹೊರಗೆ ಕಾಗೆಯೊಂದು ನಿರಂತರವಾಗಿ ಕೂಗುತ್ತಿರುತ್ತದೆ. ಸುಗಂಧಿಗೆ ಮಾತನಾಡಲು ವ್ಯವಧಾನವೇ ಹೋಗುವಂತೆ ಕಾಗೆಯ ಸದ್ದು ಕೇಳಿಸುತ್ತಿರುತ್ತದೆ. ಸುಗಂಧಿ ಕೊನೆಗೆ ಹತಾಶೆಯಿಂದ ಕಿಟಕಿಯಾಚೆ ನೋಡುತ್ತಾಳೆ. ಕಿಟಕಿಯಾಚೆ ಕೊಂಬೆಯೊಂದರಲ್ಲಿ ಕಾಗೆ ಕುಳಿತಿರುವುದನ್ನು ಕಾಣುತ್ತೇವೆ. ಅದು ಕರ್ಕಶವಾಗಿ ಕೂಗುತ್ತಿದೆ.
ಹೊರಾಂಗಣ. ಸಮುದ್ರ ತೀರದಲ್ಲಿ ಯಾವುದೋ ಪೊದೆಗಳ ಬಗ್ಗೆ - ಹಗಲು
ಮಾಧವ ಹಾಗೂ ರಾಕೇಶ ಈಗ ಐತನ ಕಳಿ ಕುಡಿಯುತ್ತಾ ಸಮುದ್ರ ತೀರದಲ್ಲಿದ್ದಾರೆ. ಐತ ಮೌನವಾಗಿ ಕಳಿಕೊಡುವ ಕೆಲಸದಲ್ಲಿ ನಿರತನಾಗಿದ್ದಾನೆ. ತುಸು ದೂರದಲ್ಲಿ ಅವನ ಸೈಕಲ್ ಕಾಣಿಸುತ್ತಿದೆ.
ರಾಕೇಶ
ಸಂಜೀವ ನನ್ನ ಬೆಸ್ಟ್ ಫ್ರೆಂಡ್ ಅಂತ ನಿಮಗೆ ಗೊತ್ತಲ್ಲಾ?
ಮಾಧವ ಏನೂ ಹೇಳುವುದಿಲ್ಲ.
ರಾಕೇಶ
ಹಾಗೆ ಮಂಜೇಶನೂ ನನ್ನ ಬೆಸ್ಟ್ ಫ್ರೆಂಡೇ.
ಮಾಧವ ಈಗಲೂ ಏನೂ ಹೇಳುವುದಿಲ್ಲ.
ರಾಕೇಶ
ಅದು ಗೊತ್ತಿದ್ದೂ ಈ ಕೆಲ್ಸ ನಾನು ಮಾಡ್ಬೇಕೂಂತ ಹೇಳೂದು ನೀವು...?
ಮಾಧವ
ನಿನ್ನ ಇಡೀ ಲೈಫಲ್ಲಿ ಒಂದಾದ್ರೂ ಒಳ್ಳೆ ಕೆಲ್ಸ ಮಾಡಿದ್ದುಂಟಾ? ಸಿಕ್ಕಿದವರಿಗೆಲ್ಲಾ ನಾಮ ಹಾಕಿಯೇ ಬದುಕಬಹುದು ಎಂದು ಅಂದುಕೊಂಡಿದ್ದೀಯಾ? ಮಂಜೇಶ ಅಪ್ಪನನ್ನು ಕೊಂದು ಓಡಿ ಹೋದದ್ದು... ಅವನಿಗೆ ಸಹಾಯ ಮಾಡೋದಕ್ಕೆ ಹೋಗಿ ನೀನು ಪೋಲೀಸ್ ಕೈಯಲ್ಲಿ ಸಿಕ್ಕಿ ಬಿದ್ದಿ ಒದೆ ತಿಂದದ್ದು ಇಡೀ ಜಗತ್ತಿಗೇ ಗೊತ್ತಿದೆ! ಈಗ... ಒಂದ್ ಇಪ್ಪತ್ತು ಲಕ್ಷ ನಿನ್ನ ಕೈಯಲ್ಲಿ ಇದ್ದರೆ ಹೇಗೆ ಬದುಕಬಹುದು ಎಂದು ಯೋಚಿಸು...
ರಾಕೇಶನಿಗೆ ಮಾಧವನ ಮಾತು ಕೇಳಿ ಗೊಂದಲವಾಗುತ್ತದೆ.
ಒಳಾಂಗಣ. ಮಾಧವ ಹಾಗೂ ಸುಗಂಧಿಯರ ಹೊಸ ಮನೆ - ಹಗಲು
ಸುಗಂಧಿ ಈಗ ಅಸ್ವಸ್ಥಳಾಗಿದ್ದಾಳೆ. ಆಕೆ ಮನೆಯ ಹೊಸ್ತಿಲಿನಲ್ಲಿ ಮುರುಟಿ ಕುಳಿತಿದ್ದಾಳೆ. ಮಾಧವ ಅಂಗಳದಲ್ಲಿ ಬಲೆ ರಿಪೇರಿಯ ಕೆಲಸದಲ್ಲಿ ತೊಡಗಿದ್ದಾನೆ. ಅವನ ಜೊತೆಗೆ ಇನ್ನಷ್ಟು ಜನರು ಸೇರಿಕೊಂಡು ಬಲೆಯ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಅಲ್ಲಿಗೆ ಯಕ್ಷಗಾನ ಮಂಡಳಿಯವರು ಬರುತ್ತಾರೆ. ಅವರು ಮಾಧವನ ಬಳಿಗೆ ಬರುತ್ತಾರೆ.
ಕುಮಾರ
ಮಾಧವಣ್ಣ.. ಹೇಗುಂಟು.. ಫಿಶಿಂಗ್ ಸೀಸನ್?
ಮಾಧವ
ಸಾಧಾರಣ... ಈ ಬಾರಿ ಎಲ್ಲಿ ಆಟ? ದೇವಸ್ಥಾನದಲ್ಲೋ ಅಥವಾ ಶಾಲೆಯ ಬಯಲಲ್ಲೋ?
ಕುಮಾರ
ಅದನ್ನೇ ಮಾತನಾಡುವಾಂತ ಬಂದದ್ದು. ದಿನೇಶಣ್ಣ ಇದ್ದಾಗ ಅವರೇ ಕರೀತಾ ಇದ್ರು. ಅವರಿಲ್ಲದೇ ನಮ್ಮ ಕಥೆ ಕಷ್ಟವಾಗಿದೆ.
ಒಬ್ಬ ಬೆಸ್ತ
(ಬಲೆಯಲ್ಲಿ ಕೆಲಸ ಮಾಡುತ್ತಿದ್ದವನು)
ನಿಮ್ಮ ಆಟ ಮಾಡಿಸ್ಲೇ ಬೇಕಲ್ಲ ಕುಮಾರಣ್ಣ.. ಶಂಕರನ ಸ್ತ್ರೀ ವೇಷ ಉಂಟು ತಾನೇ?
ಇನ್ನೊಬ್ಬ ಬೆಸ್ತ
(ನಗುತ್ತಾ)
ಇವನಿಗೆ ಪ್ರಸಂಗ ಯಾವುದಾದರೂ ಸರಿಯೇ... ಸ್ತ್ರೀ ವೇಷ ಮಾತ್ರ ಶಂಕರನದ್ದೇ ಆಗಬೇಕು ಅಲ್ವಾ..? ಮಾಧವಣ್ಣ ಆಟ ಮಾಡ್ಸಿ.. ಎಲ್ಲ ಸರಿ ಆಗ್ತದೆ.. ಮೆಲೆ ಇರುವ ದಿನೇಶಣ್ಣನಿಗೂ ಖುಷಿ ಆಗ್ತದೆ.
ಮಾಧವ ಬನ್ನಂಜೆಯ ಕಡೆಗೆ ನೋಡುತ್ತಾನೆ. ಅವನು ಏನೂ ಹೇಳದೇ ಮುಖ ತಿರುಗಿಸುತ್ತಾನೆ. ಮಾಧವ ಸುಗಂಧಿಯ ಕಡೆಗೆ ತಿರುಗುತ್ತಾನೆ. ಸುಗಂಧಿ ನೋವಿನಲ್ಲೇ ಆಗಲಿ ಎನ್ನುವಂತೆ ತಲೆಯಾಡಿಸುತ್ತಾಳೆ. ಮಾಧವ ಕುಮಾರನ ಕಡೆಗೆ ತಿರುಗಿ ಆಗಲಿ ಎನ್ನುವಂತೆ ತಲೆಯಾಡಿಸಿ ಎದ್ದು ಒಳಗೆ ನಡೆಯುತ್ತಾನೆ. ಕುಮಾರನ ಮುಖ ಅರಳುತ್ತದೆ. ಬನ್ನಂಜೆ ಈವರೆಗೆ ಸುಮ್ಮನಿದ್ದವನು ಸುಗಂಧಿಯ ಕಡೆಗೆ ನೋಡುತ್ತಾನೆ.
ಮಾಧವ ಅಲ್ಲಿಂದ ದಾಟಿ ಹೋಗುತ್ತಿರುವವನು ಸುಗಂಧಿಯ ಕೆನ್ನೆ ಸವರುತ್ತಾನೆ. ಸುಗಂಧಿ ಆತನ ಕೈ ಹಿಡಿದವಳು ಹಾಗೇ ಕೆನ್ನೆ ಮುಟ್ಟಿಕೊಳ್ಳುತ್ತಾಳೆ. ಅಲ್ಲೇನೋ ಅಂಟಿದಂತಾಗಿ ಕೈ ನೋಡಿಕೊಳ್ಳುತ್ತಾಳೆ. ಅಲ್ಲೆಲ್ಲಾ ರಕ್ತ... ಆಕೆ ಅಳಲಾರಂಭಿಸುತ್ತಾಳೆ, ಮೌನವಾಗಿ! ಇಲ್ಲಿಂದಲೇ ಯಕ್ಷಗಾನದ ಚಂಡೆ ಮದ್ದಳೆಗಳ ಶಬ್ದ ಆರಂಭವಾಗುತ್ತದೆ.
ಹೊರಾಂಗಣ. ಯಕ್ಷಗಾನ ಪ್ರದರ್ಶನಕ್ಕೆ ಸಿದ್ಧವಾಗಿರುವ ಬಯಲು - ಸಂಜೆ
ಯಕ್ಷಗಾನ ಪ್ರದರ್ಶನಕ್ಕೆ ತಯಾರಿ ಭರದಲ್ಲಿ ನಡೆದಿದೆ.
ಹೊರಾಂಗಣ. ಯಾವುದೋ ದಾರಿಯಲ್ಲಿ ಹೋಗುತ್ತಿರುವ ಕಾರು - ಸಂಜೆ
ಬನ್ನಂಜೆ ಮತ್ತು ಸಂಜೀವ ಇಬ್ಬರೂ ಸಂಜೀವನ ಕಾರಿನಲ್ಲಿ ಹೋಗುತ್ತಿದ್ದಾರೆ. ಕಾರಿನಲ್ಲಿ ರಾಕೇಶ ಹಾಗೂ ಇನ್ನೊಬ್ಬ ಗೆಳೆಯ ಇದ್ದಾನೆ. ಅವರಿಬ್ಬರೂ ಹಿಂದಿನ ಸೀಟಿನಲ್ಲಿ ಕುಳಿತಿರುತ್ತಾರೆ. ಸಂಜೀವ ಮಾತನಾಡುತ್ತಲೇ ಇದ್ದಾನೆ.
ಸಂಜೀವ
ಮಾಧವ ನಿನಗೆ ಜಾಮೀನು ಕೊಡಲಿಕ್ಕೆ ಬಂದಾಗ ಬೇಡ ಅಂತ ಹೇಳ್ಬೇಕಿತ್ತು. ನಾನು ಹೇಗಾದ್ರೂ ನಿನ್ನನ್ನು ಬಿಡಿಸ್ತಿದ್ದೆ. ನಿನಗೆ, ಅವನ ಎಂಜಲು ಎಲೆ ತಿನ್ನುವ ಕೆಲಸ ಯಾಕೆ ಬೇಕಿತ್ತು?!
ರಾಕೇಶ
ಓ.. ಒಮ್ಮೆ ಸುಮ್ಮನೆ ಇರು ನೀನು. ಎರಡು ರಾತ್ರಿ ಹಗಲು ಪೋಲೀಸರ ಬೂಟುಗಾಲಿನ ಒದೆ ತಿಂದಾಗ ಯಾವ ಫ್ರೆಂಡ್ಶಿಪ್ಪೂ ಮರೆತು ಹೋಗ್ತದೆ. ಆಗ ಮುಖವೂ ತೋರಿಸದವನು ನೀನು. ಈಗ ಮಾಧವ ಬಿಡಿಸಿಕೊಂಡು ಬಂದ ಮೇಲೆ, ಮಾತನಾಡಿದ್ದು ಸಾಕು! ನಿನಗೆ ನಿಜವಾಗಿ, ನಿನ್ನ ಫ್ರೆಂಡ್ ಜೈಲಿಂದ ಹೊರಗೆ ಬಂದ ಅಂತ ಸಂತೋಷ ಆಗಬೇಕಿತ್ತು. ಅದು ಬಿಟ್ಟು, ನಾನು ಒಳಗೇ ಕೊಳಿಯಬೇಕಿತ್ತು ಎನ್ನುವಂತೆ ಮಾತನಾಡ್ತೀಯಲ್ಲಾ?!
ಸಂಜೀವ
ನನಗೆ ಅರ್ಥವೇ ಆಗುತ್ತಿಲ್ಲ. ಅಲ್ಲ... ನಿಮಗೆಲ್ಲಾ ಏನಾಗಿದೆ?
ಬನ್ನಂಜೆ
ಬಾಯಿ ಮುಚ್ಚಿ ಕೂರಲು ನಿನಗೆ ಎಷ್ಟು ಕೊಡಬೇಕು?
ರಾಕೇಶ
ಅಂಕಲ್ ಎಂತ ವಿಷಯ...? ಸಂಜೀವ ನನಗೆ ಉಲ್ಟಾ ಮಾತಾಡ್ತಾನೆ? ನಿಮ್ಮ ಫ್ರೆಂಡ್, ಮಾಧವಣ್ಣ ಅಷ್ಟು ಕೆಟ್ಟವರು ಅಂತಾದರೆ, ಹೋಗಿ ಪೋಲೀಸ್ ಕಂಪ್ಲೇಂಟ್ ಕೊಡಿ. ಸುಮ್ಮನೆ ಕೂತದ್ದು ಯಾಕೆ?
ಸಂಜೀವ
ಕನಿಷ್ಟ ಅವನು ಮಾಡಿಸುವ ಯಕ್ಷಗಾನ ಆಟಕ್ಕೆ ಹೋಗದೇ ಇರಬಹುದಿತ್ತು!
ಬನ್ನಂಜೆ
ಒಟ್ಟಿಗೆ ಕೆಲಸ ಮಾಡುವವರು ಮಾರಾಯ ನಾವು.. ಮತ್ತೆ ತಲೆಗೊಂದು ಮಾತಾಡ್ತಾರೆ. ಇದೆಲ್ಲ ಬೇಕಾ?
ಇನ್ನೊಬ್ಬ
ರಾಕೇಶ... ಇನ್ನು ಸಾಲದೇ...? ಇನ್ನು ಕೆಲಸ ಮುಗಿಸಬಹುದಲ್ಲಾ?
ಎಲ್ಲರೂ ಇವನೇನು ಹೇಳುತ್ತಿದ್ದಾನೆ ಅನ್ನುವಂತೆ ಒಂದು ಪಾಸ್ ತೆಗೆದುಕೊಳ್ಳುತ್ತಾರೆ. ಕಾರು ಓಡುತ್ತಿದೆ. ಇನ್ನೊಬ್ಬ ರಾಕೇಶನ ಮುಖ ನೋಡುತ್ತಾನೆ. ರಾಕೇಶ ಬೆವರುತ್ತಿದ್ದಾನೆ.
ರಾಕೇಶ ಸ್ವಲ್ಪ ಗಾಬರಿಯಲ್ಲೇ ಕಿಸೆಗೆ ಕೈಹಾಕುತ್ತಾನೆ. ಜೊತೆಯಲ್ಲಿರುವವನೂ ತನ್ನ ಕಿಸೆಗೆ ಕೈ ಹಾಕ್ತಾನೆ.
ಸಂಜೀವ ಇನ್ನೇನೋ ಹೇಳಲು ಹೊರಡುತ್ತಾನೆ. ಅಷ್ಟರಲ್ಲಿ ಕಾರಿನ ಹಿಂದಿನ ಸೀಟಿನಿಂದ ಸಂಜೀವ ಹಾಗೂ ಬನ್ನಂಜೆಯ ಕುತ್ತಿಗೆಗೆ ತಂತಿಹಾಕಿ ಎಳೆಯಲು ಶುರುಮಾಡುತ್ತಾರೆ ರಾಕೇಶ ಹಾಗೂ ಅವನ ಗೆಳೆಯ. ಅಲ್ಲಿ ಭಾರೀ ಹೋರಾಟ, ಒದ್ದಾಟ ನಡೆಯುತ್ತದೆ. ಕಾರು ತೂರಾಡುತ್ತಾ ಓಲಾಡುತ್ತಾ ಹೋಗಿ ದಾರಿಯ ಬದಿಯಲ್ಲಿ ನಿಲ್ಲುತ್ತದೆ. ಕಾರಿನಿಂದ ಬನ್ನಂಜೆ ಹಾಗೂ ಸಂಜೀವ ಇಬ್ಬರೂ ಹೊರಗೆ ಬೀಳುತ್ತಾರೆ. ಅವರು ಕುತ್ತಿಗೆ ಹಿಡಿದು ಒದ್ದಾಡುತ್ತಿದ್ದಾರೆ. ಅಷ್ಟರಲ್ಲಿ ಕಾರಿನಿಂದ ಇಳಿಯುವ ರಾಕೇಶನ ಗೆಳೆಯ ಅವನ ಕೈಯ್ಯಲ್ಲಿರುವ ಒಂದು ಕೋಲಿನಿಂದ ಬನ್ನಂಜೆಯ ತಲೆಯನ್ನು ಅಪ್ಪಳಿಸುತ್ತಾನೆ. ರಾಕೇಶನಿಗೆ ವಾಕರಿಕೆ ಬಂದಂತಾಗುತ್ತದೆ. ರಾಕೇಶ ಇತ್ತ ಸಂಜೀವನ ಕಡೆಗೆ ತಿರುಗುತ್ತಾನೆ. ಸಂಜೀವ ಪ್ರಜ್ಞೆ ಕಳೆದುಕೊಂಡು ಬಿದ್ದಿದ್ದಾನೆ. (ಸತ್ತಂತೆ ಬಿದ್ದಿದ್ದಾನೆ) ರಾಕೇಶ ಗೆಳೆಯನ ಮುಖ ನೋಡಿ ಇವನ ಕಥೆ ಮುಗಿದಿದೆ ಎನ್ನುವಂತೆ ತಲೆಯಾಡಿಸುತ್ತಾನೆ. ಇಬ್ಬರೂ ಸೇರಿ ಹೆಣಗಳನ್ನು ಕಾರಿನ ಕಡೆಗೆ ಎಳೆದುಕೊಂಡು ಬರುತ್ತಾರೆ. ಇಲ್ಲಿಂದ ನಾವು ಯಕ್ಷಗಾನದ ವಾದ್ಯಮೇಳ ಕೇಳಲಾರಂಭಿಸುತ್ತೇವೆ.
ಹೊರಾಂಗಣ. ಯಕ್ಷಗಾನ ಪ್ರದರ್ಶನದ ಬಯಲು - ರಾತ್ರಿ
ಆಟ ಆರಂಭವಾಗಿದೆ. ಮಾಧವನಿಗೆ ಎದುರಿನಲ್ಲಿ ಸೀಟ್ ಹಾಕಲಾಗಿದೆ. ಎಲ್ಲರೂ ಅವನನ್ನು ಕಂಡು ಮುಗುಳ್ನಗುತ್ತಿದ್ದಾರೆ. ಆದರೆ ಮಾಧವನ ಕಣ್ಣು ಏನನ್ನೋ ಹುಡುಕುತ್ತಿವೆ. ಅವನ ಜೊತೆಗೆ ತುಂಬು ಗರ್ಭಿಣಿ ಸುಗಂಧಿಯೂ ಇದ್ದಾಳೆ. ಮಾಧವ ಎಲ್ಲರೂ ತನಗೆ ನೀಡುತ್ತಿರುವ ಗೌರವದಿಂದ ಸಂತೋಷಗೊಂಡಿದ್ದಾನೆ. ಆಗ ಫಕ್ಕನೆ ಗುಂಪಿನಲ್ಲೆಲ್ಲೋ ಬನ್ನಂಜೆ ನಿಂತಿರುವಂತೆ ಮಾಧವನಿಗೆ ಭಾಸವಾಗುತ್ತದೆ. ವೇಷ ಹಾಕಿ ಕುಣಿಯುತ್ತಿರುವವರಲ್ಲಿ ಯಾರೋ ಬನ್ನಂಜೆಯಂತೆ ಮಾಧವನಿಗೆ ಕಾಣಿಸುತ್ತದೆ. ಮಾಧವನಿಗೆ ಗಾಬರಿಯಾಗುತ್ತಾ ಹೋಗುತ್ತದೆ. ಎಲ್ಲರೂ ಇವನಿಗೇನಾಗಿದೆ ಎಂದು ಅಚ್ಚರಿಗೊಳ್ಳುತ್ತಾರೆ. ಸುಗಂಧಿ ಎಲ್ಲವನ್ನೂ ಸುಧಾರಿಸುತ್ತಿರುತ್ತಾಳೆ. ಇಲ್ಲಿ ಯಕ್ಷಗಾನದ ವಾದ್ಯಗಳ ಶಬ್ದದಲ್ಲಿ ಮಾತುಗಳು ಅಡಗಿ ಹೋಗಿವೆ. ಆದರೆ, ಗುಂಪಿನಲ್ಲಿ ದಿನೇಶಣ್ಣ ಕಾಣಿಸುವುದು, ಬನ್ನಂಜೆ ಕಾಣಿಸುವುದು, ಮಾಧವ ಅವರನ್ನು ಹುಡುಕಿಕೊಂಡು ಗುಂಪಿಗೆ ನುಗ್ಗುವುದು ಇತ್ಯಾದಿ ಕಾಣುತ್ತೇವೆ.
ಅಷ್ಟರಲ್ಲಿ ಅಲ್ಲಿಗೆ ಇನ್ಸ್ಪೆಕ್ಟರ್ ರೂಪೇಶ ಬರುತ್ತಾನೆ. ಅವನು ಮಾಧವನನ್ನು ತಡೆದು ನಿಲ್ಲಿಸುತ್ತಾನೆ.
ರೂಪೇಶ
ಮಾಧವ...! ಯಾರೋ ಬನ್ನಂಜೆಯನ್ನು ಕೊಂದು ರೋಡ್ ಸೈಡ್ ಬಿಸಾಕಿದ್ದಾರೆ!
ಮಾಧವನಿಗೆ ಶಾಕ್ ಆಗುತ್ತದೆ. ಗುಂಪಿನಲ್ಲಿ ಎಲ್ಲರೂ ಸ್ತಬ್ಧರಾಗುತ್ತಾರೆ. ಎಲ್ಲರಿಗೂ ಗರಬಡಿದಂತಾಗುತ್ತದೆ. ಯಾರೋ ದೂರದಿಂದಲೇ ಸನ್ನೆ ಮಾಡಿ ಯಕ್ಷಗಾನದ ವಾದ್ಯಗಳೂ ನಿಲ್ಲುತ್ತವೆ. ಅಲ್ಲಿ ನೀರವ ಮೌನ... ಸುಗಂಧಿಯೂ ಹೇಗೆ ರಿಯಾಕ್ಟ್ ಮಾಡುವುದೆಂದು ಗೊತ್ತಾಗದವಳಂತೆ ನಟಿಸುತ್ತಿದ್ದಾಳೆ. ಆಕೆ ಮಾಧವನ ಮುಖ ನೋಡುತ್ತಾಳೆ. ಮಾಧವನೂ ಆಕೆಯ ಮುಖವನ್ನು ನೋಡುತ್ತಾನೆ. ಸುಗಂಧಿ ಸಮಾಧಾನವಾಗಿರುವಂತೆ ಕಣ್ಣ ಸನ್ನೆ ಮಾಡುತ್ತಾಳೆ.
ರೂಪೇಶ
ಕೊರಳಿಗೆ ವೈರ್ ಸುತ್ತಿ ಎಳೆದ ಹಾಗೆ ಕಾಣ್ತದೆ. ಸಂಜೀವ ಅಲ್ಲಿರ್ಲಿಲ್ಲ... ಅವನು ಅವರಿಂದ ತಪ್ಪಿಸ್ಕೊಂಡಿದಾನೇಂತ ಕಾಣುತ್ತದೆ. ಅವನು ಸಿಕ್ಕಿದ್ರೆ ಗೊತ್ತಾಗಬಹುದು... ಯಾರು... ಯಾಕೆ... ಯಾರು ಕೊಂದದ್ದು, ಯಾಕೆ ಕೊಂದದ್ದು.. ಎಲ್ಲಾ... ಗೊತ್ತಾಗಬಹುದು.
ಮಾಧವನಿಗೆ ಎಲ್ಲಿಲ್ಲದ ಗಲಿಬಿಲಿ. ಅವನು ಸುಗಂಧಿಯ ಕಡೆಗೆ ನೋಡುತ್ತಾನೆ. ಸುಗಂಧಿ ಸುಧಾರಿಸಿಕೊಳ್ಳುತ್ತಾ ಮಾತಾಡುತ್ತಾಳೆ.
ಸುಗಂಧಿ
ಮಂಜೇಶ... ಆಸ್ತಿ ಕೊಡ್ಲಿಲ್ಲಾಂತ ಹುಟ್ಸಿದ ಅಪ್ಪನನ್ನೇ ಕೊಂದ. ಈಗ ದಿನೇಶಣ್ಣನ ಭರವಸೆಯ ಜನ ಬನ್ನಂಜೆಯನ್ನೂ...!
(ಅಳು ನಟಿಸುತ್ತಾ)
ಈಗ ಬಾಕಿ ಇರುವುದು...
ಸುಗಂಧಿ ಈಗ ಮಾಧವನ ಕಡೆಗೆ ನೋಡಿ ಜೋರಾಗಿ ಅಳಲಾರಂಭಿಸುತ್ತಾಳೆ...
ಸುತ್ತಲಿನ ಜನರೆಲ್ಲರೂ ಗೊಂದಲದಲ್ಲಿ ನಿಂತಿದ್ದಾರೆ.
ಹೊರಾಂಗಣ. ಮುಂಬೈಯಲ್ಲಿ ಯಾವುದೋ ಸ್ಥಳ - ಹಗಲು
ಮಂಜೇಶ, ಸಂಜೀವ ಹಾಗೂ ಸದಾಶಿವ ಮುಂಬೈನಲ್ಲಿ ಜೊತೆಯಾಗಿದ್ದಾರೆ.
ಸದಾಶಿವ
ಇಷ್ಟೆಲ್ಲಾ ಮಾಡಿಸಿದ್ದು ಮಾಧವನೇ ಅಂತ ಗ್ಯಾರೆಂಟಿಯಾಗಿ ಗೊತ್ತಿದ್ದರೆ, ಹೋಗಿ ಪೋಲೀಸತ್ರ ಹೇಳಿ. ನನ್ನತ್ರ ಯಾಕೆ ಬರೋದು? ಏನು ಮುಂಬೈಯಲ್ಲಿ ಮಾವನ ಮನೆ ಉಂಟೂಂತ ನೀವೆಲ್ಲಾ ಇಲ್ಲಿಗೆ ಬರೋದಾ?
ಸಂಜೀವ
ನನ್ನ ಪ್ರಕಾರ... ಪೋಲೀಸರೂ ಮಾಧವನ ಜೊತೆ ಸೇರಿದ್ದಾರೆ. ರಾಕೇಶನನ್ನು ಬಿಡಿಸಿದ್ದೇ ಮಾಧವ. ಇನ್ನು ಊರಿಗೆ ಹೋಗುವುದು ಕಷ್ಟವೇ. ಪ್ಲೀಸ್ ಅರ್ಥ ಮಾಡಿಕೊಳ್ಳಿ. ನೀವೇ ಏನಾದ್ರೂ ಸಹಾಯ ಮಾಡ್ಬೇಕು.
ಸದಾಶಿವ
ದುಬೈಯಲ್ಲಿ ನನ್ನ ಜನ ಇದ್ದಾರೆ. ಕರಿಯಬಹುದು. ಆದರೆ ಸ್ವಲ್ಪ ಖರ್ಚಾಗ್ತದೆ. ಎಲ್ಲಾ ಆದ್ಮೇಲೆ ಖರ್ಚು ಕೊಡಿಸಲಿಕ್ಕಾಗುತ್ತದೆ ಅಂತಾದ್ರೆ ಯೋಚಿಸಿ ನೋಡಿ...
ಮಂಜೇಶ
(ಸಿಟ್ಟಿನಲ್ಲಿ)
ದುಬೈಯಿಂದ ಎಲ್ಲಾ ಜನ ಬೇಡ. ಮಾಧವ ನನ್ನ ಹಾಗೂ ಸಂಜೀವನ ಜೀವನ ಹಾಳು ಮಾಡಿದ್ದಾನೆ. ಅವನನ್ನು ನಾವೇ ಮುಗಿಸುತ್ತೇವೆ.
ಸದಾಶಿವ
(ನಗುತ್ತಾ)
ಮುಗಿಸಿ ಬಿಡುವವರ ಮುಖ ನೋಡಿದರೆ! ಹ.. ಹ್ಹ.. ನಿನಗೆ ಅಷ್ಟು ಧಮ್ ಇರೋದೇ ಆದರೆ, ಇಷ್ಟು ದಿನ, ಇಲ್ಲಿ ಹೀಗೆ ಬಾರಿನಲ್ಲಿ ವೈಟರ್ ಆಗಿ ಕೊಳಿಯುತ್ತಿರಲಿಲ್ಲ!
ಮಂಜೇಶನಿಗೆ ಸ್ವಲ್ಪ ಅವಮಾನ ಆದಂತಾಗುತ್ತದೆ.
ಸಂಜೀವ
ಈಗ ನಾನೂ ಇದ್ದೇನೆ ಇವನೊಟ್ಟಿಗೆ. ಆ ಬೇವರ್ಸಿಗೊಂದು ಗತಿ ತೋರಿಸಲೇ ಬೇಕು. ನಮಗೆ ಸ್ವಲ್ಪ ಹೆಲ್ಪ್ ಬೇಕು. ಸ್ವಲ್ಪ ದುಡ್ಡು ಮತ್ತೆ ಸ್ವಲ್ಪ ದಿನ ಉಳಿಯಲು ಒಂದಿಷ್ಟು ಜಾಗ. ಯೋಚನೆ ಮಾಡೋದಿಕ್ಕೆ ಒಂದಿಷ್ಟು ಸಮಯ ಬೇಕು.
ಸದಾಶಿವ
(ನಿರಾಸೆಯಿಂದ)
ಒಬ್ಬ ಹುಚ್ಚ. ಇನ್ನೊಬ್ಬ ಅರೆ ಹುಚ್ಚ. ನಿಮ್ಮಿಬ್ಬರನ್ನು ನಂಬಿದರೆ, ನನ್ನ ಕೈಯಲ್ಲಿ ಚೊಂಬು ಗ್ಯಾರೆಂಟೀ... ಹೋಗಿ ಮಾರಾಯ್ರೇ..!
ಸಂಜೀವ
(ತುಸು ಯೋಚಿಸುತ್ತಾ)
ದಿನೇಶಣ್ಣನ ಆಸ್ತಿಪತ್ರ ಎಲ್ಲಾ ಆ ಮಾಧವನತ್ರ ಉಂಟು. ಅದನ್ನೇ ನಾವು ಲಪಟಾಯಿಸಿದ್ರೆ ಪೂರಾ ಆಸ್ತಿ ಮಂಜೆಶನಿಗೆ ಬರುತ್ತದೆ. ಆಗ ನಾವೂ ನೀವೂ ಸೇರ್ಕೊಂಡು ಏನಾದ್ರೂ ವ್ಯವಹಾರ ಮಾಡಬಹುದು. ದಯವಿಟ್ಟು ಯೋಚನೆ ಮಾಡಿ...
ಮಂಜೇಶ ಏನೋ ಒಂದು ಆಶಾಕಿರಣ ಕಂಡಂತೆ ಸದಾಶಿವನನ್ನೂ ಸಂಜೀವನನ್ನೂ ನೋಡುತ್ತಾನೆ. ಸದಾಶಿವ ಏನು ಮಾಡುವುದು ಎಂದು ಲೆಕ್ಕಾಚಾರದಲ್ಲಿರುವವನಂತೆ ಕಾಣಿಸುತ್ತಾನೆ.
ಒಳಾಂಗಣ/ಹೊರಾಂಗಣ. ದಿನೇಶಣ್ಣನ ಮನೆ - ಹಗಲು
ಸುಗಂಧಿ ಈಗ ದಿನೇಶಣ್ಣನ ಮನೆಯ ಮುಂದೆ ನಿಂತಿದ್ದಾಳೆ. ಆಕೆ ಟ್ರಾನ್ಸಿನಲ್ಲಿದ್ದಾಳೆ. ಮುಖದಲ್ಲಿ ಸುಸ್ತು ಕಾಣಿಸುತ್ತಿದೆ. ಅತ್ತಿತ್ತ ಹೋಗುವ ಜನರನ್ನು ನೋಡುತ್ತಾ... ಹಾಗೆಯೇ ನಿಧಾನಕ್ಕೆ ಕಾಂಪೌಂಡ್ ಒಳಗೆ ಹೆಜ್ಜೆ ಇಡುತ್ತಾಳೆ. ಮನೆಯಲ್ಲಿ ಯಾವ ಚಟುವಟಿಕೆಯೂ ಕಾಣುತ್ತಿಲ್ಲ.
ಸುಗಂಧಿ ಹಾಗೇ ಮನೆಯೊಳಗೆ ಹೋಗುತ್ತಾಳೆ. ಮನೆಯ ಬಾಗಿಲು ತೆರೆದೇ ಇದೆ. ಸುಗಂಧಿ ಮನೆಯೊಳಗೆ ಒಂದೊಂದೇ ಕೋಣೆಗಳನ್ನು ನೋಡುತ್ತಾ ಹೋಗುತ್ತಾಳೆ. ಯಾರೂ ಕಾಣಿಸುತ್ತಿಲ್ಲ.
ಸುಗಂಧಿ ಈಗ ದಿನೇಶಣ್ಣನ ಬೆಡ್ರೂಮಿಗೆ ಬಂದಿದ್ದಾಳೆ. ಅಲ್ಲಿ ಕವಾಟು ತೆರೆದು ನೋಡುತ್ತಾಳೆ. ಎಲ್ಲಾ ಸೆಂಟ್ ಬಾಟಲಿಗಳು ಅಲ್ಲಿ ಹಾಗೆಯೇ ಇವೆ. ಸುಗಂಧಿ ಅವುಗಳನ್ನೇ ದಿಟ್ಟಿಸಿ ನೋಡುತ್ತಾಳೆ. ಏನೋ ಸದ್ದಾದಂತಾಗುತ್ತದೆ. ಸುಗಂಧಿ ಗಾಬರಿಯಲ್ಲಿ ಹಿಂದೆ ತಿರುಗುತ್ತಾಳೆ. ಅಲ್ಲಿ ವೀಲ್ಚೇರಿನಲ್ಲಿರುವ ಶಂಕರಿಯಮ್ಮ ಇರುತ್ತಾರೆ. ಆಕೆ ಸುಗಂಧಿಯನ್ನೇ ದಿಟ್ಟಿಸಿ ನೋಡುತ್ತಿದ್ದಾರೆ. ಸುಗಂಧಿಯೂ ಆಕೆಯನ್ನೇ ನೋಡುತ್ತಾಳೆ. ಶಂಕರಿಯಮ್ಮನ ಮುಖದಲ್ಲಿ ಕೋಪವಿದ್ದರೆ, ಸುಗಂಧಿಯ ಮುಖದಲ್ಲಿ ಅಳುಕು, ಆತಂಕ. ಅಷ್ಟರಲ್ಲಿ ಆಚೆಯಿಂದ ತಟ್ಟೆಯಲ್ಲಿ ಊಟ ಹಿಡಿದಿರುವ ಪ್ರಮೀಳಾ ಬರುತ್ತಾಳೆ. ಆಕೆ ಶಂಕರಿಯಮ್ಮನಿಗೆ ತಿನ್ನಿಸಲು ಹೋದವಳು ಕೋಣೆಯೊಳಗೆ ಸುಗಂಧಿಯನ್ನು ಕಂಡು ಅಚ್ಚರಿಗೊಳ್ಳುತ್ತಾಳೆ. ಆದರೆ ಮಾತಿಲ್ಲ ಕಥೆಯಿಲ್ಲ. ಎಲ್ಲರೂ ಒಂದು ಅಸಹನೀಯ ಪರಿಸ್ಥಿತಿಯಲ್ಲಿ ನಿಂತಿದ್ದಾರೆ. ಪ್ರಮೀಳಾ ಮೊದಲು ಚೇತರಿಸಿಕೊಂಡು ಶಂಕರಿಯಮ್ಮನಿಗೆ ಊಟ ತಿನ್ನಿಸುತ್ತಾಳೆ.
ಸುಗಂಧಿಗೆ ತಲೆ ಸುತ್ತಿದಂತಾಗಿ ಆಕೆ ಕುಸಿಯುತ್ತಾಳೆ.
ಒಳಾಂಗಣ/ಹೊರಾಂಗಣ. ಆಸ್ಪತ್ರೆ - ಹಗಲು
ಸುಗಂಧಿಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಮಾಧವ ಹಾಗೂ ಇನ್ನು ಕೆಲವರು ಕಾಯುತ್ತಾ ಕೋಣೆಯಾಚೆ ಕುಳಿತಿದ್ದಾರೆ. ಮಾಮೂಲು ಚಟುವಟಿಕೆಗಳು ನಡೆಯುತ್ತಿವೆ. ಮಾಧವನಿಗೆ ಆತಂಕವಾಗುತ್ತದೆ. ಸುಗಂಧಿಗೆ ಏನಾಗಿದೆ ಎಂಬುದನ್ನು ಡಾಕ್ಟರ್ ವಿವರಿಸುತ್ತಾರೆ. ಇದನ್ನು ಮ್ಯೂಟ್ನಲ್ಲಿ ವಿಷುವಲ್ಸ್ ಮೂಲಕ ತೋರಿಸುತ್ತೇವೆ. ಮಗುವಿನ ಹೊಕ್ಕಳ ಬಳ್ಳಿ ಕುತ್ತಿಗೆ ಸುತ್ತಾ ಸುತ್ತಿದ್ದು ಮಗು ಹೊಟ್ಟೆಯೊಳಗೆ ಸತ್ತು ಹೋಗಿದೆ ಎಂಬುದಾಗಿ ವಿವರಿಸುತ್ತಾರೆ.
ಮಾಧವನಿಗೆ ಮಗು ತೀರಿಹೋಗಿತ್ತು ಎನ್ನುವಾಗ ಒಂದು ಭಾರೀ ಶಾಕ್ ಆಗುತ್ತದೆ. ಅವನ ಸುತ್ತ ಇದ್ದವರೂ ಶಾಕ್ ಆಗುತ್ತಾರೆ. ಅವರೆಲ್ಲರೂ ಮಾಧವನನ್ನು ಹಿಡಿದುಕೊಂಡು ಸಾಂತ್ವನಗೊಳಿಸುತ್ತಾರೆ. ಡಾಕ್ಟರ್ ಮಾತನಾಡುವುದು ಮುಂದುವರೆಸುತ್ತಾರೆ. ಆದರೆ ಎಲ್ಲವೂ ಸ್ಲೋಮೋಷನ್ನಿಗೆ ತಿರುಗುತ್ತದೆ. ಧ್ವನಿಗಳೆಲ್ಲವೂ ಮಂದ್ರವಾಗಿ ಹಿನ್ನೆಲೆಗೆ ಸರಿಯುತ್ತವೆ. ಮಾಧವನಿಗೆ ಸ್ಪಷ್ಟವಾಗಿ ಗಗ್ಗರದ ಧ್ವನಿ ಕೇಳಿಸುತ್ತಿದೆ. ಮಾಧವ ಆತಂಕ, ದುಃಖಃಗಳಿಂದ ಗಗ್ಗರದ ಧ್ವನಿಗಾಗಿ ಹುಡುಕುತ್ತಿದ್ದಾನೆ. (ಎಲ್ಲವೂ ಸ್ಲೋಮೋಷನ್ನಿನಲ್ಲಿ)
ಒಳಾಂಗಣ. ಮಾಧವ ಹಾಗೂ ಸುಗಂಧಿಯರ ಹೊಸ ಮನೆ - ಹಗಲು
ಮಾಧವ ಸುಗಂಧಿ ಪರಸ್ಪರ ತಬ್ಬಿಕೊಂಡು ಕುಳಿತಿದ್ದಾರೆ. ಮಾಧವ ಸುಗಂಧಿಗೆ ಮುತ್ತಿಡಲು ಮುಂದಾಗುತ್ತಾನೆ. ಆದರೆ ಸುಗಂಧಿ ಅದನ್ನು ನಿರಾಕರಿಸುತ್ತಾಳೆ. ಮಾಧವನಿಗೆ ಎಲ್ಲ ಕಳೆದುಕೊಂಡ ಭಾವ. ಅತ್ತು ಅತ್ತು ಇಬ್ಬರ ಕಣ್ಣುಗಳೂ ಕೆಂಪಾಗಿವೆ. ಮುಖಗಳು ಸೋತುಹೋಗಿವೆ. ಗಗ್ಗರದ ಶಬ್ದ ಆಗೊಮ್ಮೆ ಈಗೊಮ್ಮೆ ಕೇಳಿಸುತ್ತಿದೆ. ಜೊತೆಯಲ್ಲಿ ಮಳೆಯ ಶಬ್ದವೂ ಸೇರಿ ಲಯಬದ್ಧ, ಗಂಭೀರ ಸಂಗೀತವಾಗಿದೆ.
ಮಾಧವ
ದಿನೇಶಣ್ಣನನ್ನು ಕೊಂದ ಶಾಪ ನಮ್ಮನ್ನು ತಟ್ಟಿತು. ಶಂಕರಿಯಮ್ಮನ ಕಣ್ಣೀರಿನ ಬಿಸಿ ನಮಗೆ ತಟ್ಟಿದೆ. ಎಲ್ಲರ ಶಾಪ ನಮ್ಮ ಮಗುವಿನ ಮೇಲೆ ಬಿತ್ತು. ಒಂದು ಕಡೆ ಮೀನಿನ ಸೀಸನ್ ಕೂಡಾ ಕೈಕೊಟ್ಟಿತು. ಕಡಲು ನಮ್ಮ ಮನೆಯನ್ನು ಎಳ್ಕೊಂಡು ಹೋಯ್ತು. ಪಾಪ... ಮಂಜೇಶ, ಸಂಜೀವ, ರಾಕೇಶ... ಎಲ್ಲಾ ದೂರ... ದೂರಾ ಆದ್ರು...
ಸುಗಂಧಿ
ಇದಕ್ಕೆಲ್ಲಾ ನಾನು... ನಾನೇ ಕಾರಣ!
ಸುಗಂಧಿ ಅಳುವಿನಿಂದ ಗದ್ಗದಿತಳಾಗಿದ್ದಾಳೆ.
ಮಾಧವ ಅಳುಕುತ್ತಾನೆ. ಅಲ್ಲ ಎನ್ನುವಂತೆ ತಲೆಯಾಡಿಸುತ್ತಾನೆ. ಮಾತು ಹೊರಡುವುದಿಲ್ಲ. ಭೂತ ಕೋಲದ ಶಬ್ದ ಜೋರಾಗುತ್ತದೆ. ಸಿನೆಮಾದ ಮೊದಲ ದೃಶ್ಯದಲ್ಲಿ ಕೇಳಿಸಿದ ಮಾತುಗಳು ಮರುಕಳಿಸಲಾರಂಭಿಸುತ್ತವೆ.
ಹೊರಾಂಗಣ. ಭೂತಕೋಲದ ಸ್ಥಳ - ರಾತ್ರಿ
ಕೋಲ ನಡೆಯುತ್ತದೆ. ದುಃಖದ ಮಡುವಿನಲ್ಲಿರುವ ಮಾಧವ ಶೂನ್ಯವನ್ನೇ ನೋಡುತ್ತಾ ಕುಳಿತಿದ್ದಾನೆ. ಆಗ ಧುತ್ತನೆ ಮಾಧವನ ಎದುರಿನಲ್ಲಿ ದೈವ ಕಾಣಿಸಿಕೊಳ್ಳುತ್ತದೆ. ಮಾಧವ ದೈವದ ಕಾಲಿಗೆ ಬೀಳುತ್ತಾನೆ. ಅಳಲಾರಂಭಿಸುತ್ತಾನೆ.
ಈ ಅಮೂರ್ತ ಸಂದರ್ಭದಲ್ಲಿ, ಈಗ ಕೇವಲ ಅವನು ಮತ್ತು ದೈವ ಇರುವಂತೆ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಸುತ್ತಲೆಲ್ಲಾ ದಿವ್ಯವಾದ ಬೆಳಕು ತುಂಬಿದೆ. ಮಾಧವ ದೈನ್ಯದಿಂದ ದೈವವನ್ನು ಕೇಳುತ್ತಾನೆ..
ಮಾಧವ
ಮಾಯಗಾರ... ಇನ್ನೂ ನನ್ನನ್ಯಾಕೆ ಉಳಿಸಿದ್ದೀಯಾ? ಯಾವಾಗ ನನ್ನನ್ನು ನಿನ್ನ ಬಳಿಗೆ ಕರೆಸಿಕೊಳ್ಳುತ್ತೀಯಾ? ನಾನು ನಂಬಿದ ದೈವ... ಹೇಳು.. ಏಕೆ ನನ್ನ ಕೈಯಲ್ಲಿ ಹೀಗೆಲ್ಲಾ ಮಾಡಿಸಿದೆ?!
ದೈವ
(ಸಿಟ್ಟಿನಲ್ಲಿ ಕುದಿಯುತ್ತಾ, ಅಬ್ಬರಿಸುತ್ತಾ)
ಸಕಲವನ್ನೂ ಕಾಣುವ ಮಾಯಾಶಕ್ತಿ ನಾನು! ಹಾಗಿರುವಾಗ ನೀನು ಮಾಡಿದ ಪಾಪವನ್ನು ನನ್ನ ಮಡಿಲಿಗೆ ಹಾಕುತ್ತಿದ್ದೀಯಾ? ಸುಳ್ಳಾಡಬೇಡ!
ಮಾಧವ ಅಧೀರನಾಗುತ್ತಾನೆ. ಅವನಿಗೆ ತನ್ನ ತಪ್ಪಿನ ಅರಿವಾಗುತ್ತದೆ.
ಮಾಧವ
(ಅಳುತ್ತಾ ದೈವದ ಕಾಲು ಹಿಡಿಯುತ್ತಾನೆ)
ಇಲ್ಲ... ನಾನು ನನಗಾಗಿಯೇ ಇವನ್ನೆಲ್ಲಾ ಮಾಡಿದೆ. ಆದರೆ, ಮಾಡಿದ ಪಾಪದ ಹೊರೆಯನ್ನು ಹೊರಲಾಗುತ್ತಿಲ್ಲ. ನನಗೆ ಬಿಡುಗಡೆ ಕೊಡು ತಂದೆಯೇ... ನನ್ನ ಪ್ರಾಣವನ್ನು ಒಪ್ಪಿಸಿಕೋ...
ದೈವ
ಪಡ್ಡಾಯಿ ಕಡಲ ಕಂದ ನೀನು! ನಿನ್ನನ್ನು ಕರೆದೊಯ್ಯಲು ಆ ಕಡಲೇ ಬರುವುದು. ಅಲ್ಲಿಯವರೆಗೂ ನೀನು ಕಾಯಲೇ ಬೇಕು. ಅಲ್ಲಿಯವರೆಗೂ ನಿನ್ನ ಪಾಪಕ್ಕೆ ಪ್ರಾಯಃಶ್ಚಿತ ಮಾಡುತ್ತಿರಬೇಕು. ಇದುವೇ ನಿನ್ನ ಪಾಪಗಳಿಗೆ ಶಿಕ್ಷೆ!
ಭೂತ ಕೋಲದ ಇತರ ಧ್ವನಿಗಳು iರಳಿ ಕೇಳಿಸಲಾರಂಭಿಸುತ್ತವೆ (ಫೇಡ್ ಇನ್ - ವಾಸ್ತವಕ್ಕೆ ಮರಳುತ್ತಿರುವಂತೆ) ಭೂತ ಪಾತ್ರಧಾರಿ ಕೋಲ ಮುಂದುವರೆಸಿದ್ದಾನೆ. ಮಾಧವ ಪ್ರಜ್ಞೆ ತಪ್ಪಿ ನೆಲದಲ್ಲಿ ಬಿದ್ದಿದ್ದಾನೆ. ಊರವರು ಅವನ ಶುಶ್ರೂಶೆ ಮಾಡುತ್ತಿದ್ದಾರೆ.
ಒಳಾಂಗಣ. ಮಾಧವ ಹಾಗೂ ಸುಗಂಧಿಯರ ಹೊಸ ಮನೆ - ಸಂಜೆ
ಸುಗಂಧಿ ಮನೆಯಲ್ಲಿ ಏಕಾಂಗಿಯಾಗಿ ಕುಳಿತಿದ್ದಾಳೆ. ಆಕೆ ಎಲ್ಲವನ್ನೂ ಕಳೆದುಕೊಂಡ ಹತಾಶೆಯಲ್ಲಿದ್ದಾಳೆ. ಮಾಧವ ನಿಧಾನಕ್ಕೆ ಕೋಣೆಯನ್ನು ಪ್ರವೇಶಿಸುತ್ತಾನೆ. ಅವನು ಸುಗಂಧಿಯ ಪಕ್ಕದಲ್ಲಿ ಕುಳಿತು, ಆಕೆಯನ್ನು ತಬ್ಬಿಕೊಳ್ಳುತ್ತಾನೆ. ಇಬ್ಬರ ಕಣ್ಣಲ್ಲಿ ನಿರು ಉಕ್ಕಿ ಹರಿಯುತ್ತದೆ. ಈ ದೃಶ್ಯದ ಮೇಲೆಯೂ ಭೂತ ಕೋಲದ ಧ್ವನಿ ಮುಂದುವರೆದಿದೆ.
ಹೊರಾಂಗಣ. ಊರಿನ ಯಾವುದೋ ದಾರಿ - ಸಂಜೆ
ಐತ ಸೈಕಲ್ಲಿನಲ್ಲಿ ಜೋರಾಗಿ ಹೋಗುತ್ತಿದ್ದಾನೆ. ಅವನ ಹಿಂದಿನಿಂದಲೇ ಪೋಲೀಸ್ ಜೀಪ್ ಹೋಗುತ್ತಿದೆ. ಎದುರಿನಿಂದ ಒಂದು ಕಿಟಕಿಗೆಲ್ಲಾ ಕಪ್ಪು ಕನ್ನಡಿ ಹಾಕಿದ ಕಾರು ಹಾದು ಹೋಗುತ್ತದೆ.
ಕಿಟಕಿಗೆಲ್ಲಾ ಕಪ್ಪು ಕನ್ನಡಿ ಹಾಕಿದ ಕಾರು ಒಂದು ಊರಿನ ದಾರಿಗಳಲ್ಲಿ ಹೋಗುವುದನ್ನು ಕಾಣುತ್ತೇವೆ. ಅದು ಹೋಗಿ ದಿನೇಶಣ್ಣನ ಮನೆಯ ಮುಂದೆ ನಿಲ್ಲುತ್ತದೆ. ಕಾರಿನೊಳಗೆ ನೋಡಿದರೆ, ಅಲ್ಲಿ ಮಂಜೇಶ ಇದ್ದಾನೆ. ಅವನು ತನ್ನ ಮನೆಯನ್ನು ನೋಡಿ ಜೋರಾಗಿ ಅಳುತ್ತಿದ್ದಾನೆ. ದಿನೇಶಣ್ಣನ ಮನೆಯ ಹೊಸ್ತಿಲಲ್ಲಿ ಶಂಕರಿಯಮ್ಮನನ್ನು ಪ್ರಮೀಳಾ ನೋಡಿಕೊಳ್ಳುತ್ತಿದ್ದಾರೆ. ಸಂಜೀವ ಮಂಜೇಶನನ್ನು ಸಮಾಧಾನ ಮಾಡುವ ಪ್ರಯತ್ನದಲ್ಲಿದ್ದಾನೆ. ಆದರೆ ಅವನಿಗೂ ಕಣ್ಣಲ್ಲಿ ನೀರು.
ಹೊರಾಂಗಣ. ಸಮುದ್ರದ ದಡದಲ್ಲಿ ಒಂದು ಸ್ಥಳ - ಸಂಜೆ
ಇತ್ತ ಐತ ಸಮುದ್ರ ದಡಕ್ಕೆ ಬಂದು ನಿಲ್ಲುತ್ತಾನೆ. ಅಲ್ಲಿ ಒಂದು ಪೊದೆಯ ಸುತ್ತ ಜನ ಸೇರಿರುತ್ತಾರೆ. ಅಲ್ಲಿಗೆ ಇನ್ಸ್ಪೆಕ್ಟರ್ ರೂಪೇಶ್ ಹೋಗುತ್ತಾರೆ. ನೋಡಿದರೆ, ಅಲ್ಲಿ ರಾಕೇಶನ ಹೆಣ ಸಿಗುತ್ತದೆ! ಯಾರು ಕೊಂದದ್ದು, ಏಕಾಗಿ ಕೊಂದದ್ದು ನಾವು ಇಲ್ಲಿ ತೋರಿಸುವುದಿಲ್ಲ.
ಹೊರಾಂಗಣ. ಸಮುದ್ರ ದಡದಲ್ಲಿ ಒಂದು ದೋಣಿಯ ಬಳಿ - ಸಂಜೆ
ಮಾಧವ ಸಮುದ್ರದ ತೀರಕ್ಕೆ ಬಂದು ನಿಲ್ಲುತ್ತಾನೆ. ಒಳಗಿನಿಂದ ಒತ್ತರಿಸಿ ಬರುವ ದುಃಖವನ್ನು ಸಂಭಾಳಿಸುತ್ತಾ ಅವನು ಪಕ್ಕದಲ್ಲಿರುವ ದೋಣಿಯೊಂದನ್ನು, ಆಪ್ತವಾಗಿ ಸವರುತ್ತಾನೆ. ಕಡೆಗೆ ಆ ದೋಣಿಯನ್ನು ಹತ್ತಿ, ಮಗುವಿನಂತೆ ಮುದುಡಿ ಮಲಗುತ್ತಾನೆ. ಅಲ್ಲೇ ಆತ ಜೋರಾಗಿ ಅಳಲಾರಂಭಿಸುತ್ತಾನೆ.
ಒಳಾಂಗಣ/ಹೊರಾಂಗಣ. ಮಾಧವ ಹಾಗೂ ಸುಗಂಧಿಯರ ಹೊಸ ಮನೆ - ಸಂಜೆ
ಮಂಜೇಶ ಹಾಗೂ ಸಂಜೀವ ಈಗ ಮಾಧವನ ಮನೆಯ ಬಳಿಗೆ ಬಂದಿದ್ದಾರೆ. ಅವರು ಮಾಧವನಿಗಾಗಿ ಹುಡುಕಾಟ ಮಾಡುತ್ತಾರೆ. ಮನೆಯಿಡೀ ಹುಡುಕುತ್ತಾ ಸಾಗಬೇಕಾದರೆ, ಅಡುಗೆ ಮನೆಯಲ್ಲಿ ಸುಗಂಧಿ ಏಕಾಂಗಿಯಾಗಿ ಕುಳಿತಿರುವುದು ಕಾಣುತ್ತದೆ. ಆಕೆ ಎಲ್ಲೋ ಶೂನ್ಯದಲ್ಲಿ ದೃಷ್ಟಿ ನೆಟ್ಟು, ಹತಾಶಳಾಗಿ ಕುಳಿತಿದ್ದಾಳೆ. ಆಕೆಯನ್ನು ನೋಡಿ, ಸಂಜೀವ ಹಾಗೂ ಮಂಜೇಶನಿಗೆ ಅಸಹ್ಯವಾಗುತ್ತದೆ.
ಸಂಜೀವ
ಮಾಧವ ಎಲ್ಲಿ?
ಸುಗಂಧಿ ಏನನ್ನೂ ಹೇಳದೇ ಇವರಿಬ್ಬರನ್ನೂ ನೋಡಿ ಗಾಬರಿಯಲ್ಲಿ ಕೂರುತ್ತಾಳೆ. ಸಂಜೀವ ಮತ್ತು ಮಂಜೇಶ ಪರಸ್ಪರ ಮುಖ ನೋಡುತ್ತಾರೆ. ಸುಗಂಧಿಯ ಮುಖದಲ್ಲಿ ನೂರು ಭಾವ ಹಾದು ಹೋಗುತ್ತದೆ. ಆಕೆಗೆ ಕಳೆದ ಎಲ್ಲಾ ಘಟನೆಗಳು ಒಮ್ಮೆ ನೆನಪಾದಂತೆ ಭಾಸವಾಗುತ್ತದೆ.
ಹೊರಾಂಗಣ. ಸಮುದ್ರ ದಡದಲ್ಲಿ ಒಂದು ದೋಣಿಯ ಬಳಿ - ಸಂಜೆ
ಮಂಜೇಶ ಹಾಗೂ ಸಂಜೀವ ಸಮುದ್ರ ದಡಕ್ಕೆ ಬಂದು ಅಲ್ಲಿ ಬೋಟುಗಳನ್ನು ಹುಡುಕುತ್ತಾ ಹೋಗುತ್ತಾರೆ. ಒಂದು ಕಡೆಗೆ ಬಂದು ನಿಲ್ಲುವ ಸಂಜೀವನಿಗೆ ಬೋಟಿನಲ್ಲಿ ಮಲಗಿರುವ ಮಾಧವನನ್ನು ಕಾಣುತ್ತದೆ. ಅವನು ಸಂಜ್ಞೆಯಲ್ಲೇ ಮಂಜೇಶನನ್ನು ಕರೆಯುತ್ತಾನೆ. ಬೋಟಿನಲ್ಲಿ ಮುರುಟಿ ಮಲಗಿರುವ ಮಾಧವನನ್ನು ಇಬ್ಬರೂ ಕಾಣುತ್ತಾರೆ. ಮಾಧವ ಕಣ್ಣು ತೆರೆಯುತ್ತಾನೆ. ಮಂಜೇಶ ಹಾಗೂ ಸಂಜೀವನನ್ನು ಕಂಡು ಅವನಿಗೆ ಗಾಬರಿಯಾಗುತ್ತದೆ. ಆತ ಎದ್ದು ಕೂರುತ್ತಾನೆ. ಅವರು ಮೂವರ ಮಧ್ಯ ಒಂದು ಅಸಹನೀಯ ಮೌನವಿದೆ.
ಮಾಧವ ಭಯಗೊಂಡಿದ್ದವನು ನಿಧಾನಕ್ಕೆ ಮುಗುಳ್ನಗೆಗೆ ತಿರುಗುತ್ತಾನೆ. ಅವನಿಗೆ ವಿಧಿ, ಇವರಿಬ್ಬರ ರೂಪದಲ್ಲಿ, ತನ್ನನ್ನು ಆಹುತಿ ತೆಗೆದುಕೊಳ್ಳಲು ಬಂದಿರುವುದು ಸ್ಪಷ್ಟವಾಗಿದೆ. ಅವನು ಯಾವುದೇ ಪ್ರತಿಭಟನೆ ಮಾಡದೇ, ವಿಧಿಯ ಕೈಗಳಿಗೆ ತನ್ನನ್ನು ತಾನೇ ಅರ್ಪಿಸಿಕೊಳ್ಳುತ್ತಾನೆ. ಸಂಜೀವ ಮಾಧವನನ್ನು ನೂಕುತ್ತಾನೆ. ಮಾಧವ ದೋಣಿಯಿಂದಾಚೆ ಬೀಳುತ್ತಾನೆ.
ಮಾಧವ ಇನ್ನೂ ಮುಗುಳ್ನಗುತ್ತಿದ್ದಾನೆ. ಮಂಜೇಶನೂ ಈಗ ಮಾಧವನಿಗೆ ಹೊಡೆಯುತ್ತಾನೆ. ಮಾಧವ ಮತ್ತೆ ಕೆಳಗೆ ಬೀಳುತ್ತಾನೆ. ಮಾಧವ ಮುಗುಳ್ನಗುತ್ತಿದ್ದಾನೆ. ಅವನು ನೋವು ತಿನ್ನಲು ಸಿದ್ಧನಿದ್ದಾನೆ, ಸಾವಿಗಾಗಿ ಕಾಯುತ್ತಿದ್ದಾನೆ ಎನ್ನುವಂಥಾ ಭಾವ ಅವನ ಮುಖದಲ್ಲಿ. ಮಾಧವ, ಸಂಜೀವ ಹಾಗೂ ಮಂಜೇಶರ ಮಧ್ಯದಲ್ಲಿ ಹೊಡೆದಾಟ ನಡೆಯುತ್ತದೆ. ಮರಳಲ್ಲಿ ಬಿದ್ದು, ಹೊಡೆದಾಡಿಕೊಳ್ಳುತ್ತಾರೆ. ಈ ಹೊಡೆದಾಟದ ಕೊನೆಯಲ್ಲಿ, ಮಾಧವನನ್ನು ಮಂಜೇಶ ಹಾಗೂ ಸಂಜೀವ ಸೇರಿಕೊಂಡು ಬಲೆಯಲ್ಲಿ ಕಟ್ಟಲಾರಂಭಿಸುತ್ತಾರೆ.
ಒಳಾಂಗಣ. ಮಾಧವ ಹಾಗೂ ಸುಗಂಧಿಯರ ಹೊಸ ಮನೆ - ರಾತ್ರಿ
ಸುಗಂಧಿ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಾಣುತ್ತೇವೆ. (ಈ ದೃಶ್ಯ ಹಿಂದೆ ಸುಗಂಧಿ ನರಳುತ್ತಾ ರಕ್ತದ ಮಡುವಿನಲ್ಲಿ ಬಿದ್ದಿದ್ದ ಹಾಗೇ ಇರಬೇಕು. ಇದು ನಿಜವೇ ಅವಳ ಭ್ರಮೆಯೇ ತಿಳಿಯದಂತಿರಬೇಕು.)
ಹೊರಾಂಗಣ. ಸಮುದ್ರದ ಮಧ್ಯದಲ್ಲೆಲ್ಲೋ - ನಸುಬೆಳಗ್ಗೆ
ಮಾಧವ ತಂಪುಗಾಳಿಗೆ ನಿಧಾನಕ್ಕೆ ಹಾಗೇ ಏಳುತ್ತಾನೆ. ನೋಡಿದರೆ ದೋಣಿಯೊಳಗೆ ನೀರು ನಿಧಾನಕ್ಕೆ ಏರುತ್ತಿದೆ. ಫಕ್ಕನೆ ಅವನಿಗೆ ತನ್ನ ಕೈ-ಕಾಲುಗಳನ್ನು ಕಟ್ಟಿಹಾಕಲಾಗಿದೆ ಎನ್ನುವುದು ಅರಿವಿಗೆ ಬರುತ್ತದೆ. ಒಂದು ಕಾಲದಲ್ಲಿ ದಿನೇಶಣ್ಣನೇ ಮಾಧವನಿಗೆ, ಅವನ ಬಾಳು ಕಟ್ಟಿಕೊಳ್ಳಲಿ ಎಂದು ಉದಾರವಾಗಿ ಕೊಟ್ಟಿದ್ದ ಬಲೆಯೇ ಅದು. ಅದರಲ್ಲಿಯೇ ಈಗ ಅವನ ಕೈ-ಕಾಲುಗಳನ್ನು ಕಟ್ಟಿಹಾಕಲಾಗಿದೆ! ಮಾಧವ ಎಚ್ಚೆತ್ತು ಏನಾಗಿದೆ ಎಂದು ನೋಡಿದರೆ, ಅವನು ಸಮುದ್ರದ ಮಧ್ಯದಲ್ಲಿದ್ದಾನೆ. ಅವನ ದೋಣಿಗೆ ರಂಧ್ರ ಕೊರೆಯಲಾಗಿದೆ! ನೀರು ನಿಧಾನವಾಗಿ ಒಳಗೆ ನುಗ್ಗುತ್ತಿದೆ. ಹುಟ್ಟೂ ಇಲ್ಲ. ಅವನಿಗೆ ಸಮುದ್ರ ನನ್ನನ್ನು ತಿನ್ನುತ್ತಿದೆ ಎಂದು ಅನಿಸಲಾರಂಭಿಸುತ್ತದೆ. ಮೊದಲು ಗಾಬರಿಯಾಗುವ ಮಾಧವ, ಮತ್ತೆ ತನ್ನ ಬಿಡುಗಡೆಯ ಸಮಯ ಸನಿಹವಾಗಿದೆ ಎಂದು ಅರಿವಾಗಿ, ಸಂಭ್ರಮಿಸಲಾರಂಭಿಸುತ್ತಾನೆ. ಸಾವಿನ ಭಯ, ಪಾಪದ ಹೊರೆ, ಅವನನ್ನು ವಿಕಾರವಾಗಿಸಿದೆ.
ಮಾಧವ
(ಅಸಂಬದ್ದವಾಗಿ ಅಬ್ಬರಿಸಲಾರಂಭಿಸುತ್ತಾನೆ)
ನನ್ನನ್ನು ಕಡಲು ಸೆಳೆಯುತ್ತಿದೆ.. ಕಡಲ ಮಗನಿಗೆ ಕಡಲೇ ಆಸರೆ! ಕಡಲ ಗುಳಿಗನಿಗೆ ಕಡಲೇ ಆಸರೆ! ಇದು ಬಿಡುಗಡೆಯ ಎಳೆತ.. ಕಡಲು... ಕಡಲು..!
ಹೊರಾಂಗಣ. ಮೀನುಗಾರರ ಹಳ್ಳಿ - ಬೆಳಗ್ಗೆ
ಐತ ಕಳಿ ಇಳಿಸಿ ಮರದಿಂದ ನಿಧಾನಕ್ಕೆ ಇಳಿಯುತ್ತಿದ್ದಾನೆ. ಮೀನುಗಾರರ ಹಳ್ಳಿಯಲ್ಲಿ ಮತ್ತೆ ಬೆಳಗಾಗುತ್ತಿದೆ. ಐತ ಮರದಿಂದ ಕೆಳಗಿಳಿದು, ಹಾಗೇ ಸಮುದ್ರ ತೀರದಲ್ಲಿ ಸೈಕಲ್ ತುಳಿಯುತ್ತಾ ಸಾಗುತ್ತಾನೆ. ಸಮುದ್ರದ ನೀರಿನಲ್ಲಿ ಕೊಚ್ಚಿ ಬಂದ ಒಂದು ಚಪ್ಪಲಿ ಹಾಗೇ ದಡದಲ್ಲಿ ತೇಲುತ್ತಿರುತ್ತದೆ. ಐತ ಸೈಕಲ್ ತುಳಿಯುತ್ತಾ ಹಾಗೇ ಸಾಗಿ ಬಿಡುತ್ತಾನೆ. ಎಂಡ್ ಟೈಟಲ್ ಆರಂಭವಾಗುತ್ತದೆ.